ಜನಸಂಖ್ಯಾ ಸ್ಫೋಟ ತಡೆಯಲು ಕಾನೂನು ರೂಪಿಸುವಂತೆ ಪಿಐಎಲ್‌: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

population
  • ಬಲವಂತದ ಕುಟುಂಬ ಯೋಜನೆಗೆ ವಿರುದ್ಧ ಎಂದಿದ್ದ ಕೇಂದ್ರ 
  • ಶೇಕಡಾ 50ರಷ್ಟು ಸಮಸ್ಯೆಗಳಿಗೆ ಜನಸಂಖ್ಯಾ ಸ್ಫೋಟವೇ ಕಾರಣ

ದೇಶದಲ್ಲಿ `ಜನಸಂಖ್ಯಾ ಸ್ಫೋಟ' ತಡೆಯಲು ಕಾನೂನು ರೂಪಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿ ನೋಟಿಸ್‌ ನೀಡಿದೆ. 

ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಜೆ ಕೆ ಮಹೇಶ್ವರಿ ಅವರನ್ನೊಳಗೊಂಡ ಪೀಠ, ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಇದೇ ರೀತಿಯ ಮನವಿಯನ್ನು ಇದೇ ಅರ್ಜಿಯೊಂದಿಗೆ ವಿಚಾರಣೆ ನಡೆಸಲು ನಿರ್ಧರಿಸಿತು. ವಕೀಲ ಅಶುತೋಷ್ ದುಬೆ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಮನವಿಯ ಪ್ರಮುಖ ಅಂಶಗಳು

  • ಶೇಕಡಾ 50ರಷ್ಟು ಸಮಸ್ಯೆಗಳಿಗೆ ಜನಸಂಖ್ಯಾ ಸ್ಫೋಟವೇ ಕಾರಣ. ಆದರೆ, ಜನಸಂಖ್ಯಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುತ್ತಿದೆ. 
  • ಸಂವಿಧಾನದ 14, 19, 21, 21ಎ ವಿಧಿಗಳ ಮೂಲಕ ಒದಗಿಸಲಾದ ಮೂಲಭೂತ ಹಕ್ಕುಗಳನ್ನು ಮುಖ್ಯವಾಗಿ ಕಾನೂನಿನ ಆಡಳಿತ, ಗಾಳಿ, ನೀರು, ಆಹಾರದ ಹಕ್ಕುಗಳು, ಆರೋಗ್ಯದ ಹಕ್ಕು, ನಿದ್ದೆಯ ಹಕ್ಕು, ಆಶ್ರಯದ ಹಕ್ಕು, ಜೀವಿಸುವ ಹಕ್ಕು, ನ್ಯಾಯ ಪಡೆಯುವ ಹಕ್ಕು, ಶಿಕ್ಷಣದ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಕಟ್ಟುನಿಟ್ಟಾದ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೊಳಿಸುವ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರಕ್ಕೆ ನಿರ್ದೇಶಿಸಬೇಕು.
  • ಪರ್ಯಾಯವಾಗಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜನಸಂಖ್ಯೆ ನಿಯಂತ್ರಣ ಕಾನೂನುಗಳು ಮತ್ತು ಜನಸಂಖ್ಯೆ ನಿಯಂತ್ರಣ ನೀತಿಗಳನ್ನು ಪರಿಶೀಲಿಸಲು ಮತ್ತು ಮೂಲಭೂತ ಹಕ್ಕುಗಳನ್ನು ಪಡೆಯಬೇಕಾದರೆ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸೂಚಿಸುವಂತೆ ದೇಶದ ಕಾನೂನು ಆಯೋಗಕ್ಕೆ ಸೂಚಿಸಬೇಕು (ಮೇಲಿನ ಎರಡೂ ಅಂಶಗಳ ಕುರಿತು ಮ್ಯಾಂಡಮಸ್‌ ರಿಟ್‌ ಹೊರಡಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ).
  • ಬಲವಂತದ ಕುಟುಂಬ ಯೋಜನೆಗಳಿಗೆ ತಾನು ವಿರುದ್ಧ ಎಂದು ಕೇಂದ್ರ ಸರ್ಕಾರ ಡಿಸೆಂಬರ್ 2020ರಲ್ಲಿ ಹೇಳಿದ್ದು, ಇದರಿಂದ ಸಮಸ್ಯೆಗಳು ಇನ್ನಷ್ಟು ಹೆಚ್ಚಿವೆ.
  • ಅನೇಕ ಬಾರಿ ಗರ್ಭ ಧರಿಸುವುದರಿಂದ ತಾಯಂದಿರು ಮತ್ತು ಶಿಶುಗಳ ಆರೋಗ್ಯದ ಮೇಲೆ ಮಾತ್ರವಲ್ಲದೆ, ದೇಶದ ಬಹುತೇಕ ಬಡವರ ಮೇಲೂ ಪರಿಣಾಮ ಬೀರಲಿದೆ.
  • ತೆರಿಗೆ ಪಾವತಿಸುವ ನಾಗರಿಕರು ಮಾತ್ರ ಪ್ರತಿ ಕುಟುಂಬಕ್ಕೆ ಎರಡು ಮಕ್ಕಳ ಸೂತ್ರ ಪಾಲಿಸುತ್ತಿದ್ದಾರೆ. ಆದರೆ, ತೆರಿಗೆದಾರರ ಅನುದಾನದಿಂದ ರೂಪುಗೊಂಡ ಸಬ್ಸಿಡಿಗಳ ಪ್ರಯೋಜನ ಪಡೆಯುತ್ತಿರುವವರು ಆ ನಿಯಮ ಪಾಲಿಸುತ್ತಿಲ್ಲ. ಕುಟುಂಬ ಯೋಜನೆ ಮತ್ತು ಗರ್ಭನಿರೋಧಕಗಳ ಬಳಕೆ ಅಂತಹವರಿಗೆ ಐಚ್ಛಿಕವಾಗಿ ಉಳಿಯಬಾರದು.
  • ಕಳ್ಳತನ, ಡಕಾಯಿತಿ, ದೋಚುವಿಕೆ, ಕೌಟುಂಬಿಕ ಹಿಂಸೆ, ಮಹಿಳೆಯರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ, ಪ್ರತ್ಯೇಕತಾವಾದ, ಮತಾಂಧತೆ, ಕಲ್ಲು ತೂರಾಟ ಇತ್ಯಾದಿಗಳಿಗೆ ಜನಸಂಖ್ಯಾ ಸ್ಫೋಟ ಮೂಲ ಕಾರಣವಾಗಿದೆ. ಶೇಕಡಾ 80ರಷ್ಟು ಅಪರಾಧಿಗಳು ಮತ್ತು ಅವರ ಪೋಷಕರು 'ನಾವಿಬ್ಬರು ನಮಗಿಬ್ಬರು' ಎಂಬ ನೀತಿ ಅನುಸರಿಸಿಲ್ಲ. ಕಳ್ಳರು, ಡಕಾಯಿತರು, ದರೋಡೆಕೋರರು, ಅತ್ಯಾಚಾರಿಗಳು ಹಾಗೂ ಕೂಲಿಗಳ ಬಗ್ಗೆ ನಡೆಸಿದ ಸಮೀಕ್ಷೆಯಿಂದ ಈ ಅಂಶವು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ?: ಉಪ ಲೋಕಾಯುಕ್ತ ಹುದ್ದೆ ಭರ್ತಿ ವಿಚಾರ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

  • ಮೂಲಭೂತ ಹಕ್ಕುಗಳು ಜಾರಿಯಾಗುವಂತೆ ನೋಡಿಕೊಳ್ಳುವ ಮತ್ತು ನೊಂದವರಿಗೆ ಸಂಪೂರ್ಣ ನ್ಯಾಯ ಒದಗಿಸುವ ಸಲುವಾಗಿ ಹೊಸ ಹೊಣೆಗಾರಿಕೆಯ ತತ್ವಗಳನ್ನು ವಿಕಾಸಗೊಳಿಸಲು ಸುಪ್ರೀಂ ಕೋರ್ಟ್‌ಗೆ ಅಧಿಕಾರವಿದೆ.
ನಿಮಗೆ ಏನು ಅನ್ನಿಸ್ತು?
0 ವೋಟ್