ಬಾಲಮಂದಿರಗಳಿಂದ 484 ಮಕ್ಕಳು ನಾಪತ್ತೆ: ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಮಾಹಿತಿ

  • ಸರ್ಕಾರ ಕೈಗೊಂಡಿರುವ ಕ್ರಮಗಳ ವಸ್ತುಸ್ಥಿತಿ ವರದಿ ಸಲ್ಲಿಸಿ
  • 352 ಮಕ್ಕಳನ್ನು ಪತ್ತೆ ಮಾಡಿರುವುದಾಗಿ ವರದಿಯಲ್ಲಿ ಉಲ್ಲೇಖ

ರಾಜ್ಯದ ಬಾಲಮಂದಿರಗಳಿಂದ ಈವರೆಗೆ 484 ಮಕ್ಕಳು ಕಾಣೆಯಾಗಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. 

ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ ಸಿ ರಾಜಣ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರದ ಪರ ವಕೀಲರು ಅನುಪಾಲನಾ ವರದಿ ಸಲ್ಲಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ವರದಿ ದಾಖಲಿಸಿಕೊಂಡ ಪೀಠವು ಸರ್ಕಾರ ವರದಿ ಸಲ್ಲಿಸಿ ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ಈ ವರದಿಯ ನಂತರ ಕೈಗೊಂಡಿರುವ ಕ್ರಮಗಳ ವಸ್ತುಸ್ಥಿತಿ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರವಾಗಿ ವಕೀಲ ಎಸ್ ಉಮಾಪತಿ ವಾದ ಮಂಡಿಸಿದರು.

ರಾಜ್ಯ ಸರ್ಕಾರದ ಅಧೀನದಲ್ಲಿರುವ ಬಾಲಮಂದಿರಗಳಿಂದ ಕಳೆದ ಕೆಲ ವರ್ಷಗಳಲ್ಲಿ 141 ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಇದಕ್ಕೆ, ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಕೈಗೊಂಡಿರುವ ಕ್ರಮಗಳ ಸಮಗ್ರ ವರದಿ ಸಲ್ಲಿಸುವಂತೆ 2022ರ ಫೆಬ್ರವರಿ 22ರಂದು ಹೈಕೋರ್ಟ್ ಆದೇಶಿಸಿತ್ತು. ಇದರ ಅನ್ವಯ ಮಾರ್ಚ್‌ 25ರಂದು ಸರ್ಕಾರ ಅನುಪಾಲನಾ ವರದಿ ಸಲ್ಲಿಸಿತ್ತು.

ಅನುಪಾಲನಾ ವರದಿಯಲ್ಲಿ ಏನಿದೆ?

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುತ್ತಿರುವ ವಿವಿಧ ಸಂಸ್ಥೆಗಳಿಂದ 484 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಪೈಕಿ 352 ಮಕ್ಕಳನ್ನು ಪತ್ತೆ ಮಾಡಲಾಗಿದ್ದು, 2016ರಿಂದ 2021 ಅಕ್ಟೋಬರ್‌ವರೆಗೆ ಕಾಣೆಯಾಗಿರುವ ಮಕ್ಕಳ ಪೈಕಿ 132 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಪತ್ತೆಯಾಗಿರುವ 352 ಮಕ್ಕಳ ಪೈಕಿ 340 ಮಕ್ಕಳು ತಮ್ಮ ಪೋಷಕರೊಂದಿಗೆ ವಾಸವಾಗಿದ್ದಾರೆ. 10 ಮಕ್ಕಳು ಬಾಲಮಂದಿರಗಳಲ್ಲಿ ತಂಗಿದ್ದು, ಎಚ್‌ಐವಿ-ಟಿಬಿ ಕಾಯಿಲೆಯಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಶಿವರಾಮ ಕಾರಂತ ಬಡಾವಣೆಯ 355 ಕಟ್ಟಡಗಳನ್ನು ಸಕ್ರಮಗೊಳಿಸಲು ಬಿಡಿಎಗೆ ಸುಪ್ರೀಂ ಸೂಚನೆ

2015-16ರಿಂದ 2021ರ ಅಕ್ಟೋಬರ್‌ವರೆಗೆ ನಾಪತ್ತೆಯಾಗಿರುವ 132 ಮಕ್ಕಳಲ್ಲಿ 13 ಮಕ್ಕಳನ್ನು ಪತ್ತೆ ಮಾಡಲಾಗಿದೆ. ಇನ್ನೂ 19 ಮಕ್ಕಳನ್ನು ಪತ್ತೆ ಮಾಡಬೇಕಾಗಿದೆ. 2022ರ ಫೆಬ್ರವರಿಗೆ ಪತ್ತೆ ಮಾಡಲಾದ 13 ಮಕ್ಕಳಲ್ಲಿ 11 ಮಕ್ಕಳು ಪೋಷಕರೊಂದಿಗೆ ವಾಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳು ಬಾಲಮಂದಿರಗಳಲ್ಲಿದ್ದಾರೆ. ನಾಪತ್ತೆಯಾಗಿರುವ 119 ಮಕ್ಕಳ ಪ್ರಕರಣಗಳಲ್ಲಿ 66 ಪ್ರಕರಣಗಳನ್ನು ಮಾನವ ಕಳ್ಳಸಾಗಾಣಿಕೆ ತಡೆ ಘಟಕಗಳಿಗೆ (ಎಎಚ್‌ಟಿಯು) ಮತ್ತು 53 ಪ್ರಕರಣಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರದ ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್