
- ಮುಂದುವರಿದ ಕೇಂದ್ರ ಸರ್ಕಾರ-ಸುಪ್ರೀಂ ಕೋರ್ಟ್ ನಡುವಿನ ಜಟಾಪಟಿ
- ಕೊಲಿಜಿಯಂ ಶಿಫಾರಸು ಮಾಡಿದ್ದ ಇಬ್ಬರಿಗೆ ಮಾತ್ರ ಮುಂಬಡ್ತಿ ನೀಡಿದ ಕೇಂದ್ರ
ವಿವಿಧ ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿ ಸಂಬಂಧ 19 ಕಡತಗಳನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನ ಕೊಲಿಜಿಯಂಗೆ ಹಿಂದಿರುಗಿಸಿದೆ.
ನ.28ರಂದು ಸುಪ್ರೀಂ ಕೋರ್ಟ್ ನ್ಯಾಯಾಂಗ ನೇಮಕಾತಿ ಕುರಿತ ವಿಚಾರಣೆಗೆ ಕೆಲವೇ ಗಂಟೆಗಳಿಗೂ ಮುನ್ನ ಹಲವು ಶಿಫಾರಸುಗಳನ್ನು ಹಿಂತಿರುಗಿಸಿದೆ. 19 ಕಡತಗಳಲ್ಲಿ ಕೊಲಿಜಿಯಂ ಪುನರುಚ್ಚರಿಸಿರುವ 10 ಹೆಸರುಗಳು ಮತ್ತು ಹೊಸದಾಗಿ ಶಿಫಾರಸು ಮಾಡಿದ್ದ ಒಂಭತ್ತು ಜನರ ಹೆಸರುಗಳು ಸೇರಿವೆ. ಕೊಲಿಜಿಯಂ ಶಿಫಾರಸು ಮಾಡಿದ್ದ 21 ಹೆಸರುಗಳಲ್ಲಿ ಕೇವಲ ಇಬ್ಬರ ಹೆಸರನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರ, ಉಳಿದ ಕಡತಗಳನ್ನು ವಾಪಸ್ ಕಳಿಸಿದೆ.
ವಕೀಲರಾದ ಸಂತೋಷ್ ಗೋವಿಂದ್ ಚಾಪಲ್ ಗಾಂವ್ಕರ್ ಮತ್ತು ಮಿಲಿಂದ್ ಮನೋಹರ್ ಸಾಥಾಯೆ ಅವರನ್ನು ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರನ್ನಾಗಿ ನೇಮಿಸಿ ಮಂಗಳವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.
ಕೇಂದ್ರ ಸರ್ಕಾರ, ಹಿಂದಿರುಗಿಸಿದ ಹತ್ತು ಕಡತಗಳಲ್ಲಿ, ಅಲಹಾಬಾದ್ ಹೈಕೋರ್ಟ್ಗೆ ಐವರು, ಕೋಲ್ಕತ್ತಾ ಹೈಕೋರ್ಟ್ಗೆ ಇಬ್ಬರು, ಕೇರಳ ಹೈಕೋರ್ಟ್ಗೆ ಇಬ್ಬರು ಹಾಗೂ ಕರ್ನಾಟಕ ಹೈಕೋರ್ಟ್ಗೆ ಒಬ್ಬರ ನ್ಯಾಯಮೂರ್ತಿಗಳನ್ನು ಕೊಲಿಜಿಯಂ ಶಿಫಾರಸು ಮಾಡಿತ್ತು.
ಸೆ.26ರಂದು ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನಾಗಿ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಅದನ್ನೂ ತಿರಸ್ಕರಿಸಿದೆ.
ಹೈಕೋರ್ಟ್ಗಳ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಕೊಲಿಜಿಯಂ ಪುನರುಚ್ಚರಿಸಿದ ಹತ್ತು ಹೆಸರುಗಳು
ಅಲಹಾಬಾದ್ ಹೈಕೋರ್ಟ್
ಕ್ರ.ಸಂ | ಹೆಸರು | ಶಿಫಾರಸು ಮಾಡಿದ ದಿನಾಂಕ |
ಪುನರುಚ್ಚಾರ |
1 | ರಿಶಾದ್ ಮುರ್ತಾಜಾ | 2021 ಆ.24 | 2022, ಜುಲೈ 14 |
2 | ಶಿಶಿರ್ ಜೈನ್ | 2021 ಆ. 24 | 2022, ಜುಲೈ 14 |
3 | ಧ್ರುವ ಮಾಥುರ್ | 2021 ಆ. 24 | 2022, ಜುಲೈ 14 |
4 | ವಿಮಲೇಂದು ತ್ರಿಪಾಠಿ | 2021 ಆ. 24 | 2022, ಜುಲೈ 14 |
5 | ಮನು ಖರೆ | 2021, ಅ.10 | 2022, ಜುಲೈ 14 |
ಕೋಲ್ಕತ್ತಾ ಹೈಕೋರ್ಟ್
ಕ್ರ.ಸಂ | ಹೆಸರು | ಶಿಫಾರಸು ಮಾಡಿದ ದಿನಾಂಕ | ಪುನರುಚ್ಚಾರ |
1 | ಅಮಿತೇಶ್ ಬ್ಯಾನರ್ಜಿ | 2019 ಜುಲೈ 24 | 2021 ಸೆ.1 |
2 | ಸಕ್ಯಾ ಸೇನ್ | 2019 ಜುಲೈ 24 | 2021 ಅ.8 |
ಕರ್ನಾಟಕ ಹೈಕೋರ್ಟ್
ಕ್ರ.ಸಂ | ಹೆಸರು | ಶಿಫಾರಸು ಮಾಡಿದ ದಿನಾಂಕ | ಪುನುರುಚ್ಚಾರ |
1 | ನಾಗೇಂದ್ರ ರಾಮಚಂದ್ರ ನಾಯ್ಕ | 2019, ಅ.10 |
2021 ಮಾ.2 2021 ಸೆ.1 |
ಕೇರಳ ಹೈಕೋರ್ಟ್
ಕ್ರ.ಸಂ | ಹೆಸರು | ಶಿಫಾರಸು ಮಾಡಿದ ದಿನಾಂಕ | ಪುನುರುಚ್ಚಾರ |
1 | ಸಂಜೀತ ಕಲ್ಲೂರು ಅರಕ್ಕಲ್ | 2021, ಸೆ.1 | 2021 ನ.11 |
2 | ಅರವಿಂದ ಕುಮಾರ್ ಬಾಬು ತಾವರಕ್ಕತ್ತಿಲ್ | 2021, ಸೆ.1 | 2021 ನ.11 |
ಹೊಸ ಶಿಫಾರಸುಗಳು
ಕ್ರ.ಸಂ | ಹೆಸರು | ಹೈಕೋರ್ಟ್ | ಶಿಫಾರಸು ಮಾಡಿದ ದಿನಾಂಕ |
1 | ಗಣೇಶ್ ರಾಮ್ ಮೀನಾ | ರಾಜಸ್ಥಾನ ಹೈಕೋರ್ಟ್ | 2021, ಸೆ.1 |
2 | ಮನೀಶ್ ಶರ್ಮಾ | ರಾಜಸ್ಥಾನ ಹೈಕೋರ್ಟ್ | 2021, ಅ.6 |
3 | ಸೌರಭ್ ಕಿರ್ಪಾಲ್ | ದೆಹಲಿ ಹೈಕೋರ್ಟ್ | 2021, ನ.11 |
4 | ಮಿರ್ಜಾ ಸೈಫುಲ್ಲಾ ಬೇಗ್ | ತೆಲಂಗಾಣ ಹೈಕೋರ್ಟ್ | 2022, ಫೆ.1 |
5 | ಸೋಮಶೇಖರ್ ಸುಂದರೇಶನ್ | ಬಾಂಬೆ ಹೈಕೋರ್ಟ್ | 2022, ಫೆ. 16 |
6 | ಆರ್ ಜಾನ್ ಸತ್ಯನ್ | ಮದ್ರಾಸ್ ಹೈಕೋರ್ಟ್ | 2022, ಫೆ. 16 |
7 | ಅಬ್ದುಲ್ ಘನಿ ಅಬ್ದುಲ್ ಹಮೀದ್ | ಮದ್ರಾಸ್ ಹೈಕೋರ್ಟ್ | 2022, ಫೆ 16 |
8 | ಸುಮನ್ ಪಟ್ಟನಾಯಕ್ | ಒರಿಸ್ಸಾ ಹೈಕೋರ್ಟ್ | 2022 ಜುಲೈ 25 |
9 | ಹರ್ಪ್ರೀತ್ ಸಿಂಗ್ ಬ್ರಾರ್ | ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ | 2022, ಜುಲೈ 25 |
ಸುಪ್ರೀಂ ಕೋರ್ಟಿನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಕೊಲಿಜಿಯಂನ ಭಾಗವಾಗಿದ್ದಾರೆ.
ಕೊಲಿಜಿಯಂ ವ್ಯವಸ್ಥೆ ಕುರಿತು ಕಾನೂನು ಸಚಿವ ಕಿರಣ್ ರಿಜಿಜು ಆಡಿದ್ದ ಮಾತಿಗೆ ಸುಪ್ರೀಂ ಕೋರ್ಟ್ ಸೋಮವಾರ (ನ.28) ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. "ಕೇಂದ್ರ ಸರ್ಕಾರವು 2014ರಲ್ಲಿ ರೂಪಿಸಿದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವು (ಎನ್ಜೆಎಸಿ) ಜಾರಿಗೆ ಬರಲಿಲ್ಲ ಎಂಬ ಕಾರಣಕ್ಕೆ ಕೊಲಿಜಿಯಂನ ಶಿಫಾರಸುಗಳನ್ನು ತಡೆ ಹಿಡಿಯಲಾಗುತ್ತಿದೆಯೇ" ಎಂದು ಪ್ರಶ್ನಿಸಿತ್ತು.
"ಶಿಫಾರಸನ್ನು ಪುನರುಚ್ಚರಿಸಿದರೆ ಸರ್ಕಾರವು ಅದಕ್ಕೆ ಒಪ್ಪಿಗೆ ನೀಡಲೇಬೇಕು. ಕಾನೂನಿನ ಪ್ರಕಾರ, ಅಲ್ಲಿಗೆ ಆ ವಿಚಾರವು ಕೊನೆಗೊಳ್ಳುತ್ತದೆ" ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠವು ಹೇಳಿತ್ತು.
"ಕೆಲವು ಹೆಸರುಗಳು ಒಂದೂವರೆ ವರ್ಷದಿಂದ ಬಾಕಿ ಇವೆ. ಸರ್ಕಾರವು ನೇಮಕಾತಿ ವ್ಯವಸ್ಥೆಯನ್ನೇ ವ್ಯರ್ಥಗೊಳಿಸಲು ಯತ್ನಿಸುತ್ತಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿಯೇ ಕೆಲವು ವಕೀಲರು ನೇಮಕಕ್ಕೆ ಕೊಟ್ಟ ಸಮ್ಮತಿಯನ್ನು ವಾಪಸ್ ತೆಗೆದುಕೊಳ್ಳುತ್ತಿದ್ದಾರೆ. ಸೇವಾ ಹಿರಿತನವನ್ನು ಕೂಡ ಗಮನದಲ್ಲಿ ಇರಿಸಿಕೊಂಡು ಹೆಸರುಗಳನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ಕೆಲವು ಹೆಸರುಗಳಿಗೆ ಮಾತ್ರ ಒಪ್ಪಿಗೆ ಕೊಟ್ಟು ಕೆಲವು ಹೆಸರುಗಳನ್ನು ಬಾಕಿ ಉಳಿಸಿಕೊಳ್ಳುವುದರಿಂದ ನ್ಯಾಯಾಂಗದಲ್ಲಿನ ಸೇವಾ ಹಿರಿತನವು ಅಸ್ತವ್ಯಸ್ತವಾಗುತ್ತದೆ" ಎಂದೂ ಪೀಠವು ಆಕ್ರೋಶ ವ್ಯಕ್ತಪಡಿಸಿತ್ತು.
ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು, "ಸರ್ಕಾರವು ಕಡತವನ್ನು ಹಿಡಿದಿಟ್ಟು ಕೊಂಡಿದೆ ಎಂದು ದೂರಬೇಡಿ. ನೀವು ಸರ್ಕಾರಕ್ಕೆ ಕಡತವನ್ನೇ ಕಳುಹಿಸಬೇಡಿ. ನೀವೇ ನೇಮಕಾತಿ ಮಾಡಿಕೊಳ್ಳಿ. ಎಲ್ಲವನ್ನೂ ನೀವೇ ನಿರ್ವಹಿಸಿ" ಎಂದು ಸುಪ್ರೀಂ ಕೋರ್ಟ್ನ ಕೊಲಿಜಿಯಂ ವ್ಯವಸ್ಥೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.