ಏಕರೂಪದ ಸುರಕ್ಷತಾ ಮಾನದಂಡ; ಏಪ್ರಿಲ್‌ 1ರಿಂದ ಎಲೆಕ್ಟ್ರಿಕ್‌ ವಾಹನಗಳ ಪರೀಕ್ಷೆ

  • ಇವಿ ಮತ್ತು ಎಚ್‌ಇವಿಎಸ್‌ ವಾಹನಗಳ ಪರೀಕ್ಷೆ ಮತ್ತು ಪ್ರಮಾಣೀಕರಣ
  • ಇವಿ ಪರೀಕ್ಷೆಗೆ ಅಗತ್ಯ ಮೂಲಭೂತ ಸೌಕರ್ಯ ಸ್ಥಾಪಿಸಲಿರುವ ಸರ್ಕಾರ

ಎಲೆಕ್ಟ್ರಿಕ್ (ಇವಿ) ಮತ್ತು ಹೈಬ್ರಿಡ್ ವಾಹನಗಳ (ಎಚ್‌ಇವಿಎಸ್‌) ಪರೀಕ್ಷೆ, ಪ್ರಮಾಣೀಕರಣ ಮತ್ತು ಅಭಿವೃದ್ಧಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಸ್ಥಾಪಿಸಲು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯವು ಆಟೋಮೋಟಿವ್‌ ರಿಸರ್ಚ್‌ ಅಸೋಸಿಯೇಷನ್‌ ಆಫ್‌ ಇಂಡಿಯಾಗೆ (ಎಆರ್‌ಎಐ) ₹44 ಕೋಟಿ ಹಣ ಮಂಜೂರು ಮಾಡಿರುವುದಾಗಿ ತಿಳಿದುಬಂದಿದೆ.

ಇದೇ ಮೊದಲ ಬಾರಿಗೆ ಭಾರತವು ಮುಂದಿನ ವರ್ಷ ಏಪ್ರಿಲ್ 1ರಿಂದ ಎಲೆಕ್ಟ್ರಿಕ್ ವಾಹನಗಳ ಪರೀಕ್ಷೆ ಪ್ರಾರಂಭಿಸಲು ಸಜ್ಜಾಗಿದೆ. ಬ್ಯಾಟರಿ ಚಾಲಿತ ವಾಹನಗಳನ್ನು ಪರೀಕ್ಷಿಸಲು ಪುಣೆ ಮೂಲದ ಎಆರ್‌ಎಐನಿಂದ ಬ್ಯಾಟರಿ ಚಾಲಿತ ವಾಹನಗಳನ್ನು ಪರೀಕ್ಷಿಸಲು ಅಗತ್ಯವಿರುವ ಮೂಲಸೌಕರ್ಯ ಪಡೆಯಲು ಸರ್ಕಾರವು ಆದೇಶಿಸಿದೆ.

Eedina App

ಇವಿಗಳ ಹೊಸ ಪರೀಕ್ಷಾ ವೇಳಾಪಟ್ಟಿ ಜಾರಿಗೆ ಬರುವ ವೇಳೆಗೆ ಅಗತ್ಯವಿರುವ ಮೂಲಸೌಕರ್ಯಗಳು ಸ್ಥಾಪನೆಯಾಗಲಿವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಆರೇಳು ತಿಂಗಳುಗಳಿಂದ ದೇಶದ ನಾನಾ ಭಾಗಗಳಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬೆಂಕಿಗಾಹುತಿಯಾದ ನಿದರ್ಶನಗಳ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯವು ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ.

AV Eye Hospital ad

ಪ್ರಸ್ತುತ, ಭಾರತದಲ್ಲಿ  ಇವಿಗಳಿಗೆ ಯಾವುದೇ ಕೇಂದ್ರೀಕೃತ ಪರೀಕ್ಷಾ ಸೌಲಭ್ಯಗಳು ಲಭ್ಯವಿಲ್ಲ. ಹಾಗೆಯೇ ತಯಾರಕರು ಸಹ ತಮ್ಮದೇ ಆದ ಮಾನದಂಡಗಳನ್ನು ಹೊಂದಿದ್ದಾರೆ. ಬ್ಯಾಟರಿ ತಂತ್ರಜ್ಞಾನದ ಪ್ರಮಾಣೀಕರಣದ ಮೊದಲ ಪ್ರಮುಖ ಹೆಜ್ಜೆಯಾಗಿ, ಲಿಥಿಯಂ-ಐಯಾನ್ ಬ್ಯಾಟರಿಗಳಿಗೆ ಐಎಸ್‌ಒ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯಕ್ಷಮತೆಯ ಮಾನದಂಡಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಜೂನ್‌ನಲ್ಲಿ ಬಿಡುಗಡೆ ಮಾಡಿತ್ತು.

ಪ್ರಸ್ತಾವಿತ ಪರೀಕ್ಷಾ ಮೂಲಸೌಕರ್ಯಗಳಲ್ಲಿ ಬ್ಯಾಟರಿ ಸೆಲ್‌ಗಳು, ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳು, ಆನ್‌ಬೋರ್ಡ್ ಚಾರ್ಜರ್‌ಗಳು, ಬ್ಯಾಟರಿ ಪ್ಯಾಕ್ ವಿನ್ಯಾಸಗಳು ಸೇರಿದಂತೆ ಉಷ್ಣ ಪ್ರಸರಣವನ್ನು (ಥರ್ಮಲ್‌ ಪ್ರೊಪಗೇಷನ್‌) ಒಳಗೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಇದು ಆಂತರಿಕ ಸೆಲ್ ಶಾರ್ಟ್ ಸರ್ಕ್ಯೂಟ್‌ಗಳಿಗೆ ಸಂಪರ್ಕ ಹೊಂದಿದ್ದು ಅದು ಎಲೆಕ್ಟ್ರಿಕ್‌ ವಾಹನಗಳಲ್ಲಿ ಬೆಂಕಿಗೆ ಕಾರಣವಾಗಬಹುದು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಳೆದ ತಿಂಗಳ ಕೊನೆಯಲ್ಲಿ, 2022ರ ಅಕ್ಟೋಬರ್ 1ರಿಂದ ಎಲೆಕ್ಟ್ರಿಕ್ ವಾಹನ ಬ್ಯಾಟರಿ ಪರೀಕ್ಷಾ ಮಾನದಂಡಗಳಿಗೆ ತಿದ್ದುಪಡಿಗಳನ್ನು ಮುಂದಿನ ಆರು ತಿಂಗಳುಗಳಲ್ಲಿ ಎರಡು- ಹಂತದಲ್ಲಿ ಅನುಷ್ಠಾನಗೊಳಿಸುವುದಾಗಿ ತಿಳಿಸಿತ್ತು.

ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿ ಪರೀಕ್ಷಾ ಮಾನದಂಡಗಳಿಗೆ ತಿದ್ದುಪಡಿಗಳನ್ನು- ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ಸ್-156 (ಅಥವಾ ಎಐಎಸ್‌-156) ಮತ್ತು ಎಐಎಸ್‌-038 ಮೊದಲಾಗಿ ಒಟ್ಟು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಮೊದಲನೇ ಹಂತವು 2022ರ ಡಿಸೆಂಬರ್ 1ರಿಂದ ಜಾರಿಯಾದರೆ, ಎರಡನೇ ಹಂತವೂ 2023ರ ಮಾರ್ಚ್ 31ರಿಂದ ಕಾರ್ಯಗತಗೊಳ್ಳಲಿದೆ.

ಎಲೆಕ್ಟ್ರಿಕ್‌ ಸ್ಕೂಟರ್‌ ವಾಹನ ತಯಾರಕರಾದ ಓಲಾ, ಓಕಿನಾವಾ ಆಟೋಟೆಕ್ ಮತ್ತು ಪ್ಯೂರ್‌ಇವಿ ಕಂಪನಿಯ ವಾಹನಗಳು ಬೆಂಕಿಗಾಹುತಿಯಾದ ಘಟನೆಗಳು ವರದಿಯಾಗುತ್ತಿದ್ದಂತೆ, ತಮ್ಮ ಸ್ಕೂಟರ್‌ಗಳನ್ನು ಹಿಂಪಡೆಯಲು ಒತ್ತಾಯಿಸಲಾಗಿದೆ. ಇವಿಗಳು ಬೆಂಕಿಹಾಹುತಿಯಾಗಲು ಉತ್ಪಾದನಾ ದೋಷಗಳು, ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಲ್ಲಿನ ನಿಯೋಜನೆಯಲ್ಲಿನ ದೋಷಗಳನ್ನು ಒಳಗೊಂಡಿರಬಹುದು. ಕೆಲವು ಸಂದರ್ಭಗಳಲ್ಲಿ, ದೋಷಪೂರಿತ ಚಾರ್ಜಿಂಗ್ ಕೂಡ ಕಾರಣವಾಗಿರಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app