ಜುಲೈ 11 ರಂದು ಏಕನಾಥ್ ಶಿಂಧೆ ಮತ್ತಿತರ 15 ಶಾಸಕರ ಅಮಾನತು ಅರ್ಜಿ ವಿಚಾರಣೆ : ಸುಪ್ರೀಂ ಕೋರ್ಟ್

Eknathshinde
  • ಜುಲೈ 12ಕ್ಕೆ ಬಂಡಾಯ ನಾಯಕರ ಅನರ್ಹತೆ ಅರ್ಜಿ ವಿಚಾರಣೆ
  • "ನಾವೇನು ಕಣ್ಣು ಮುಚ್ಚಿ ಕುಳಿತಿಲ್ಲ" ಎಂದ ಸುಪ್ರೀಂ‌ ಕೋರ್ಟ್

ಅನರ್ಹತೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮತ್ತು ಇತರೆ 15 ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಬೇಕು ಎಂದು ಕೋರಿ ಶಿವಸೇನಾ ಮುಖ್ಯ ಸಚೇತಕ ಸುನಿಲ್ ಪ್ರಭು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 

ಶುಕ್ರವಾರ ಬೆಳಗ್ಗೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ರಜಾ ಕಾಲದ ಪೀಠವು ಜುಲೈ 11 ರಂದು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. 

Eedina App

“ಜೂನ್‌ 30 ರಂದು ಏಕನಾಥ್‌ ಶಿಂಧೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸದ್ಯ ಶಿಂಧೆಯವರು ಯಾವುದೇ ಪಕ್ಷದಲ್ಲಿಲ್ಲ.  ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಿಂದ ಅವರು ಅನರ್ಹತೆಗೆ ಒಳಗಾಗಿದ್ದಾರೆ” ಎಂದು ಸಿಬಲ್‌ ಅವರು ನ್ಯಾಯಾಲಯದ ಗಮನಕ್ಕೆ ತಂದರು.

“ಕಪಿಲ್‌ ಸಿಬಲ್‌ ಅವರೇ, ನಾವು ಈ ವಿಚಾರವನ್ನು ಗಮನಿಸುತ್ತಿದ್ದೇವೆ. ನಾವೇನು ಕಣ್ಣು ಮುಚ್ಚಿ ಕುಳಿತಿಲ್ಲ. ಜುಲೈ 11 ರಂದು ಅರ್ಜಿಯ ವಿಚಾರಣೆ ನಡೆಸುತ್ತೇವೆ” ಎಂದು ನ್ಯಾಯಮೂರ್ತಿ ಸೂರ್ಯಕಾಂತ್‌ ಹೇಳಿದ್ದಾರೆ. 

AV Eye Hospital ad

“ಏಕನಾಥ್‌ ಶಿಂಧೆ ಬಣ ಬಂಡಾಯದ ಹೊರತಾಗಿಯೂ, ಮೂಲ ಶಿವಸೇನೆಯು ಉದ್ಧವ್‌ ಠಾಕ್ರೆ ನೇತೃತ್ವದಲ್ಲೇ ಉಳಿದಿದೆ. ʼಪಕ್ಷಾಂತರದ ಸಾಂವಿಧಾನಿಕ ಪಾಪʼವೆಸಗಿರುವ ಅವರನ್ನು ಒಂದು ದಿನವೂ ಸದನದಲ್ಲಿ ಭಾಗವಹಿಸಲು ಬಿಡಬಾರದು” ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ನಿವೇದಿಸಿಕೊಂಡಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆಲ್ಲ ನೂಪುರ್ ಶರ್ಮಾ ಕಾರಣ | ಸುಪ್ರೀಂ ಕೋರ್ಟ್ 

ಉಪ ಸಭಾಪತಿ ಅವರು ಹೊರಡಿಸಿದ್ದ ಅನರ್ಹತೆ ಆದೇಶ ಪ್ರಶ್ನಿಸಿ ಏಕನಾಥ್‌ ಶಿಂಧೆ ಮತ್ತು 15 ಬಂಡಾಯ ಶಾಸಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಉಪಸಭಾಧ್ಯಕ್ಷರ ನೋಟಿಸ್‌ಗೆ ಪ್ರತಿಕ್ರಿಯಿಸುವ ಸಮಯವನ್ನು ಜುಲೈ 12ರವರೆಗೆ ವಿಸ್ತರಿಸುವ ಮೂಲಕ ಶಿಂಧೆ ಬಣಕ್ಕೆ ಪರಿಹಾರ ನೀಡಿತು.

ಅದಾದ ಎರಡು ದಿನಗಳ ಬಳಿಕ, ರಾಜ್ಯಪಾಲರು ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಪರೀಕ್ಷೆಗೆ ಸೂಚಿಸಿದರು. ರಾಜ್ಯಪಾಲರ ನಿರ್ದೇಶನವನ್ನು ಶಿವಸೇನೆ ಪ್ರಶ್ನಿಸಿದ್ದರೂ, ಜೂನ್‌ 29 ರಂದು ಸುಪ್ರೀಂ ಕೋರ್ಟ್‌ ತಡೆ ಹಿಡಿಯಲಿಲ್ಲ. ನಂತರ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app