ಜಾಗತಿಕ ಮಟ್ಟದಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಮೇ ತಿಂಗಳಲ್ಲಿ ಶೇ.10ರಷ್ಟು ಕುಸಿತ

  • ಜಾಗತಿಕ ಮಟ್ಟದಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಶೇ.10ರಷ್ಟು ಕುಸಿತ
  • ವರದಿ ನೀಡಿದ ʻಕೌಂಟರ್‌ ಪಾಯಿಂಟ್ ಮಾರ್ಕೆಟ್ ಪಲ್ಸ್ ಸಂಶೋಧನಾ ಸೇವೆʼ ಸಂಸ್ಥೆ

ಜಾಗತಿಕ ಮಟ್ಟದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟವು ಮೇ ತಿಂಗಳಿನಲ್ಲಿ ಶೇ.10ರಷ್ಟು ಕುಸಿದಿದೆ. ಕಳೆದ ಒಂದು ದಶಕದಲ್ಲಿ ಎರಡನೇ ಬಾರಿಗೆ ಇಂತಹ ದೊಡ್ಡ ಪ್ರಮಾಣದ ಕುಸಿತ ಉಂಟಾಗಿದೆ ಎಂದು ʻಕೌಂಟರ್‌ ಪಾಯಿಂಟ್ʼ ವರದಿ ತಿಳಿಸಿದೆ.

ವಿಶ್ವಾದ್ಯಂತ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಸತತ 11ನೇ ತಿಂಗಳು ಕೂಡ ಕುಸಿತ ಉಂಟಾಗಿರುವುದು ಕಂಡುಬಂದಿದೆ. ಮಾರುಕಟ್ಟೆಯ ವಿವಿಧ ಅಂಶಗಳು ಮಾರಾಟದ ಮೇಲೆ ಪ್ರಭಾವ ಬೀರಿದೆ ಎಂದು ʻಕೌಂಟರ್‌ ಪಾಯಿಂಟ್ ಮಾರ್ಕೆಟ್ ಪಲ್ಸ್ ಸಂಶೋಧನಾ ಸೇವೆʼ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿರುವುದಾಗಿ ಲೈವ್‌ ಮಿಂಟ್ ಸುದ್ದಿ ಸಂಸ್ಥೆಯ ವರದಿ ಉಲ್ಲೇಖಿಸಿದೆ.

ಜಾಗತಿಕ ಮಟ್ಟದಲ್ಲಿ ಸ್ಮಾರ್ಟ್‌ಫೋನ್ ಮಾರಾಟದ ಎರಡನೇ ಅನುಕ್ರಮ ಕುಸಿತದಲ್ಲಿ ಮೇ ತಿಂಗಳ ಮಾರಾಟವು 96 ಮಿಲಿಯನ್ ಯುನಿಟ್‌ಗಳಿಗೆ ಕುಸಿದಿದೆ. ಮೊಬೈಲ್ ಫೋನ್ ತಯಾರಿಗೆ ಬಳಸಲಾಗುವ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ನೀಗುತ್ತಿದೆ. ಆದರೆ ಹಣದುಬ್ಬರ ಹೆಚ್ಚಳ, ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ಯುರೋಪ್‌ನಲ್ಲಿ ಉಂಟಾಗಿರುವ ಅನಿಶ್ಚಿತತೆ ಸೇರಿದಂತೆ ಹಲವು ಅಂಶಗಳು ಸ್ಮಾರ್ಟ್‌ಫೋನ್ ಮಾರಾಟದ ಮೇಲೆ ಪ್ರಭಾವ ಬೀರುತ್ತಿವೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಸಂದರ್ಶನ | ಪೆಟ್ರೋಮ್ಯಾಕ್ಸ್‌ ಅಂದರೆ ಬದುಕು ಮತ್ತು ಬೆಳಕು: ನಿರ್ದೇಶಕ ವಿಜಯ್‌ ಪ್ರಸಾದ್‌

ಕೌಂಟರ್‌ಪಾಯಿಂಟ್‌ ಪ್ರಕಾರ, "ಮಾರಾಟದ ಈ ನಿಧಾನಗತಿಯು, ಭಾರತದ ಮಾರುಕಟ್ಟೆಗಳಲ್ಲಿ ಮಾರಾಟಗಾರರ ಷೇರುಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಈ ಕುಸಿತದ ಪರಿಣಾಮ ಹೊಸ ಸರಕುಗಳನ್ನು ಪರಿಚಯಿಸುವ ಬದಲಿಗೆ ಅಸ್ತಿತ್ವದಲ್ಲಿರುವ ದಾಸ್ತಾನು ತೆರವುಗೊಳಿಸಲು ಮುಂದಾಗುತ್ತಾರೆ. ಈ ಕ್ರಮವು ನಿಧಾನಗತಿ ಸಾಗಣೆಗೆ ಕಾರಣವಾಗುತ್ತದೆ" ಎಂದು ವಿವರಿಸಿದ್ದಾರೆ.

ಭಾರತವು ಈ ವರ್ಷದ ಆರಂಭದಿಂದಲೇ ಫೋನ್‌ಗಳ ಬೇಡಿಕೆಯ ಕುಸಿತ ಮತ್ತು ಜಾಗತಿಕ ಪೂರೈಕೆ ಬಿಕ್ಕಟ್ಟನ್ನು ಅನುಭವಿಸುತ್ತಿದ್ದು, ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ಕುಸಿತ ಕಂಡಿದೆ. ಮೇ ತಿಂಗಳಲ್ಲಿ, ಮೊಬೈಲ್‌ ಫೋನ್‌ಗಳ ಬೆಲೆ ಹೆಚ್ಚಳ, ಡಿಸ್ಕೌಂಟ್‌ ಮತ್ತು ಆಕರ್ಷಕ ಉಡುಗೊರೆಗಳ ಕೊರತೆಯಿಂದಾಗಿ ಜನರು ಹೊಸ ಫೋನ್‌ ಖರೀದಿಸಲು ಹಿಂದೇಟು ಹಾಕಿರಬಹುದು ಎಂದು ಮಾರುಕಟ್ಟೆಯ ವರದಿಗಳು ತಿಳಿಸಿವೆ.

2016ರಲ್ಲಿ ಭಾರತೀಯರು ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಫೋನ್‌ಗಳನ್ನು ಅಪ್‌ಗ್ರೇಡ್ ಮಾಡಿದ್ದರೆ, ಪ್ರಸ್ತುತ ಎರಡು ವರ್ಷಗಳಿಗೊಮ್ಮೆ ಮೊಬೈಲ್‌ ಫೋನ್‌ಗಳನ್ನು ಬದಲಾಯಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್