ಎಸ್‌ಡಿಎ ನೇಮಕಾತಿ | ಬ್ಲೂಟೂತ್‌ ಬಳಸಿ ಅಕ್ರಮ ಎಸಗಿರುವುದು ಸಾಬೀತು; ಮೂವರು ಡಿಬಾರ್‌

exam
  • ಬ್ಲೂ ಟೂತ್‌, ಮೈಕ್ರೋಫೋನ್‌ ಬಳಸಿ ಅಕ್ರಮ ನಡೆಸಿರುವುದು ಬೆಳಕಿಗೆ
  • ಇನ್ನಷ್ಟು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ

ಪಿಎಸ್‌ಐ ನೇಮಕಾತಿ ಹಗರಣದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. 2021ರ ಸೆಪ್ಟೆಂಬರ್ 19ರಂದು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) 1,323 ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಬ್ಲೂ ಟೂತ್‌ ಮತ್ತು ಮೈಕ್ರೋಫೋನ್‌ ಬಳಸಿ ಅಕ್ರಮ ನಡೆಸಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಅಕ್ರಮದಲ್ಲಿ ಅಭ್ಯರ್ಥಿಗಳಾದ ಆನಂದ್ ಎಚ್‌ ಅಮಜಿಗೋಳ್, ಬಾಬಣ್ಣ ಕೆ ವಡ್ಡರ್‌, ವಿಠಲ ಹುಲಗಬಾಳ ಭಾಗಿಯಾಗಿರುವುದು ಸಾಬೀತಾಗಿದೆ ಎಂದು ಕೆಪಿಎಸ್‌ಸಿ ನೇಮಿಸಿದ್ದ ವಿಚಾರಣಾ ಅಧಿಕಾರಿ ವರದಿ ನೀಡಿದ್ದಾರೆ. ಈ ವರದಿ ಆಧರಿಸಿ ಇನ್ನು ಮುಂದೆ ಈ ಮೂವರೂ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಕೆಪಿಎಸ್‌ಸಿ ಡಿಬಾರ್‌ ಮಾಡಿದೆ. ಇನ್ನೂ ಹಲವು ಅಭ್ಯರ್ಥಿಗಳು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ವಿಚಾರಣೆ ಮುಂದುವರಿದಿದೆ.

ಎಸ್‌ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದ ಬೆನ್ನಲ್ಲೇ, ಇನ್ನಷ್ಟು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ. ತನಿಖೆ ಮುಂದುವರಿಸಬೇಕು ಎಂದು ಎಸ್‌ಡಿಎ ಉದ್ಯೋಗಾಕಾಂಕ್ಷಿಗಳು ಒತ್ತಾಯಿಸಿದ್ದಾರೆ. 

ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಬಿವಿವಿ ಸಂಘದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆನಂದ್ ಎಚ್‌ ಅಮಜಿಗೋಳ್, ಬೆಳಗಾವಿಯ ಅಂಜುಮನ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಬಾಬಣ್ಣ ಕೆ ವಡ್ಡರ್‌, ಬಾಗಲಕೋಟೆಯ ಶಂಕರಪ್ಪ ಸಕ್ರಿ ಪಿಯು ಕಾಲೇಜಿನಲ್ಲಿ ವಿಠಲ ಹುಲಗಬಾಳ ಪರೀಕ್ಷೆಗೆ ಹಾಜರಾಗಿದ್ದರು.

ಈ ಮೂವರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಕೊಠಡಿ ಮೇಲ್ವಿಚಾರಕರು ಹಾಗೂ ಜಿಲ್ಲಾಧಿಕಾರಿ ಅವರು ಕೆಪಿಎಸ್‌ಸಿಗೆ ವರದಿ ಸಲ್ಲಿಸಿದ್ದರು. ವರದಿಯ ಮೇರೆಗೆ ಮೂವರಿಗೂ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಅಲ್ಲದೆ, ಆಯಾ ಕೇಂದ್ರಗಳ ವ್ಯಾಪ್ತಿಯ ಠಾಣೆಗಳಲ್ಲಿ ದೂರು ದಾಖಲಿಸಲಾಗಿತ್ತು. ಆದರೆ, ಆರೋಪಿಗಳು ಈ ಆರೋಪಗಳನ್ನು ತಳ್ಳಿ ಹಾಕಿದ್ದರು.

ಈ ಸುದ್ದಿ ಓದಿದ್ದೀರಾ?: ರಾಜ್ಯಪಾಲರ ಹೆಸರಲ್ಲಿ ವಂಚಿಸುತ್ತಿದ್ದ ಬಳ್ಳಾರಿ ಮೂಲದ ವ್ಯಕ್ತಿಯನ್ನು ಬಂಧಿಸಿದ ಸಿಸಿಬಿ

ಹಾಗಾಗಿ, ಸತ್ಯಾಂಶ ಪರಿಶೀಲಿಸಲು ಕೆಪಿಎಸ್‌ಸಿ ವಿಚಾರಣಾಧಿಕಾರಿಯನ್ನು ನೇಮಿಸಿತ್ತು. ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳ ಸಹಿತ ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿ ವಿಚಾರಣಾಧಿಕಾರಿ ವರದಿ ನೀಡಿದ್ದರು. ವರದಿ ಆಧರಿಸಿ ಈ ಮೂವರೂ ಇನ್ನು ಮುಂದೆ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಡಿಬಾರ್‌ ಮಾಡಿ ಕೆಪಿಎಸ್‌ಸಿ ಆದೇಶಿಸಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್