ಶಿವಮೊಗ್ಗ | ಚಾಕು ಇರಿತ ಪ್ರಕರಣದ ಆರೋಪಿ ಕಾಲಿಗೆ ಗುಂಡೇಟು: ಮತ್ತಿಬ್ಬರ ಬಂಧನ

charbi
  • ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದ ಆರೋಪಿ
  • ಮಾರ್ನಮಿ ಬೈಲಿನ ಮೊಹಮ್ಮದ್ ಜಬಿ ಕಾಲಿಗೆ ಗುಂಡೇಟು

ಶಿವಮೊಗ್ಗದ ಗಾಂಧಿ ಬಜಾರ್ ತರಕಾರಿ ಮಾರುಕಟ್ಟೆ ಬಳಿ ಯುವಕನಿಗೆ ಚಾಕು ಇರಿದ ಪ್ರಕರಣದ ಆರೋಪಿ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. 

ಮಂಗಳವಾರ ಬೆಳಗಿನ ಜಾವ ಎನ್‌ಟಿ ರಸ್ತೆಯ ಫಲಕ್ ಪ್ಯಾಲೇಸ್ ಬಳಿ ಮಾರ್ನಮಿ ಬೈಲಿನ ಮೊಹಮ್ಮದ್ ಜಬಿ ಅಲಿಯಾಸ್ ಚರ್ಬಿ (30) ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ. 

ಆಗಸ್ಟ್ 15 ರಂದು ಗಾಂಧಿ ಬಜಾರಿನಲ್ಲಿ ಪ್ರೇಮ್‌ಸಿಂಗ್ ಎಂಬಾತನಿಗೆ ಚಾಕು ಇರಿದು ಆರೋಪಿಗಳು ಪರಾರಿಯಾಗಿದ್ದರು. ಇಂದು ಬೆಳಗಿನ ಜಾವ ಆರೋಪಿ ಇರುವ ಜಾಗದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಚರ್ಬಿಯನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆಗ, ವಿನೋಬ ನಗರ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ಎಸ್ ಕುರಿ ಗುಂಡು ಹಾರಿಸಿದ್ದಾರೆ. ಚರ್ಬಿ ಬಲಗಾಲಿಗೆ ಗುಂಡು ತಗುಲಿದ್ದು, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ನಗರಕ್ಕೆ ಎಡಿಜಿಪಿ ಭೇಟಿ: ಗುರುವಾರದವರೆಗೆ ಹಿಂಬದಿ ಸವಾರರಿಗೆ ನಿರ್ಬಂಧ

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅಲ್ಲದೆ, ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಜೆ ಸಿ ನಗರದ ನದೀಮ್ ಮತ್ತು ಬುದ್ಧ ನಗರದ ಅಬ್ದುಲ್ ರೆಹಮಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.  

ನಿಮಗೆ ಏನು ಅನ್ನಿಸ್ತು?
0 ವೋಟ್