ದೆಹಲಿಯಲ್ಲಿ ದಾರುಣ ಕೃತ್ಯ | ಮೌಢ್ಯಾಚರಣೆಗೆ ಆರು ವರ್ಷದ ಬಾಲಕ ಬಲಿ

  • ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
  • ಉನ್ನತಿಗಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ

ಮೌಢ್ಯಾಚರಣೆಗೆ ಆರು ವರ್ಷದ ಬಾಲಕನನ್ನು ಇಬ್ಬರು ದುಷ್ಕರ್ಮಿಗಳು ಅಮಾನುಷವಾಗಿ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ವಿಜಯ್ ಕುಮಾರ್ ಮತ್ತು ಅಮರ್ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ಹತ್ಯೆ ಮಾಡುವಾಗ ದುಷ್ಕರ್ಮಿಗಳು ಮಾದಕ ವ್ಯಸನಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Eedina App

ಆರೋಪಿಗಳು ಮತ್ತು ಬಾಲಕನ ಪೋಷಕರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಒಂದೇ ಕೊಳಗೇರಿಯಲ್ಲಿ ವಾಸ ಮಾಡುತ್ತಿದ್ದರು. ವಿಜಯ್ ಮತ್ತು ಅಮರ್ ಬಾಲಕನ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬದುಕಿನಲ್ಲಿ ಉನ್ನತಿ ಸಾಧಿಸಲು ಬಾಲಕನನ್ನು ಕೊಂದಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.

ಘಟನೆ ಸಂಬಂಧ ಉಪ ಪೊಲೀಸ್ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ಪ್ರತಿಕ್ರಿಯೆ ನೀಡಿದ್ದು, “ಶನಿವಾರ ರಾತ್ರಿ 10:30 ರ ಸುಮಾರಿಗೆ ಬಾಲಕ ತನ್ನ ಶೆಡ್‌ಗೆ ಹೋಗುತ್ತಿದ್ದಾಗ, ಆರೋಪಿಗಳು ಆತನನ್ನು ತಮ್ಮ ಅಡುಗೆ ಸ್ಥಳಕ್ಕೆ ಕರೆದೊಯ್ದು ಮೊದಲು ತಲೆಗೆ ಹೊಡೆದು ಬಳಿಕ ಅಡುಗೆಯ ಚಾಕುವಿನಿಂದ ಕತ್ತು ಕೊಯ್ದು ಕೊಂದಿದ್ದಾರೆ” ಎಂದು ವಿವರಿಸಿದ್ದಾರೆ.

AV Eye Hospital ad

ಬಾಲಕನ ತಂದೆಯ ಹೇಳಿಕೆಯನ್ನು ಆಧರಿಸಿ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ದಲಿತ ಯುವಕನ ತಲೆಗೆ ಗುಂಡು ಹಾರಿಸಿ ಹತ್ಯೆ

ಬಾಲಕನ ತಂದೆ ತನ್ನ ದೂರಿನಲ್ಲಿ, “ರಾತ್ರಿ ಊಟದ ನಂತರ ಕೆಲವು ಮಹಿಳೆಯರು ಕಟ್ಟಡ ನಿರ್ಮಾಣ ಸ್ಥಳದಲ್ಲಿ ಭಜನೆಗಳನ್ನು ಹಾಡುತ್ತಿದ್ದರು. ಆ ವೇಳೆ ಮಗ ಅಲ್ಲಿಯೇ ಇದ್ದ. ಆದರೆ, ಎಲ್ಲರೂ ತಮ್ಮ ತಮ್ಮ ಶೆಡ್‌ಗಳಿಗೆ ತೆರಳಲು ಮುಂದಾದಾಗ ಬಾಲಕ ನಾಪತ್ತೆಯಾಗಿದ್ದ. ಶೆಡ್ ಒಂದರ ಬಳಿ ರಕ್ತದ ಕಲೆಗಳನ್ನು ಗಮನಿಸಿ ಬಾಗಿಲು ತೆರೆದಾಗ ಬಾಲಕನ ಶವ ಪತ್ತೆಯಾಗಿತ್ತು” ಎಂದು ವಿವರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app