
- ವಿವಿಗಳು ಡಿಜಿಟಲ್, ಕೌಶಲ್ಯಾಧಾರಿತ ಕಲಿಯುವಾಗಲೇ ಸಂಪಾದಿಸು ಎಂದ ಸರ್ಕಾರ
- ಮೂಲ ಸೌಕರ್ಯ, ಜಾಗ, ಕಟ್ಟಡ ಇಲ್ಲದೆ ವಿವಿಗಳ ಏಳಿಗೆ ಅಸಾಧ್ಯ: ಎಐಡಿಎಸ್ಒ
ರಾಜ್ಯದಲ್ಲಿ ಈಗಿರುವ ಹಳೆ ಕಟ್ಟದಲ್ಲೇ ಏಳು ಮಾದರಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಮೂಲ ಸೌಕರ್ಯವಿಲ್ಲದೇ ವಿವಿಗಳ ಏಳಿಗೆ ಹೇಗೆ ಸಾಧ್ಯ ಎಂದು ಅಖಿಲ ಭಾರತದ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆ (ಎಐಡಿಎಸ್ಒ) ಪ್ರಶ್ನಿಸಿದೆ.
ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಏಳು ನೂತನ ಮಾದರಿಯ ವಿವಿಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಎಐಡಿಎಸ್ಒ ಖಂಡಿಸಿದೆ.
ಆದೇಶದಲ್ಲಿ ಹೇಳಲಾಗಿರುವಂತೆ ಏಳು ನೂತನ ಮಾದರಿ ವಿವಿಗಳು, ಪ್ರಸ್ತುತ ಇರುವ ಸ್ನಾತಕೋತ್ತರ ಕೇಂದ್ರಗಳಲ್ಲಿ ಪಾಠ ನಿರ್ವಹಿಸಬೇಕು. ವಿವಿ ಸ್ಥಾಪನೆಗಾಗಿ ಯಾವುದೇ ಜಮೀನು ಖರೀದಿಸಬಾರದು. ಹೊಸ ಕಟ್ಟಡ ಕಟ್ಟಬಾರದು. ಮಾತೃ ವಿವಿಯಲ್ಲಿ ಈಗಾಗಲೇ ಇರುವ ಹುದ್ದೆಗಳನ್ನೇ ಮಾದರಿ ವಿವಿಗಳು ಬಳಸಿಕೊಳ್ಳಬೇಕು. ಹೊಸ ಹುದ್ದೆಗಳು ಸೃಷ್ಟಿಯಾಗಬಾರದು. ವಿವಿಗಳು ಡಿಜಿಟಲ್ ಮತ್ತು ಕೌಶಲ್ಯಾಧಾರಿತ 'ಅರ್ನ್ ವೈಲ್ ಯು ಲರ್ನಿಂಗ್’ (ಕಲಿಯುವಾಗಲೇ ಸಂಪಾದಿಸು) ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕವನ್ನೇ ವಿವಿಯ ನಿರ್ವಹಣೆಗೆ ಬಳಸಿಕೊಳ್ಳಬೇಕು ಸೇರಿದಂತೆ ಇನ್ನೂ ಹಲವು ಷರತ್ತುಗಳನ್ನು ಸರ್ಕಾರ ವಿಧಿಸಿದೆ.
“ಸರ್ಕಾರದ ಈ ಷರತ್ತುಗಳಿಂದ ಮತ್ತು ಈ ಪ್ರಕ್ರಿಯೆಯಲ್ಲಿ ವಿವಿಗಳನ್ನು ನಡೆಸಲು ಸಾಧ್ಯವೇ? ಕಿಂಚಿತ್ತೂ ಸೌಕರ್ಯವಿಲ್ಲದೆ ಸೃಷ್ಟಿಯಾಗುವ ನೂತನ ಮಾದರಿಯು ವಿವಿಯಾಗಲು ಸಾಧ್ಯವೇ?” ಎಂದು ಸಂಘಟನೆ ಸರ್ಕಾರವನ್ನು ಪ್ರಶ್ನಿಸಿದೆ.
“ಮೂಲ ಸೌಕರ್ಯಗಳಿಲ್ಲದೆ, ಜಾಗ, ಕಟ್ಟಡ ಇಲ್ಲದೆ ವಿವಿಗಳ ಏಳಿಗೆ ಹೇಗೆ ಆಗುತ್ತದೆ? 'ಕಲಿಯುತ ಹಣ ಗಳಿಸಿ' ಎಂದು ಹೇಳುತ್ತಾ, ಅಂತಿಮವಾಗಿ 'ಕಲಿಯಲು ಹಣ ಕೊಡಿ' ಎಂದು ನೂತನ ವಿವಿಗಳ ಖಾಸಗೀಕರಣಕ್ಕೆ ಸರ್ಕಾರ ಈಗಲೇ ಮುನ್ನುಡಿ ಬರೆಯುತ್ತಿದೆ” ಎಂದು ಎಐಡಿಎಸ್ಒ ಆರೋಪಿಸಿದೆ.
ಈ ಸುದ್ದಿ ಓದಿದ್ದೀರಾ? ಪಿಎಚ್ಡಿ ನಿಯಮ ಪರಿಷ್ಕರಣೆ ಮಾಡಿ ಹೊಸ ಅಧಿಸೂಚನೆ ಹೊರಡಿಸಿದ ಯುಜಿಸಿ
“ವಿವಿಗಳು ಸ್ವಯಂ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾ, ವಿವಿಗಳಿಗೆ ಆರ್ಥಿಕ ನೆರವು ನೀಡುವ ತನ್ನ ಮೂಲಭೂತ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಂಡಿದೆ. ಹೊಸದನ್ನೇನು ಸೃಷ್ಟಿ ಮಾಡುವುದಿಲ್ಲ. ಇರುವುದನ್ನೂ ಸಹ ಮಾರಿಕೊಳ್ಳುತ್ತೇವೆ ಎನ್ನುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ” ಎಂದು ಸಂಘಟನೆ ಸರ್ಕಾರವನ್ನು ಟೀಕಿಸಿದೆ.
“ವಿವಿಗಳು ಜ್ಞಾನದ ಭಂಡಾರಗಳಾಗಬೇಕು. ಪ್ರಜಾತಾಂತ್ರಿಕ, ವೈಜ್ಞಾನಿಕ ಆಲೋಚನೆಗಳ ಆಗರವಾಗಬೇಕು. ವಿವಿಗಳ ಆರ್ಥಿಕ ನಿರ್ವಹಣೆ ಸರ್ಕಾರದ ಜವಾಬ್ದಾರಿಯಾಗಬೇಕು ಎಂಬ ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ನವೋದಯ ಚಿಂತಕರ ಆಶಯಗಳಿಗೆ ಸರ್ಕಾರ ಕೊಳ್ಳಿ ಇಟ್ಟಿದೆ. ವಾಸ್ತವದಲ್ಲಿ ಸರ್ಕಾರವು ಏಳು ವಿವಿಗಳನ್ನು ಸೃಷ್ಟಿ ಮಾಡುತ್ತಿಲ್ಲ. ಬದಲಿಗೆ ಈ ಏಳು ವಿವಿಗಳನ್ನು ಮಾರುತ್ತಿದೆ” ಎಂದು ಸಂಘಟನೆ ಸರ್ಕಾರದ ನಡೆಯನ್ನು ಖಂಡಿಸಿದೆ. ಕೂಡಲೇ ಸರ್ಕಾರ ಈ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ ಆದೇಶವನ್ನು ಹಿಂಪಡೆಯಬೇಕು ಎಂದು ಎಐಡಿಎಸ್ಒ ಆಗ್ರಹಿಸಿದೆ.
ಜೊತೆಗೆ “ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಶಿಕ್ಷಣ ವಿರೋಧಿ ನೀತಿಯನ್ನು ಸರ್ಕಾರ ತಂದಾಗ, ಅದರ ವಿರುದ್ಧ ಹೋರಾಟವನ್ನು ಮಾಡಲು ರಾಜ್ಯದ ವಿದ್ಯಾರ್ಥಿಗಳು, ಶಿಕ್ಷಕರು, ಜನ ಸಾಮಾನ್ಯರು ಸಜ್ಜಾಗಬೇಕು” ಎಂದು ಎಐಡಿಎಸ್ಒ ಈ ಮೂಲಕ ಕರೆ ನೀಡಿದೆ.