
- ಬುಲ್ಬುಲ್ ಮೇಲೆ ಹಾರುವ ವಿ ಡಿ ಸಾವರ್ಕರ್ ಪಠ್ಯ ಪ್ರಸ್ತಾಪ
- ರಾಜ್ಯ ಸರ್ಕಾರದ ಪಠ್ಯರಚನಾ ಕ್ರಮಕ್ಕೆ ʻಕುಸ್ಮಾʼ ಆಕ್ಷೇಪ
"ಶಾಲಾ ಮಕ್ಕಳನ್ನು ರಾಜಕೀಯ ಪಕ್ಷಗಳ ಭವಿಷ್ಯದ ಮತದಾರರನ್ನಾಗಿ ರೂಪಿಸಲು ರಾಜ್ಯ ಸರ್ಕಾರ ಪಠ್ಯಪುಸ್ತಕವನ್ನು ಬಳಸಿಕೊಳ್ಳುತ್ತಿದೆ" ಎಂದು ಕರ್ನಾಟಕ ಅನುದಾನರಹಿತ ಶಾಲೆಗಳ ನಿರ್ವಹಣೆಗಳ ಸಂಘ (ಕುಸ್ಮಾ) ಹೈಕೋರ್ಟ್ಗೆ ಹೇಳಿದೆ.
"ಸ್ವಾತಂತ್ರ್ಯ ಹೋರಾಟಗಾರ ವಿ ಡಿ ಸಾವರ್ಕರ್ ಅವರನ್ನು ಬ್ರಿಟಿಷರು ಬಂಧಿಸಿಟ್ಟಿದ್ದ ಜೈಲಿನ ಕೋಣೆಗೆ ಬುಲ್ಬುಲ್ ಹಕ್ಕಿಗಳು ಹೋಗುತ್ತಿದ್ದವು. ಆ ಹಕ್ಕಿಗಳ ಮೇಲೆ ಕುಳಿತು ಸಾವರ್ಕರ್ ನಿತ್ಯ ತಾಯ್ನಾಡಿಗೆ ಹೋಗುತ್ತಿದ್ದರು" ಎಂದು ರಾಜ್ಯ ಶಾಲಾ ಪಠ್ಯಪುಸ್ತಕಗಳಲ್ಲಿ ಉಲ್ಲೇಖಿಸಿರುವುದಕ್ಕೆ ಕುಸ್ಮಾ ಈ ಆಕ್ಷೇಪ ವ್ಯಕ್ತಪಡಿಸಿದೆ.
"ಸರ್ಕಾರ ಮಾಡುವ ಇಂಥ ತಪ್ಪುಗಳನ್ನು ಎತ್ತಿ ತೋರಿಸುವ ಅಧಿಕಾರ ಕುಸ್ಮಾಗೆ ಇದೆ. ಸರ್ಕಾರದ ಇಂತಹ ಪಠ್ಯ ಪ್ರಕಟಣೆಗಳಿಗಿಂತ ಮುಕ್ತ ಮಾರುಕಟ್ಟೆಯ ಪಠ್ಯಗಳು ಹೆಚ್ಚು ಮಕ್ಕಳ ಸ್ನೇಹಿಯಾಗಿವೆ" ಎಂದು ಕುಸ್ಮಾ ನ್ಯಾಯಾಲಯದಲ್ಲಿ ಪ್ರತಿಪಾದಿಸಿದೆ.
1995ರಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಅನುದಾನರಹಿತ ಶಾಲೆಗಳಿಗೆ ಮೀಸಲಾತಿ ಅಡಿಯಲ್ಲಿ ಸಿಬ್ಬಂದಿ ನೇಮಕಾತಿ ಮತ್ತು ರಾಜ್ಯ ಸರ್ಕಾರದಿಂದ ಪಠ್ಯಕ್ರಮ ರಚನೆ ಕ್ರಮವನ್ನು ಪ್ರಶ್ನಿಸಲಾಗಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರವಾದ ಮಂಡಿಸಿದ ಹಿರಿಯ ವಕೀಲ ಕೆ ವಿ ಧನಂಜಯ ಅವರು, ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಸಾವರ್ಕರ್ ಕುರಿತಾದ ಕೆಲ ಸಾಲುಗಳು ಮತ್ತು 1984ರ ದೆಹಲಿ ಸಿಖ್ ಹತ್ಯಾಕಾಂಡದ ಕುರಿತ ಮಾಹಿತಿಗಳನ್ನು ಪ್ರಸ್ತಾಪಿಸಿದರು. "ನಿಗದಿಪಡಿಸಿದ ಪಠ್ಯಕ್ರಮಕ್ಕಿಂತ ಹೆಚ್ಚೇನೂ ಮಕ್ಕಳಿಗೆ ಕಲಿಸಬಾರದು ಎಂದು ನಿರ್ದೇಶಿಸುವ ನಿಬಂಧನೆಗಳಿಗೆ ಈ ಅಳವಡಿಕೆ ವಿರುದ್ಧವಾಗಿವೆ" ಎಂದು ಅವರು ವಾದಿಸಿದರು.
ಕುಸ್ಮಾ, ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ, "ಖಾಸಗಿ ಅಥವಾ ಅನುದಾನರಹಿತ ಶಾಲೆಗಳಲ್ಲಿ ಪಠ್ಯ ರಚನೆ ವಿಚಾರವಾಗಿ ರಾಜ್ಯ ಸರ್ಕಾರ ಯಾವುದೇ ಆದೇಶ ಹೊರಡಿಸಬಾರದು ಅಥವಾ ಆ ಕುರಿತಂತೆ ಶಿಫಾರಸು ಮಾಡಬಾರದು. ಪಠ್ಯ ರಚಿಸುವ ಅಧಿಕಾರವನ್ನು ತಮಗೇ ನೀಡಬೇಕು. ಇದರಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಬಾರದು" ಎಂದು ಉಲ್ಲೇಖಿಸಲಾಗಿತ್ತು. ಈ ಮೂಲಕ 1983ರ ನಿಬಂಧನೆಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
"ಮೀಸಲಾತಿಯ ಮೂಲಕ ಖಾಸಗಿ ಶಾಲೆಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಮಾಡುವಂತೆ ಸೂಚಿಸುವ ಸೆಕ್ಷನ್ 41(3), ಸೆಕ್ಷನ್ 5ಅನ್ನು ರದ್ದುಪಡಿಸಬೇಕು. ಇದೊಂದು ಅಸಂವಿಧಾನಿಕ ಕಾಯಿದೆಯಾಗಿದ್ದು, ಅದನ್ನು ತೆಗೆದುಹಾಕಬೇಕು" ಎಂದೂ ಕುಸ್ಮಾ ಅರ್ಜಿಯಲ್ಲಿ ಕೋರಿತ್ತು.
ಈ ಸುದ್ದಿ ಓದಿದ್ದೀರಾ?: ಶಿಕ್ಷಕರ ಅರ್ಹತಾ ಪರೀಕ್ಷೆಯ ಅಂತಿಮ ಕೀ ಉತ್ತರಗಳು ಇಂದು ಪ್ರಕಟ
"ಖಾಸಗಿ ಶಾಲೆಗಳಲ್ಲಿ ದುರ್ಬಲ ವರ್ಗಗಳು ಮತ್ತು ಹಿಂದುಳಿದ ವರ್ಗಗಳಿಗೆ ಸೀಟು ಹಂಚಿಕೆ ಮಾಡುವುದನ್ನು ನಿಲ್ಲಿಸಬೇಕು. ಜತೆಗೆ, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಖಾಸಗಿ ಶಾಲೆಗಳಿಗೆ ಅನ್ವಯಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ರಚನೆಯಲ್ಲಿ ಸರ್ಕಾರ ಮೂಗು ತೂರಿಸಬಾರದು" ಎಂದೂ ಅರ್ಜಿಯಲ್ಲಿ ಕೋರಲಾಗಿತ್ತು.