ಸುದ್ದಿ ನೋಟ | ಶಾಲೆ ಪ್ರವೇಶಾತಿಗೆ ಆರು ವರ್ಷ ಕಡ್ಡಾಯ ಮಾಡುವ ಅಗತ್ಯವಿಲ್ಲ ಎಂದ ತಜ್ಞರು

ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಟ ವಯೋಮಿತಿ ಜೂನ್ ಒಂದಕ್ಕೆ ಕಡ್ಡಾಯವಾಗಿ ಆರು ವರ್ಷ ತುಂಬಿರಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಯಮದಿಂದ ಮಕ್ಕಳು ಕೆಲ ಸಮಯ ವಿದ್ಯಾಭ್ಯಾಸದಿಂದ ದೂರವಾಗಿ ಮನೆಯಲ್ಲಿ ಉಳಿಯುವ ಸಾಧ್ಯತೆಯೂ ಇದೆ.

ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಟ ವಯೋಮಿತಿ ಜೂನ್ ಒಂದಕ್ಕೆ ಕಡ್ಡಾಯವಾಗಿ ಆರು ವರ್ಷ ತುಂಬಿರಬೇಕು ಎನ್ನುವ ಹೊಸ ನಿಯಮವನ್ನು ಸಮರ್ಥಿಸಿಕೊಳ್ಳಲು ಅಧಿಕಾರಿಗಳು ಇತರ 21 ರಾಜ್ಯಗಳು ಈ ನಿಯಮ ಜಾರಿಗೆ ತಂದಿವೆ ಎಂದು ಹೇಳುತ್ತಿದ್ದಾರೆ. ಇತರ ರಾಜ್ಯಗಳು ನಿಯಮ ಜಾರಿಗೆ ತಂದಾಕ್ಷಣ ನಮ್ಮ ರಾಜ್ಯದಲ್ಲಿಯೂ ತರಲೇಬೇಕಾ ಎಂಬ ಪ್ರಶ್ನೆ ಹುಟ್ಟಿದೆ.

ಈ ನಿಯಮ ವೈಜ್ಞಾನಿಕವಾಗಿ ಎಷ್ಟು ಸರಿಯಾಗಿದೆ? ಮಕ್ಕಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಈ ಬಗ್ಗೆ ಕರ್ನಾಟಕದ ಖಾಸಗಿ ಶಾಲೆಗಳ ಸಂಯೋಜಿತ ನಿರ್ವಹಣೆಗಳ ಪ್ರಧಾನ ಕಾರ್ಯದರ್ಶಿ, ಡಿ ಶಶಿಕುಮಾರ್ ಅವರು ಈದಿನ.ಕಾಮ್ ಜೊತೆ ಮಾತನಾಡಿ, ಕಲಿಕೆಯಲ್ಲಿ ಮಕ್ಕಳಿಗೆ ಹುಟ್ಟಿದ ಮೊದಲ ಐದು ವರ್ಷ ಯಾಕೆ ಮುಖ್ಯ ಎಂದು ವಿವರಿಸಿದ್ದಾರೆ. 

"ಮಗುವಿನ ಮೆದುಳಿನ ಬೆಳವಣಿಗೆಯ ಸಾಮರ್ಥ್ಯವನ್ನು, ಹಿಂದಿನ ಕಾಲಕ್ಕೆ ಹೋಲಿಸಿದರೆ, ಈಗ ಸಾಕಷ್ಟು ಪ್ರಗತಿಯಾಗಿದೆ. ಆರು ವರ್ಷದ ಮಕ್ಕಳಿನ ಕಲಿಯುವ ಸಾಮರ್ಥ್ಯ ಐದು ವರ್ಷದ ಮಗು ಹೊಂದಿದೆ. ಈ ಬಗ್ಗೆ ಯಾವುದೇ ಪುರಾವೆ ಸಿಗದಿದ್ದರೂ, ಪರಿಸ್ಥಿತಿಯಿಂದ ಅರ್ಥೈಸಿಕೊಳ್ಳಬಹುದು" ಎಂದು ಶಶಿಕುಮಾರ್ ಹೇಳಿದ್ದಾರೆ.

"ಮಗು ಹುಟ್ಟಿದ ಪ್ರಥಮ ಐದು ವರ್ಷಗಳಲ್ಲಿ ಮಗುವಿನ ತಿಳಿವಳಿಕೆಯ ನರಮಂಡಲದ ರಚನೆ ಆಗುತ್ತದೆ. ಸತತವಾಗಿ ಏನಾದರೂ ತಿಳಿಸುತ್ತಾ ಬಂದರೆ ಮಗುವಿನ ಮನಸಲ್ಲಿ ಅಚ್ಚಳಿಯುತ್ತದೆ. ಒಂದು ರಸ್ತೆಯಲ್ಲಿ ಒಮ್ಮೆ ಒಡಾಡಿದಾಗ, ರಸ್ತೆ ಆಗುವುದಿಲ್ಲ. ಆದರೆ, ಹತ್ತು ಬಾರಿ ಓಡಾಡಿದರೆ, ಕಿರು ದಾರಿ ನಿರ್ಮಾಣವಾಗುತ್ತೆ. 100 ಬಾರಿ ಓಡಾಡಿದರೆ ದೊಡ್ಡ ದಾರಿಯಾಗಿ ಬದಲಾಗುತ್ತದೆ. ಮೆದುಳಿನ ನರಮಂಡಲ ರಚನೆಯೂ ಹೀಗೆಯೇ ಆಗುತ್ತದೆ. ಮಗುವಿಗೆ ಕಲಿಕೆಯಲ್ಲಿ ನಿರಂತರತೆ ಅನ್ನುವುದು ಇದ್ದರೆ ಮಾತ್ರ ಜ್ಞಾನ ಅಭಿವೃದ್ಧಿಯಾಗುತ್ತದೆ" ಎಂದು ಅವರು ವಿವರಿಸಿದರು.

ಮಕ್ಕಳಿಗೆ ಆರು ವರ್ಷ ಕಡ್ಡಾಯ ಅಗತ್ಯವೆ?

ತಜ್ಞರ ಪ್ರಕಾರ, ಮಕ್ಕಳ ಪ್ರಗತಿಯತ್ತ ಯೋಚನೆ ಮಾಡಬೇಕು. ಈಗಿನ ಮಕ್ಕಳ ಬುದ್ಧಿ ಮಟ್ಟದ ಸಾಮರ್ಥ್ಯ ಸಾಕಷ್ಟು ಅಭಿವೃದ್ಧಿಯಾಗಿದೆ. ಯಾಕೆಂದರೆ ಮಕ್ಕಳ ‘ನ್ಯೂರೋಜೆನೆಸಿಸ್’ ತುಂಬಾ ಶಕ್ತಿಯುತವಾಗಿದೆ. ನೀವು ಯಾವುದೇ ವಸ್ತುಗಳನ್ನ ಅಥವಾ ಸಾಧನಗಳನ್ನ ತೋರಿಸಿದರೆ ಅದನ್ನು ಗ್ರಹಿಸುವಷ್ಟು ಸಾಮರ್ಥ್ಯ ಹೊಂದಿದ್ದಾರೆ. 

ಒಂದು ಮಗುವಿನ ಮೆದುಳಿನ ನರಮಂಡಲದಲ್ಲಿ, ಮೊದಲ ಐದು ವರ್ಷ 40 ರೀತಿಯ ವಿವಿಧ ಭಾಷೆಗಳನ್ನು ಕಲಿತು ಅರ್ಥೈಸಿಕೊಳ್ಳುವ ಸಾಮರ್ಥ್ಯವಿದೆ. ಒಂದು ಮಗುವಿನ ಮೆದುಳಿನಲ್ಲಿ ಸುಮಾರು ಒಂದು ಡಜನ್ (12) ವಿಶ್ವವಿದ್ಯಾಲಯಗಳ ಪ್ರಮಾಣಪತ್ರ ದಾಖಲಿಸಬಹುದಾದಷ್ಟು ಸಾಮರ್ಥ್ಯವಿದೆ. ಒಂದು ಸಂಪೂರ್ಣ ವಿಶ್ವಕೋಶ ತಲೆಯಲ್ಲಿ ಉಳಿಸಿಕೊಳ್ಳುವಷ್ಟು ಶಕ್ತಿ ಮಕ್ಕಳಲಿದೆ. ಈ ಎಲ್ಲ ಸಾಮರ್ಥ್ಯಕ್ಕೆ ಕೇವಲ ಶೇ. 5ರಿಂದ 7ರಷ್ಟು ಮಾತ್ರ ಮೆದುಳು ಬಳಕೆಯಾಗುತ್ತದೆ. ಈಗಿರುವಾಗ ಮಕ್ಕಳ ಕಲಿಕೆ ಬಗ್ಗೆ ಸರ್ಕಾರಕ್ಕೆ ಅನುಮಾನ ಯಾಕೆ? ಎಂದು ಶಶಿಕುಮಾರ್ ಪ್ರಶ್ನಿಸಿದ್ದಾರೆ.

ಮನೋವೈದ್ಯರಾದ ಡಾ. ಸಿ ಆರ್ ಚಂದ್ರಶೇಖರ್ ಈದಿನ.ಕಾಮ್ ಜೊತೆ ಮಾತನಾಡಿ, “ನಮ್ಮ ಕಾಲಕ್ಕೂ, ನಿಮ್ಮ ಕಾಲಕ್ಕೂ ಹೋಲಿಸಿದರೆ ಈಗಿನ ಮಕ್ಕಳು ಸಾಕಷ್ಟು ಬುದ್ದಿವಂತರಿದ್ದಾರೆ. ಕಲಿಕೆಯಲ್ಲಿ ಬಹಳಷ್ಟು ಮುಂದಿದ್ದಾರೆ. ಈ ಬಗ್ಗೆ ಶಿಕ್ಷಣ ಅಧಿಕಾರಿಗಳು, ನಿಮ್ಹಾನ್ಸ್ ತಜ್ಞರ ಅಭಿಪ್ರಾಯ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಮಕ್ಕಳ ತಜ್ಞರ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಕೇಳಬೇಕು. ಎರಡು ತಿಂಗಳು ಅಂತರವಿದ್ದರೆ ಯಾವ ಸಮಸ್ಯೆಯಾಗುವುದಿಲ್ಲ. ಎಲ್ಲರಿಗೂ ತಿಳಿದಿರುವ ಹಾಗೇ ಕಳೆದ 30 ವರ್ಷಕ್ಕೆ ಹೋಲಿಸಿದರೆ, ಶೇ. 90ರಷ್ಟು ಇವಾಗಿನ ಮಕ್ಕಳು ಕಲಿಕೆಯಲ್ಲಿ ಬಹಳಷ್ಟು ತುಂಬಾ ಮುಂದಿದ್ದಾರೆ” ಎಂದು ತಿಳಿಸಿದರು.

"ಒಂದು ಮಗುವಿನ ಸಾಮರ್ಥ್ಯ ಅಳೆಯುವುದು ಶಿಕ್ಷಣವೂ ಅಲ್ಲ, ಶಿಕ್ಷಣೇತರವೂ ಅಲ್ಲ. ಮಗುವಿನ ಸಮಗ್ರ ಸಾಮರ್ಥ್ಯಯಿಂದ ಮಗು ಎಷ್ಟು ಬುದ್ದಿವಂತವಾಗಿದೆ ಎಂದು ತಿಳಿಯುತ್ತದೆ. ಉದಾಹರಣೆಗೆ ಆರು ವರ್ಷ ತುಂಬಿದ ಮಗು ತುಂಬಾ ಚೆನ್ನಾಗಿ ಓದಿದರೆ, ಆರು ವರ್ಷ ತುಂಬದ ಮಗು ಅಷ್ಟೆ ಚೆನ್ನಾಗಿ ಓದಲು ಸಾಧ್ಯವಿಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಮಕ್ಕಳ ನಡುವೆ ಎರಡು ಮೂರು ತಿಂಗಳ ಅಂತರವಿದ್ದರೆ, ದೈಹಿಕವಾಗಿ ವ್ಯಾತ್ಯಾಸವಿರುತ್ತದೆ. ಆದರೆ, ಸಾರ್ವತ್ರಿಕವಾಗಿ ಅಲ್ಲ.  ಓಟದ ಸ್ಪರ್ಧೆಯಲ್ಲಿ ಐದು ವರ್ಷದ ಮಗು ಜೋರಾಗಿ ಓಡಬಹುದು. 5.10 ವರ್ಷದ ಮಗು ನಿಧನವಾಗಿ ಓಡಬಹುದು. ಈ ಎಲ್ಲ ಅಂಶಗಳು, ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೀವಿ, ದೇಹವನ್ನ ಹೇಗೆ ಪಳಗಿಸಿರುತ್ತೀರಾ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಸಾಮರ್ಥ್ಯದಲ್ಲಿ ವಯಸ್ಸು ಮುಖ್ಯವಲ್ಲ" ಎಂದು ಶಶಿಕುಮಾರ್ ಹೇಳಿದ್ದಾರೆ.

ಕಡ್ಡಾಯ ವಯಸ್ಸು ನಿಗದಿಯಿಂದ ಸಮಸ್ಯೆ

ಜೂನ್ ಒಂದಕ್ಕೆ ಮಗು ಆರು ವರ್ಷ ತುಂಬಿರಬೇಕು ಎಂಬುದಾದರೆ, ಎಲ್ಲ ಮಕ್ಕಳು ಒಂದೇ ದಿನಾಂಕದಲ್ಲಿ ಹುಟ್ಟುವುದಕ್ಕೆ ಸಾಧ್ಯವಿಲ್ಲ. ಆರರಿಂದ 14 ವರ್ಷ ಅನ್ನುವುದು ಶಾಲೆಗೆ ಸೇರಿಸಲು ಒಂದು ಅಂದಾಜು ವಯಸ್ಸು. ಹಾಗಾದ ಮಾತ್ರಕ್ಕೆ ಆರು ವರ್ಷ ಕಡ್ಡಾಯವಾಗಿ ತುಂಬಿರಲೇ ಬೇಕು ಎಂಬುದು ಎಷ್ಟು ಸರಿ. ಜೂನ್ ಒಂದಕ್ಕೆ ಸರಿಯಾಗಿ ಆರು ವರ್ಷ ತುಂಬುವಂತೆ ಮಕ್ಕಳು ಜನಿಸುವುದಿಲ್ಲ. ಆರು ವರ್ಷ ಕಡ್ಡಾಯ ಮಾಡಿರುವ ಈ ವೈಜ್ಞಾನಿಕ ನಿಯಮದಿಂದ ಪಾಲಕರಿಗೆ, ನಾಗರೀಕರಿಗೆ ಕಷ್ಟವಾಗುತ್ತದೆ, ಹೊರತು ಅಧಿಕಾರಿಗಳಿಗೆ ಅಲ್ಲ. 

ಈ ಸುದ್ದಿ ಓದಿದ್ದೀರಾ? ವಿಶೇಷ ವರದಿ | ಒಂದನೇ ತರಗತಿ ಪ್ರವೇಶಾತಿಗೆ ಆರು ವರ್ಷ ಕಡ್ಡಾಯದ ಸುತ್ತ ಏನಿದು ಗೊಂದಲ?

ನಕಲಿ ಜನ್ಮ ದಿನಾಂಕ ಪ್ರಮಾಣಪತ್ರ ಮಾಡಿಸಿಕೊಳ್ಳುವುದರ ಬಗ್ಗೆ ಮಾತನಾಡಿದ ಶಶಿ ಕುಮಾರ್, “ಯಾರಾದರೂ ತುಂಬಾ ಬುದ್ಧಿ ಉಪಯೋಗಿಸಿ ನಕಲಿ ಮಾಡಿಸಬಹುದೇ ಹೊರತು, ಡಿಜಿಟಲ್ ವ್ಯವಸ್ಥೆ ಇರುವುದರಿಂದ ನಕಲಿ ಜನ್ಮ ದಿನಾಂಕ ಪ್ರಮಾಣ ಪತ್ರ ಪಡೆಯುವುದು ತುಂಬಾ ಕಷ್ಟವಿದೆ” ಎಂದು ತಿಳಿಸಿದರು.

ಶೈಕ್ಷಣಿಕವಾಗಿ ಶಾಲೆಗೆ ಸೇರಿಸಲು ಮಕ್ಕಳು ವಯಸ್ಸು ಆರರಿಂದ 14 ವರ್ಷ ಇರಬೇಕು ಎಂದು ಒಂದು ದಿನಾಂಕ ನಿಗದಿ ಮಾಡಬೇಕು. ಚಾಲನಾ ಪರವಾನಿಗೆ ಪಡೆಯಲು 18 ವರ್ಷ ಆಗಿರಬೇಕು ಎಂಬ ನಿಯಮವಿದೆ. 18 ವರ್ಷ ತುಂಬಿದ ತಕ್ಷಣ ಪರವಾನಿಗೆ ಪಡೆಯಬಹುದು. ಆದರೆ, ಶಾಲೆ ಶುರುವಾಗಿ ಅರ್ಧ ವರ್ಷ ಮುಗಿದ ಮೇಲೆ ಮಗುವಿಗೆ ಆರು ವರ್ಷ ತುಂಬಿದರೇ, ಆ ಸಮಯದಲ್ಲಿ ಮಗುವನ್ನು ಶಾಲೆಗೆ ಸೇರಿಸಲು ಅವಕಾಶವಿದಿಯಾ? ಎಂದು ಅವರು ಪ್ರಶ್ನಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180