‘ದಿ ಕಾಶ್ಮೀರ್ ಫೈಲ್ಸ್’ ಕುರಿತ ಹೇಳಿಕೆ | ಇಸ್ರೇಲಿ ಚಿತ್ರ ನಿರ್ಮಾಪಕ ನದಾವ್‌ ಲ್ಯಾಪಿಡ್ ಕ್ಷಮೆಯಾಚನೆಗೆ ಕಾಶ್ಮೀರಿ ಪಂಡಿತರ ಪಟ್ಟು

The Kashmir Files
  • ಮಾರ್ಚ್ 11ರಂದು ಬಿಡುಗಡೆಯಾಗಿದ್ದ ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ 
  • ನದಾವ್ ಹೇಳಿಕೆಗೆ ಭಾರತೀಯರ ಕ್ಷಮೆ ಕೋರಿದ್ದ ಇಸ್ರೇಲ್ ರಾಯಭಾರಿ

ಗೋವಾದಲ್ಲಿ ನಡೆದ 53ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ‘ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರದ ಕುರಿತು ಹೇಳಿಕೆ ನೀಡಿರುವ ಇಸ್ರೇಲಿ ಚಿತ್ರ ನಿರ್ಮಾಪಕ ಹಾಗೂ ಐಎಫ್ಎಫ್ಐನ ತೀರ್ಪುಗಾರರ ಮುಖ್ಯಸ್ಥ ನದಾವ್ ಲ್ಯಾಪಿಡ್ ಅವರ ಬಗ್ಗೆ ಕಾಶ್ಮೀರಿ ಪಂಡಿತರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಕ್ಷಮೆಗೆ ಪಟ್ಟು ಹಿಡಿದಿದ್ದಾರೆ. 

ಇಸ್ರೇಲಿ ಚಿತ್ರ ನಿರ್ಮಾಪಕ ನದಾವ್ ಹೇಳಿಕೆಯನ್ನು ಮಂಗಳವಾರ (ನ.29) ಖಂಡಿಸಿದ್ದ ಭಾರತದಲ್ಲಿನ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ನದಾವ್ ಪರವಾಗಿ ಭಾರತೀಯರ ಕ್ಷಮೆಯಾಚಿಸಿದ್ದರು. 

Eedina App

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಾಶ್ಮೀರಿ ಪಂಡಿತರು, ಸಮುದಾಯವೊಂದು ತಮ್ಮದೇ ದೇಶದಲ್ಲಿ ನಿರಾಶ್ರಿತರಂತೆ ಬಾಳಿದ ನೋವು ಒಬ್ಬ ವಿದೇಶಿಗನಿಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ. 

ಸೋಮವಾರ (ನ.28) ಮುಕ್ತಾಯಗೊಂಡ ಐಎಫ್ಎಫ್ಐನ ಸಮಾರೋಪ ಸಮಾರಂಭದಲ್ಲಿ ನದಾವ್ ಲ್ಯಾಪಿಡ್ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಕಳಪೆ ದರ್ಜೆಯ ಅಪಪ್ರಚಾರ(ಪ್ರಾಪಗಾಂಡ) ಉದ್ದೇಶಿತ ಚಿತ್ರ. ಕೀಳು ಅಭಿರುಚಿ ಹೊಂದಿರುವ ಈ ಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸುವ ಅರ್ಹತೆ ಹೊಂದಿಲ್ಲ ಎಂದು ಟೀಕಿಸಿದ್ದರು. 

AV Eye Hospital ad

ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದ ಉಂಟು ಮಾಡಿತ್ತು. ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.  

“ತನ್ನ ಮತೀಯ ಹಿನ್ನೆಲೆಯ ಕಾರಣದಿಂದ ಕಿರುಕುಳಕ್ಕೊಳಗಾಗಿದ್ದ ಯಹೂದಿ ಸಮುದಾಯದ ವ್ಯಕ್ತಿಯಿಂದ ಈ ರೀತಿ ಹೇಳಿಕೆ ಬಂದಿರುವುದು ಆಶ್ಚರ್ಯ ಉಂಟುಮಾಡುತ್ತದೆ. 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರು ಅನುಭವಿಸಿದ ನೋವು ವಿದೇಶಿಗರ ಊಹೆಗೂ ನಿಲುಕುವುದಿಲ್ಲ” ಎಂದು ಕಾಶ್ಮೀರಿ ಪಂಡಿತ್ ನೌಕರರ ನಾಯಕ ರಂಜನ್ ಜ್ಯೋತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

‘ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಪ್ರತಿ ದೃಶ್ಯವೂ 1990ರ ದಶಕದ ವಾಸ್ತವವನ್ನು ಪ್ರತಿಬಿಂಬಿಸುತ್ತದೆ. ಆ ಅವಧಿಯಲ್ಲಿ ಕಾಶ್ಮೀರಿ ಪಂಡಿತರು ಅನುಭವಿಸಿದ ಕಷ್ಟಗಳನ್ನು ಅನಾವರಣಗೊಳಿಸುತ್ತದೆ. ಆ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ, ದೌರ್ಜನ್ಯದ ಸಂಕಟಗಳು ಇಸ್ರೇಲಿ ಸಿನಿಮಾ ನಿರ್ಮಾಪಕನಿಗೆ ಅರ್ಥವಾಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನದಾವ್ ಲ್ಯಾಪಿಡ್ ಹೇಳಿಕೆ ಕುರಿತು ಇಸ್ರೇಲ್ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಅವರೂ ಪ್ರತಿಕ್ರಿಯಿಸಿದ್ದಾರೆ. 

“ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಹಿಂದಿ ಚಿತ್ರದ ಕುರಿತ ಚರ್ಚೆಯು ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಚಿತ್ರದ ಕುರಿತು 53ನೇ ಐಎಫ್ಎಫ್ಐ ಸಮಾರೋಪದಲ್ಲಿ ನದಾಲ್ ಲ್ಯಾಪಿಡ್ ಮಾಡಿರುವ ಟೀಕೆ ಸಮರ್ಥನೀಯವಲ್ಲ” ಎಂದು ಕೊಬ್ಬಿ ಶೋಶಾನಿ ಹೇಳಿದ್ದಾರೆ. 

“ಅನುಪಮ್ ಖೇರ್ ಅವರಿಗೆ ಕರೆ ಮಾಡಿ ನದಾವ್ ಲ್ಯಾಪಿಡ್ ಅವರ ವಿವಾದಿತ ಟೀಕೆ, ಅವರ ವೈಯಕ್ತಿಕ ಹೇಳಿಕೆಗಾಗಿ ಕ್ಷಮೆ ಕೇಳಿದ್ದೇನೆ. ನದಾವ್ ಅವರ ಹೇಳಿಕೆಗೂ ಇಸ್ರೇಲ್‌ಗೂ ಅಧಿಕೃತ ಮತ್ತು ಅನಧಿಕೃತವಾಗಿಯೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲು ಇಚ್ಛಿಸುತ್ತೇನೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉತ್ತರಪ್ರದೇಶ | ಪೀಠೋಪಕರಣ ಮಳಿಗೆಯಲ್ಲಿ ಬೆಂಕಿ; ಮೂವರು ಮಕ್ಕಳು ಸೇರಿ ಕುಟುಂಬದ ಆರು ಮಂದಿ ಸಜೀವ ದಹನ

ವಿವೇಕ್ ಅಗ್ನಿಹೋತ್ರಿ ಚಿತ್ರಕಥೆ ಬರೆದು ನಿರ್ದೇಶಿಸಿದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಮಾರ್ಚ್ 11ರಂದು ಬಿಡುಗಡೆಯಾಗಿತ್ತು. ಇದನ್ನು ಜೀ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ನಟಿಸಿದ್ದಾರೆ.

ಇದು ಆಡಳಿತಾರೂಢ ಬಿಜೆಪಿಯಿಂದ ಶ್ಲಾಘಿಸಲ್ಪಟ್ಟಿತ್ತು. ಹೆಚ್ಚಿನ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ಮುಕ್ತ ಚಿತ್ರ ಎಂದು ಘೋಷಿಸಲ್ಪಟ್ಟಿತ್ತು. ಚಿತ್ರವು ಐಎಫ್ಎಫ್ಐನಲ್ಲಿ ಭಾರತೀಯ ಪನೋರಮಾ ವಿಭಾಗದ ಭಾಗವಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app