ಸುದ್ದಿ ವಿವರ | ಭಾರತದಲ್ಲಿ ಜುಲೈ 1ರಿಂದ 'ಏಕ-ಬಳಕೆಯ ಪ್ಲಾಸ್ಟಿಕ್' ನಿಷೇಧ ಜಾರಿ

plastic being banned

ಕೇಂದ್ರ ಸರ್ಕಾರ ಜುಲೈ 1ರಿಂದ 'ಏಕ ಬಳಕೆಯ ಪ್ಲಾಸ್ಟಿಕ್' ತಯಾರಿಕೆ ಮತ್ತು ಬಳಕೆಯನ್ನು ನಿಷೇಧಿಸಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮುಂದಿನ ತಿಂಗಳಿಂದ ನಿಷೇಧಿಸಲ್ಪಡುವ ಪ್ಲಾಸ್ಟಿಕ್‌ ಸಾಮಾಗ್ರಿಗಳ ದೊಡ್ಡ ಪಟ್ಟಿ ನೀಡಿದೆ.

"2022ರ ಜುಲೈ 1ರಿಂದ ಜಾರಿಗೆ ಬರುವಂತೆ ಪಾಲಿಸ್ಟೈರೀನ್ ಮತ್ತು ವಿಸ್ತರಿತ ಪಾಲಿಸ್ಟೈರೀನ್ ಸೇರಿದಂತೆ 'ಏಕ-ಬಳಕೆಯ ಪ್ಲಾಸ್ಟಿಕ್' ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ" ಎಂದು ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಅಂದ ಹಾಗೆ ಜುಲೈ 1ರಿಂದ ನಿಷೇಧ ನಿಯಮಗಳ ವ್ಯಾಪ್ತಿಯಲ್ಲಿ ಬರುವ ವಸ್ತುಗಳು ಯಾವುವು, 'ಏಕ-ಬಳಕೆಯ ಪ್ಲಾಸ್ಟಿಕ್' ಎಂದರೇನು, ಈ ಪೈಕಿ ದಿನ ನಿತ್ಯ ನಾವು ಬಳಸುವ ವಸ್ತುಗಳು ಯಾವ್ಯಾವು, ಪರಿಸರ ಸೇರುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯದ ಪ್ರಮಾಣವೆಷ್ಟು ಹಾಗೂ ನಿಷೇಧ ನಿಯಮ ಜಾರಿಗಳ ಕುರಿತ ಮಾಹಿತಿ ಇಲ್ಲಿದೆ.

'ಏಕ ಬಳಕೆಯ ಪ್ಲಾಸ್ಟಿಕ್' ಎಂದರೇನು?
ಹೆಸರೇ ಸೂಚಿಸುವಂತೆ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಸಾಮಗ್ರಿಗಳೆಲ್ಲವೂ ‘ಏಕ-ಬಳಕೆಯ ಪ್ಲಾಸ್ಟಿಕ್’ ಗಳಾಗಿವೆ. ಪ್ರಸ್ತುತ ಈ ರೀತಿಯ ಪ್ಲಾಸ್ಟಿಕ್‌ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ ಮತ್ತು ವ್ಯಾಪಕವಾಗಿ ಬಳಸಲಾಗುತ್ತಿದೆ.

ಮಾರುಕಟ್ಟೆಗಳಲ್ಲಿ ದಿನಸಿ, ತರಕಾರಿ, ಬಟ್ಟೆ ಮತ್ತಿತರ ವಸ್ತುಗಳನ್ನು ಕಟ್ಟಿ ಕೊಡುವ ಕೈ ಚೀಲಗಳಿಂದ (ಪ್ಲಾಸ್ಟಿಕ್) ಹಿಡಿದು, ಶಾಂಪೂ, ಡಿಟರ್ಜೆಂಟ್‌ಗಳು, ಸೌಂದರ್ಯವರ್ಧಕಗಳ ಬಾಟಲಿಗಳು, ಪಾಲಿಥಿನ್ ಬ್ಯಾಗ್‌ಗಳು, ಫೇಸ್ ಮಾಸ್ಕ್‌ಗಳು, ಕಾಫಿ ಕಪ್‌ಗಳು, ಅಂಟಿಕೊಳ್ಳುವ ಫಿಲ್ಮ್, ಕಸದ ಚೀಲಗಳು, ಆಹಾರ ಪ್ಯಾಕೇಜಿಂಗ್‌ಗೆ ಬರುವ ಸಾಮಗ್ರಿಗಳೆಲ್ಲ 'ಏಕ-ಬಳಕೆಯ ಪ್ಲಾಸ್ಟಿಕ್‌' ಗಳಾಗಿವೆ.

ಈ ಸುದ್ದಿ ಓದಿದ್ದೀರಾ:? ಮಂಗಳೂರು | ಬೆಂಕಿಗೆ ಆಹುತಿಯಾದ ಹತ್ತಿ ಫ್ಯಾಕ್ಟರಿ

ಆಸ್ಟ್ರೇಲಿಯನ್ ಮೂಲದ ಮೈಂಡೆರೂ ಫೌಂಡೇಶನ್ (Minderoo) 2021ರಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ ಜಾಗತಿಕವಾಗಿ ಉತ್ಪಾದನೆಯಾಗುವ ನಾನಾ ಬಗೆಯ ಪ್ಲಾಸ್ಟಿಕ್‌ ಉತ್ಪನ್ನಗಳ ಪೈಕಿ 'ಏಕ-ಬಳಕೆಯ ಪ್ಲಾಸ್ಟಿಕ್' ವಸ್ತುಗಳ ಉತ್ಪಾದನೆ ಮೂರನೇ ಒಂದು ಭಾಗದಷ್ಟಿದೆ. ಶೇ. 98ರಷ್ಟು ಪಳೆಯುಳಿಕೆ ಇಂಧನಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ.

2019ರ ಅವಧಿಯಲ್ಲಿ ಜಾಗತಿಕವಾಗಿ 130 ಕೋಟಿ ಮೆಟ್ರಿಕ್ ಟನ್ 'ಏಕ-ಬಳಕೆಯ ಪ್ಲಾಸ್ಟಿಕ್' ತ್ಯಾಜ್ಯವನ್ನು ನೇರವಾಗಿ ಪರಿಸರಕ್ಕೆ ಎಸೆಯಲಾಗುತ್ತಿದೆ. ಇವೆಲ್ಲವನ್ನೂ ಸುಡಲಾಗುತ್ತದೆ ಇಲ್ಲವೇ ಭೂಮಿಯಲ್ಲಿ ಹೂಳಲಾಗುತ್ತದೆ." 2050ರ ವೇಳೆಗೆ 'ಏಕ-ಬಳಕೆಯ ಪ್ಲಾಸ್ಟಿಕ್' ತ್ಯಾಜ್ಯದಿಂದ ಶೇ. 5-10ರಷ್ಟು ಹಸಿರುಮನೆ ಅನಿಲ ಹೊರ ಸೂಸುವಿಕೆಗೆ ಕಾರಣವಾಗಬಹುದೆಂದು ಅಂದಾಜಿಸಲಾಗಿದೆ. 

ವಾರ್ಷಿಕ ಅತಿ ಹೆಚ್ಚು 'ಏಕ-ಬಳಕೆಯ ಪ್ಲಾಸ್ಟಿಕ್' ತ್ಯಾಜ್ಯ ಸಂಗ್ರಹವಾಗುವ 100 ದೇಶಗಳ ಪೈಕಿ ಭಾರತ 94ನೇ ಸ್ಥಾನದಲ್ಲಿದೆ. ಉಳಿದಂತೆ ಸಿಂಗಪುರ, ಆಸ್ಟ್ರೇಲಿಯಾ, ಓಮನ್ ಪಟ್ಟಿಯಲ್ಲಿರುವ ಮೊದಲ ಮೂರು ದೇಶಗಳಾಗಿವೆ ಎಂಬುದನ್ನು ವರದಿಯಲ್ಲಿ ತಿಳಿಯಬಹುದಾಗಿದೆ.

ಪ್ರತಿ ವರ್ಷ 11.8 ಕೋಟಿ ಮೆಟ್ರಿಕ್ ಟನ್ (ಎಂಎಂಟಿ) 'ಏಕ-ಬಳಕೆಯ ಪ್ಲಾಸ್ಟಿಕ್' ಸಾಮಗ್ರಿಗಳನ್ನು ದೇಶದಲ್ಲಿ ಉತ್ಪಾದನೆಯಾಗುತ್ತದೆ. ಅಲ್ಲದೇ 29 ಲಕ್ಷ ಮೆಟ್ರಿಕ್ ಟನ್ 'ಏಕ-ಬಳಕೆಯ ಪ್ಲಾಸ್ಟಿಕ್' ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಒಟ್ಟು 5.6 ಮಿಲಿಯನ್ ಮೆಟ್ರಿಕ್ ಟನ್ 'ಏಕ-ಬಳಕೆಯ ಪ್ಲಾಸ್ಟಿಕ್' ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರ ಪ್ರಮಾಣವನ್ನು ದೇಶದ ಪ್ರತಿಯೊಬ್ಬ ಪ್ರಜೆ ತಲಾ 4 ಕೆಜಿಯಷ್ಟು ತ್ಯಾಜ್ಯ ಪರಿಸರಕ್ಕೆ ಕೊಡುಗೆ ನೀಡುತ್ತಿದ್ದಾನೆ.

ಯಾವ ವಸ್ತುಗಳ ಮೇಲೆ ನಿಷೇಧ?
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ನಿಷೇಧ ವಿಧಿಸಿರುವ ಪ್ಲಾಸ್ಟಿಕ್ ವಸ್ತುಗಳೆಂದರೆ ಇಯರ್‌ಬಡ್, ಬಲೂನ್ಸ್ ಕಡ್ಡಿ, ಕ್ಯಾಂಡಿ ಮತ್ತು ಐಸ್ಕ್ರೀಮ್ ಕಡ್ಡಿಗಳು, ಫಲಕಗಳು, ಕಪ್‌ಗಳು, ಕನ್ನಡಕಗಳು, ಫೋರ್ಕ್ಸ್, ಚಮಚ, ಚಾಕು, ಟ್ರೇ, ಕಟ್ಲರಿ ವಸ್ತುಗಳು, ಸಿಹಿ ತಿನಿಸಿನ ಪೆಟ್ಟಿಗೆಗಳು, (ಬಾಕ್ಸ್) ಆಮಂತ್ರಣ ಕಾರ್ಡ್‌ಗಳು, ಸಿಗರೇಟ್ ಪ್ಯಾಕ್‌, 100 ಮೈಕ್ರಾನ್‌ಗಿಂತ ಕಡಿಮೆ ಇರುವ ಪಿವಿಸಿ ಬ್ಯಾನರ್‌ಗಳು ಮತ್ತು ಅಲಂಕಾರಿಕ ಪಾಲಿಸ್ಟೈರೀನ್‌ಗಳನ್ನು ನಿಷೇಧಿಸಿದೆ.

75 ಮೈಕ್ರಾನ್‌ಗಿಂತ ಕಡಿಮೆ ಇರುವ ಪಾಲಿಥಿನ್ ಚೀಲಗಳನ್ನು ಸಚಿವಾಲಯ 2021ರ ಸೆಪ್ಟೆಂಬರ್‌ನಲ್ಲೇ ನಿಷೇಧಿಸಿತ್ತು. ಆದರೆ ಪ್ರಸ್ತುತ ಈ ಹಿಂದಿನ 50 ಮೈಕ್ರಾನ್‌ ಮಿತಿಯನ್ನು ವಿಸ್ತರಿಸಿದ್ದು, ಡಿಸೆಂಬರ್‌ನಿಂದ 120 ಮೈಕ್ರಾನ್‌ಗಿಂತ ಕಡಿಮೆ ಇರುವ ಪಾಲಿಥಿನ್ ಕೈಚೀಲಗಳ (ಬ್ಯಾಗ್‌ಗಳ) ಮೇಲೂ ನಿಷೇಧ ಹೇರಲಿದೆ. ಮರುಬಳಕೆಯ ದಪ್ಪ ಪಾಲಿಥಿನ್ ಚೀಲಗಳ ತಯಾರಕರಿಗೆ ಸಮಯ ನೀಡಲು ಹಂತ-ಹಂತಗಳಲ್ಲಿ ನಿಷೇಧಿಸುತ್ತಿದೆ.

ಅಲ್ಲದೇ 50- ಮತ್ತು 75- ಮೈಕ್ರಾನ್ ಚೀಲ ತಯಾರಿಕೆಗೆ ಬಳಸುತ್ತಿದ್ದ ಯಂತ್ರಗಳನ್ನು ಬಳಸಬಹುದಾದರೂ, 120 ಮೈಕ್ರಾನ್‌ಗಳಿಗೆ ಯಂತ್ರೋಪಕರಣಗಳನ್ನು ಮೇಲ್ದರ್ಜೆಗೇರಿಸಿಕೊಳ್ಳಬೇಕಾಗುತ್ತದೆ.

2016ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ಗುಟ್ಕಾ, ತಂಬಾಕು, ಪಾನ್ ಮಸಾಲಾ ಪ್ಯಾಕಿಂಗ್ ಅಥವಾ ಮಾರಾಟ ಮಾಡಲು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವ ಸ್ಯಾಶೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಈ ವಸ್ತುಗಳು ಏಕೆ?
“ಏಕ ಬಳಕೆಯ ಪ್ಲಾಸ್ಟಿಕ್' ದೀರ್ಘ ಕಾಲದವರೆಗೆ ಪರಿಸರದಲ್ಲಿ ಉಳಿಯುತ್ತದೆ. ಕೊಳೆಯುವುದಿಲ್ಲ. ಅದು ಮೈಕ್ರೋಪ್ಲಾಸ್ಟಿಕ್ ಆಗಿ ಬದಲಾಗುತ್ತದೆ. ಹೀಗೆ ಪ್ಲಾಸ್ಟಿಕ್‌ ತ್ಯಾಜ್ಯ ನಮ್ಮ ಆಹಾರ ಮೂಲಗಳು ಮತ್ತು ದೇಹವನ್ನು ಪ್ರವೇಶಿಸುತ್ತದೆ. ಇದು ಅತ್ಯಂತ ಹಾನಿಕಾರಕವಾಗಿದೆ.” 

ನಿಷೇಧ ಜಾರಿ ಹೇಗೆ?

  • ಕೇಂದ್ರದ (ಸಿಪಿಸಿಬಿ) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು (ಎಸ್‌ಪಿಸಿಬಿಗಳು) ಪ್ಲಾಸ್ಟಿಕ್‌ ನಿಷೇಧ ಕುರಿತು ಕೇಂದ್ರಕ್ಕೆ ನಿಯಮಿತವಾಗಿ ವರದಿ ಮಾಡುತ್ತವೆ. ಇದರ ವರದಿ ಆಧರಿಸಿ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಹಲವು ನಿರ್ದೇಶನಗಳನ್ನು ನೀಡಲಾಗಿದೆ. (ಉದಾಹರಣೆಗೆ ನಿಷೇಧಿತ ವಸ್ತುಗಳ ತಯಾರಿಕೆಯಲ್ಲಿ ತೊಡಗಿರುವ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡದಂತೆ ಎಲ್ಲ ಪೆಟ್ರೋ ಕೆಮಿಕಲ್ ಉದ್ಯಮಗಳಿಗೆ ಸೂಚಿಸಲಾಗಿದೆ.)
  • ವಾಯು/ನೀರಿನ ಕಾಯ್ದೆಯಡಿ ಏಕ-ಬಳಕೆಯ ಪ್ಲಾಸ್ಟಿಕ್ ತಯಾರಿಕೆ ಕೈಗಾರಿಕೆಗಳ ಮಾರ್ಪಾಡು ಅಥವಾ ಪರವಾನಗಿ ಹಿಂಪಡೆಯಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ.
  • ಎಸ್‌ಯುಪಿ ವಸ್ತುಗಳನ್ನು ತಮ್ಮ ಆವರಣದಲ್ಲಿ ಮಾರಾಟ ಮಾಡಬಾರದು ಎಂಬ ಷರತ್ತಿನೊಂದಿಗೆ ತಾಜಾ ವಾಣಿಜ್ಯ ಪರವಾನಗಿ ನೀಡಲು, ನಿಯಮ ಉಲ್ಲಂಘಿಸಿದಲ್ಲಿ ಪರವಾನಗಿ ರದ್ದತಿಗೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
  • 200 ಜೈವಿಕ ಪ್ಲಾಸ್ಟಿಕ್ (compostable plastic) ತಯಾರಕರಿಗೆ ಕಳೆದ ವಾರ ಸಿಪಿಸಿಬಿ ಪ್ರಮಾಣಪತ್ರ ನೀಡಿತು. ಜೈವಿಕ ವಿಘಟನೀಯ ಪ್ಲಾಸ್ಟಿಕ್ ತಯಾರಿಕೆಯ ಮಾನದಂಡಗಳನ್ನು ಬಿಐಎಸ್ ಅಂಗೀಕರಿಸಿದೆ. 

ಉಲ್ಲಂಘಿಸಿದರೆ ಕಾನೂನು ಕ್ರಮ

  • ಪ್ಲಾಸ್ಟಿಕ್ ತಯಾರಿಕೆ- ಬಳಕೆ ಹಂತದಲ್ಲಿ ನಿಷೇಧ ನಿಯಮಗಳನ್ನು ಉಲ್ಲಂಘಿಸುವವರಿಗೆ 1986ರ ಪರಿಸರ ಸಂರಕ್ಷಣಾ ಕಾಯ್ದೆಯಡಿ ದಂಡ ವಿಧಿಸಬಹುದು. 5 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು.
  • ಕಾನೂನು ಉಲ್ಲಂಘಿಸುವವರು ಎಸ್‌ಪಿಸಿಬಿಯಿಂದ ಪರಿಸರ ಹಾನಿ ಪರಿಹಾರ ಪಾವತಿಗೆ ಕೇಳಬಹುದು. ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ಪುರಸಭೆಯ ಕಾನೂನುಗಳು ಇವೆ.

ಏಕ-ಬಳಕೆಯ ಪ್ಲಾಸ್ಟಿಕ್ ಮೇಲೆ ನಿಷೇಧ ವಿಧಿಸಿದ ಇತರ ದೇಶಗಳು 
ಈ ವರ್ಷದ ಆರಂಭದಲ್ಲಿ ವಿಶ್ವಸಂಸ್ಥೆಯ ಸದಸ್ಯರ ರಾಷ್ಟ್ರಗಳಾದ ಭಾರತ ಸೇರಿದಂತೆ 124 ದೇಶಗಳು ಪ್ಲಾಸ್ಟಿಕ್‌ ಮಾಲಿನ್ಯ ತಡೆ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಎಲ್ಲ ದೇಶಗಳು ಪ್ಲಾಸ್ಟಿಕ್‌ ಉತ್ಪಾದನೆ-ವಿಲೇವಾರಿ ತಡೆ ಕುರಿತ ನಿಯಮಗಳಿಗೆ ಬದ್ಧವಾಗಿರಬೇಕಿದೆ.

2002ರಲ್ಲಿ ತೆಳು ಪ್ಲಾಸ್ಟಿಕ್ ಚೀಲದ ಮೇಲದ ನಿಷೇಧಿ ವಿಧಿಸಿದ ಮೊದಲ ದೇಶ ಬಾಂಗ್ಲಾವಾದರೆ, ಪ್ಲಾಸ್ಟಿಕ್ ಚೀಲ ನಿಷೇಧಿಸಿದ ಇತ್ತೀಚಿನ ದೇಶ ನ್ಯೂಜಿಲೆಂಡ್ (2019ರ ಜುಲೈ). 2020ರಲ್ಲಿ ಚೀನಾ ಹಂತ-ಹಂತವಾಗಿ ಪ್ಲಾಸ್ಟಿಕ್‌ ನಿಷೇಧ ಕುರಿತು ಕ್ರಮ ಕೈಗೊಂಡಿದೆ. 2019ರ ಜುಲೈನಲ್ಲಿ 68 ದೇಶಗಳು ಹಲವು ಹಂತಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ನಿಷೇಧದ ಉದ್ದೇಶ ಹೊಂದಿದ್ದವು. 

2014ರಲ್ಲಿ ಕ್ಯಾಲಿಫೋರ್ನಿಯಾ ಸೇರಿದಂತೆ ಅಮೆರಿಕದ ಎಂಟು ರಾಜ್ಯಗಳಲ್ಲಿ 'ಏಕ-ಬಳಕೆಯ ಪ್ಲಾಸ್ಟಿಕ್' ಚೀಲಗಳನ್ನು ನಿಷೇಧಿಸಲಾಗಿತ್ತು. 2018ರಲ್ಲಿ ಪ್ಲಾಸ್ಟಿಕ್ ಹೀರುಗೊಳವೆಗಳನ್ನು ನಿಷೇಧಿಸಿದ ಮೊದಲ ಪ್ರಮುಖ ನಗರ ಸಿಯಾಟಲ್. ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲಿ 'ಏಕ-ಬಳಕೆಯ ಪ್ಲಾಸ್ಟಿಕ್‌' ಬಳಕೆ ಕುರಿತ ಹಲವು ನಿರ್ದೇಶನಗಳನ್ನು ಮೊದಲ ಬಾರಿಗೆ ಜಾರಿಗೆ ತರಲಾಯಿತು.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕಳೆದ ವರ್ಷವೇ ಪ್ಲಾಸ್ಟಿಕ್‌ ನಿಷೇಧದ ಅಧಿಸೂಚನೆ ಹೊರಡಿಸಿತ್ತು. ಆದರೆ ಇದರ  ಸಮರ್ಪಕ ಅನುಷ್ಠಾನದಲ್ಲಿ ಹಲವು ಕೊರತೆಗಳಿವೆ. ಆದಾಗ್ಯೂ ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಜತೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್