
- ಋಣ ಪರಿಹಾರ ಸಾಮರ್ಥ್ಯ ಪತ್ರ ಸಲ್ಲಿಸುವ ಅಗತ್ಯವಿಲ್ಲ
- ಸಾಕಷ್ಟು ದಾಖಲೆ ನೀಡುವಂತೆ ಒತ್ತಾಯಿಸಬಾರದು
ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಗೌತಮ್ ನವ್ಲಾಖಾ ಅವರನ್ನು ಗೃಹ ಬಂಧನದಲ್ಲಿ ಇರಿಸಲು ಇದ್ದ ಅಡೆತಡೆಯನ್ನು ಸುಪ್ರೀಂ ಕೋರ್ಟ್ ನಿವಾರಿಸಿದೆ. ಅಲ್ಲದೆ, ಋಣ ಪರಿಹಾರ ಸಾಮರ್ಥ್ಯ ಪತ್ರ (ಸಾಲ್ವೆನ್ಸಿ ಸರ್ಟಿಫಿಕೇಟ್) ಸಲ್ಲಿಸುವ ಅಗತ್ಯವಿಲ್ಲ ಎಂದೂ ಹೇಳಿದೆ.
ನವೆಂಬರ್ 10ರಂದು ನವ್ಲಾಖಾ ಅವರನ್ನು ಗೃಹ ಬಂಧನದಲ್ಲಿ ಇರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಈ ವೇಳೆ, ನವ್ಲಾಖಾ ಅವರು ನ.14ರೊಳಗೆ 2 ಲಕ್ಷ ರೂಪಾಯಿಯ ಶ್ಯೂರಿಟಿ ನೀಡಬೇಕು ಎಂದೂ ಸೂಚಿಸಿತ್ತು.
ಆದರೆ, "ಶ್ಯೂರಿಟಿ ಸಂಬಂಧ ʼಋಣ ಪರಿಹಾರ ಸಾಮರ್ಥ್ಯ ಪತ್ರʼ ಪಡೆಯಲು ಕನಿಷ್ಠ ಆರು ವಾರಗಳು ಬೇಕಾಗುತ್ತವೆ" ಎಂದು ಅರ್ಜಿದಾರರ ಪರ ವಕೀಲರಾದ ನಿತ್ಯಾ ರಾಮಕೃಷ್ಣನ್ ಮತ್ತು ಶದನ್ ಫರಾಸತ್ ಅವರು ಸುಪ್ರೀಂ ಕೋರ್ಟ್ಗೆ ತಿಳಿಸಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಹೃಷಿಕೇಶ್ ಅವರಿದ್ದ ಪೀಠವು, "ಈಗಿನ ಸಂದರ್ಭ ಪರಿಗಣಿಸಿ, ನ.10ರ ನಮ್ಮ ಆದೇಶವನ್ನು ಪಡೆಯಲು ಅರ್ಜಿದಾರರಿಗೆ (ನವ್ಲಾಖಾ) ಋಣ ಪರಿಹಾರ ಸಾಮರ್ಥ್ಯ ಪತ್ರ ಮನ್ನಾ ಮಾಡುವುದು ಸೂಕ್ತ" ಎಂದು ಅಭಿಪ್ರಾಯಪಟ್ಟಿತು.
"ನವ್ಲಾಖಾ ಅವರು ಪಾಸ್ಪೋರ್ಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ನಂತರ ಸಾಕಷ್ಟು ದಾಖಲೆಗಳನ್ನು ಒದಗಿಸಿದ್ದಾರೆ. ಹಾಗಾಗಿ, ಅಧೀನ ನ್ಯಾಯಾಲಯವು ಪಡಿತರ ಚೀಟಿ ನೀಡುವಂತೆ ಒತ್ತಾಯಿಸಬಾರದು" ಎಂದು ಪೀಠ ಆದೇಶಿಸಿದೆ.
ನವೆಂಬರ್ 10ರಂದು ನವ್ಲಾಖಾ ಅವರನ್ನು ಗೃಹ ಬಂಧನದಲ್ಲಿ ಇರಿಸಲು ಹಲವಾರು ಷರತ್ತುಗಳೊಂದಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಜತೆಗೆ, ಈ ಸಂಬಂಧ 48 ಗಂಟೆಗಳ ಒಳಗೆ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿತ್ತು.
ತಾವು ಚರ್ಮದ ಅಲರ್ಜಿ, ಹಲ್ಲಿನ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಹೇಳಿದ್ದ ನವ್ಲಾಖಾ ಅವರು, ಕ್ಯಾನ್ಸರ್ಗೆ ತುತ್ತಾಗಿರುವ ಸಾಧ್ಯತೆಯಿದ್ದು, ಪತ್ತೆ ಹಚ್ಚುವಿಕೆಗಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಿದೆ ಎಂದು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದರು.
2017, ಡಿಸೆಂಬರ್ 31ರ ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಏಪ್ರಿಲ್ನಲ್ಲಿ ಪತ್ರಕರ್ತ ಗೌತಮ್ ನವ್ಲಾಖಾ ಸೇರಿ ಹಲವರನ್ನು ಬಂಧಿಸಲಾಗಿತ್ತು. ನವ್ಲಾಖಾ ಅವರನ್ನು ಆರಂಭದಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ನಂತರ ಬಂಧಿಸಿ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಲಾಗಿದೆ.
ತಮ್ಮನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವ ಬದಲು ಗೃಹ ಬಂಧನದಲ್ಲಿ ಇರಿಸಬೇಕು ಎಂದು ಕೋರಿ ನವ್ಲಾಖಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರು ನಿರಾಕರಿಸಿದ್ದರು.
ಇದಕ್ಕೂ ಮುನ್ನ, ಏಪ್ರಿಲ್ 26ರಂದು ಬಾಂಬೆ ಹೈಕೋರ್ಟ್ ತಮ್ಮ ಅರ್ಜಿ ವಜಾಗೊಳಿಸಿದ್ದನ್ನು ಪ್ರಶ್ನಿಸಿ ನವ್ಲಾಖಾ ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. "ಈ ಜೈಲು ಕೈದಿಗಳಿಂದ ತುಂಬಿ ತುಳುಕುತ್ತಿದೆ. ಜೈಲಿನ ಪರಿಸ್ಥಿತಿ ಮತ್ತು ವಾತಾವರಣವು ಆರೋಗ್ಯಕ್ಕೆ ಪೂರಕವಾಗಿ ಇಲ್ಲ" ಎಂದು ನವ್ಲಾಖಾ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ; ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಏನಿದು ಪ್ರಕರಣ?
"ಡಿಸೆಂಬರ್ 31, 2017ರಂದು ಮಹಾರಾಷ್ಟ್ರದ ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಮರುದಿನ ನಗರದ ಹೊರವಲಯದಲ್ಲಿರುವ ಭೀಮಾ-ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಕಾರಣವಾಯಿತು" ಎಂದು ಪೊಲೀಸರು ಆರೋಪಿಸಿದ್ದರು.
ಪುಣೆ ಪೊಲೀಸರು ಸಮಾವೇಶಕ್ಕೆ ಮಾವೋವಾದಿಗಳ ಬೆಂಬಲವಿದೆ ಎಂದು ಹೇಳಿದ್ದರು. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು.