ಶ್ರೀಲಂಕಾ| ತುರ್ತು ಪರಿಸ್ಥಿತಿ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ

Srilanka
  • ಫೇಸ್‌ಬುಕ್‌, ಟ್ವಿಟರ್, ವಾಟ್ಸಾಪ್, ಯೂಟ್ಯೂಬ್ ಬಳಕೆಗೆ ನಿರ್ಬಂಧ
  • ಪ್ರಚೋದನೆ ನೀಡುವ ಸಂದೇಶ ತಡೆಯಲು ಕ್ರಮ ಕೈಗೊಂಡ ಶ್ರೀಲಂಕಾ

ಆಹಾರ, ಔಷಧ ಮತ್ತು ಇಂಧನಗಳ ಕೊರತೆಯಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳನ್ನೂ ನಿರ್ಬಂಧಿಸಲಾಗಿದೆ.

ಭಾನುವಾರ ಮಧ್ಯರಾತ್ರಿಯಿಂದಲೇ ಫೇಸ್‌ಬುಕ್‌, ಟ್ವಿಟರ್, ವಾಟ್ಸಾಪ್, ಯೂಟ್ಯೂಬ್, ಸ್ನ್ಯಾಪ್ ಚಾಟ್, ಟಿಕ್‌ಟಾಕ್‌ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ಶ್ರೀಲಂಕಾ ಸರ್ಕಾರ ರಾಷ್ಟ್ರವ್ಯಾಪಿಯಾಗಿ ನಿರ್ಬಂಧಿಸಿದೆ. ಈ ಕುರಿತು ನೆಟ್‌ಬ್ಲಾಕ್‌ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಸುಳ್ಳು ಮಾಹಿತಿ ಮತ್ತು ಗಲಭೆಗೆ ಪ್ರಚೋದನೆ ನೀಡುವ ಸಂದೇಶಗಳು ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

AV Eye Hospital ad

ಶ್ರೀಲಂಕಾ ಜನತೆಯ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದಿದೆ. ಸರ್ಕಾರದ ವಿರುದ್ಧದ ಪ್ರತಿಭಟನೆಗಳನ್ನು ಹತ್ತಿಕ್ಕಲು ದ್ವೀಪ ರಾಷ್ಟ್ರದಲ್ಲಿ ಶನಿವಾರ ಸಂಜೆಯಿಂದಲೇ ಕರ್ಫ್ಯೂ ಜಾರಿಯಾಗಿದ್ದು, ಮುಂದಿನ 36 ಗಂಟೆ ಅಸ್ತಿತ್ವದಲ್ಲಿರಲಿದೆ.  ಅಧ್ಯಕ್ಷ ಗೋಟಬಯ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಿ ಅವರ ನಿವಾಸದೆದುರು ಐದು ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆದಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಟಲಿ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸಿಡಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇದನ್ನೂ ಓದಿದ್ದೀರಾ? ಪಾಕಿಸ್ತಾನ| ಸಂಸತ್ತು ವಿಸರ್ಜಿಸಿದ ರಾಷ್ಟ್ರಪತಿ, ಚುನಾವಣೆಗೆ ಸಜ್ಜಾಗಲು ಇಮ್ರಾನ್ ಖಾನ್ ಕರೆ

ಕರ್ಫ್ಯೂ ಹಾಗೂ ತುರ್ತು ಪರಿಸ್ಥಿತಿ ಜಾರಿಯಾದ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನೆಗೆ ಕರೆ ನೀಡುವ ಪೋಸ್ಟ್‌ಗಳು ಹರಿದಾಡುತ್ತಿದ್ದವು. 'ಗೋ ಹೋಮ್ ರಾಜಪಕ್ಸೆ', 'ಗೊಟ ಗೋ ಹೋಮ್' ಮುಂತಾದ ಹ್ಯಾಷ್‌ಟ್ಯಾಗ್‌ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಟ್ರೆಂಡ್ ಆಗಿದ್ದವು. "ಅಶ್ರುವಾಯುಗಳಿಂದ ಹಿಮ್ಮೆಟ್ಟಬೇಡಿ" ಎಂದು  ಪೊಲೀಸರು ಪ್ರತಿಭಟನೆಗೆ ಅಡ್ಡಿಪಡಿಸಿದರೂ ಅದಕ್ಕೆ ಜಗ್ಗದೆ ಬೀದಿಗಿಳಿಯುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಲಾಗಿತ್ತು.

ಕರ್ಪ್ಯೂ ಜಾರಿಯಲ್ಲಿದ್ದರೂ ಶ್ರೀಲಂಕಾದ ಹಲವು ನಗರಗಳಲ್ಲಿ ಜನರು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಹಿಂಸಾಚಾರಗಳನ್ನು ತಡೆಯುವ ಕಾರಣ ನೀಡಿ ನಾಗರಿಕರ ಬದುಕಿನ ಮೇಲೆ ನಿರ್ಬಂಧಗಳನ್ನು ಹೇರಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಆಕ್ರೋಶ ವ್ಯಕ್ತಪಡಿಸಿದೆ.

ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಶ್ರೀಲಂಕಾದ ಪ್ರವಾಸೋದ್ಯಮ ಕ್ಷೇತ್ರವು ನೆಲಕಚ್ಚಿದ್ದು, ದ್ವೀಪ ರಾಷ್ಟ್ರದ ಆರ್ಥಿಕತೆಯು ಪತನದತ್ತ ಸಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app