ಸಾಮಾಜಿಕ ಮಾಧ್ಯಮ ಪೋಸ್ಟ್‌; ಮಹಿಳಾ ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮ

  • ಸಾಮಾಜಿಕ ಮಾಧ್ಯಮ ಪೋಸ್ಟ್‌, ಮಹಿಳಾ ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮ
  • ಪೊಲೀಸ್, ನ್ಯಾಯಾಲಯವನ್ನು ಟೀಕಿಸಿದ್ದ ಪೋಸ್ಟ್‌ ಶೇರ್‌ ಮಾಡಿದ್ದ ಅಧಿಕಾರಿ

ಪೊಲೀಸರು ಮತ್ತು ನ್ಯಾಯಾಲಯವನ್ನು ಟೀಕಿಸಿದ್ದ ಸಾಮಾಜಿಕ ಮಾಧ್ಯಮದ ಪೋಸ್ಟ್‌ ಒಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಮಹಿಳಾ ಪೊಲೀಸ್‌ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಟ್ಟಾಯಂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪೊಲೀಸರ ವಿಶೇಷ ವಿಭಾಗ ವರದಿ ಸಲ್ಲಿಸಿದೆ.

ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ನಾಯಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಪೋಸ್ಟ್‌ ಅನ್ನು ಮಹಿಳಾ ಅಧಿಕಾರಿ ಶೇರ್‌ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಟ್ಟಾಯಂ ಜಿಲ್ಲೆಯ ಕಂಜಿರಪಲ್ಲಿ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್‌ ಅಧಿಕಾರಿ ರಮ್ಲಾ ಇಸ್ಮಾಯಿಲ್‌ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ವರ್ಷ ಮೇ ತಿಂಗಳಲ್ಲಿ ಅಲಪ್ಪುಳದಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಪೊಲೀಸರ ಕ್ರಮವನ್ನು ಟೀಕಿಸಿ ಎಸ್‌ಡಿಪಿಐ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಿ ಎ ರವೂಫ್‌ ಪೋಸ್ಟ್‌ ಒಂದನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಈ ಪೋಸ್ಟ್‌ ಅನ್ನು ರಮ್ಲಾ ಅವರು ತಮ್ಮ ಮುಖಪುಟದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌  ಅಧಿಕಾರಿಯೊಬ್ಬರು ತಿಳಿಸಿರುವುದಾಗಿ 'ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಸುದ್ದಿ ಓದಿದ್ದೀರಾ?:  ಬೀದರ್ | ಅಲೆಮಾರಿಗಳಿಗೆ ನಿವೇಶನ ಹಂಚಿಕೆ ಮಾಡಲು ಸಚಿವ ಚವ್ಹಾಣ ಅಡ್ಡಿ: ಅರವಿಂದ್ ಕುಮಾರ್ ಆರೋಪ

ವಿಶೇಷ ವಿಭಾಗ ಸಲ್ಲಿಸಿದ ವರದಿ ಆಧರಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ ಕಾರ್ತಿಕ್‌ ಅವರು ಕಂಜಿರಪಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ತನಿಖೆಗೆ ಸೂಚಿಸಿದ್ದರು. ತನಿಖೆ ನಡೆಸಿದ ಪೊಲೀಸರ ವಿಶೇಷ ತಂಡವು ಪ್ರಸ್ತುತ ಮಹಿಳೆಯ ವಿರುದ್ಧ ಇಲಾಖಾ ಕ್ರಮಕ್ಕೆ ಆಗ್ರಹಿಸಿ ಡಿಜಿಪಿಗೆ ವರದಿ ಸಲ್ಲಿಸಿದೆ.

ಪೊಲೀಸರ ಆಡಳಿತವನ್ನು ಟೀಕಿಸಿರುವ ಪೋಸ್ಟ್‌ ಒಂದನ್ನು ಪೊಲೀಸ್‌ ಅಧಿಕಾರಿಯೇ ಹಂಚಿಕೊಂಡಿರುವುದು ಇಲಾಖೆಯಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ತನ್ನ ಪತಿಯ ಫೇಸ್‌ಬುಕ್‌ ಪೋಸ್ಟ್ ಅನ್ನು ಹಂಚಿಕೊಂಡಿರುವುದಾಗಿ ಮಹಿಳಾ ಅಧಿಕಾರಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. 

ಆದರೆ, ಈ ಪ್ರಕರಣದಲ್ಲಿ ಮಹಿಳೆಯೇ ಲೋಪ ಎಸಗಿದ್ದಾರೆ ಎಂದು ಅಂತಿಮ ತನಿಖಾ ತಂಡ ಅಭಿಪ್ರಾಯಪಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್