ಸಿಇಟಿ ಗೊಂದಲ: ದ್ವಿತೀಯ ಪಿಯು ಅಂಕ ಪರಿಗಣಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

  • ಸಿಇಟಿ ಫಲಿತಾಂಶದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಅಂಕ ಪರಿಗಣಿಸದ ಕೆಇಎ
  • ಸಿಇಟಿ ರ‍್ಯಾಂಕ್ ಪಟ್ಟಿಗೆ ದ್ವಿತೀಯ ಪಿಯು ಅಂಕ ಪರಿಗಣಿಸುವಂತೆ ಪೋಷಕರ ಒತ್ತಾಯ

2022ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶದ ರ‍್ಯಾಂಕ್ ಪಟ್ಟಿಯಲ್ಲಿ ದ್ವಿತೀಯ ಪಿಯುಸಿ ಅಂಕ ಪರಿಗಣಿಸಿಲ್ಲ ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು. 

ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗಳು ನಡೆಯದ ಕಾರಣ, 2020-21ನೇ ಸಾಲಿನ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳನ್ನು ಕೆಇಎ ಪರಿಗಣಿಸಿರಲಿಲ್ಲ. ಜೊತೆಗೆ ಸಿಇಟಿ ಫಲಿತಾಂಶದ ಅಂಕಗಳ ಆಧಾರದ ಮೇಲೆ ಸಿಇಟಿ ಶ್ರೇಯಾಂಕಗಳನ್ನು ನೀಡಲಾಗಿದೆ. 

ದ್ವಿತೀಯ ಪಿಯುಸಿಯ ನೂರಾರು ವಿದ್ಯಾರ್ಥಿಗಳು ಸಿಇಟಿ ಶ್ರೇಯಾಂಕ ಪಟ್ಟಿಗೆ ತಮ್ಮ ಪಿಯುಸಿ ಅಂಕಗಳನ್ನು ಪರಿಗಣಿಸದೇ ಇರುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಭೇಟಿ ನೀಡಿ, ತಮ್ಮ ಮನವಿಯನ್ನು ಪರಿಗಣಿಸುವ ಭರವಸೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಅಶ್ವತ್ಥ ನಾರಾಯಣ ಹಾಗೂ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ವಿರುದ್ಧ ಘೋಷಣೆ ಕೂಗಿದರು.

ಕಳೆದ ಬಾರಿ ಶೇ.90 ಅಂಕ ಪಡೆದವರಿಗೂ 15000 ಒಳಗೆ ರ‍್ಯಾಂಕ್ ಸಿಗುತ್ತಿತ್ತು. ಆದರೆ, ಈ ಬಾರಿ ಶೇ.98 ಅಂಕ ಪಡೆದಿದ್ದರೂ ಒಂದು ಲಕ್ಷದ ಮೇಲೆ 'ರ‍್ಯಾಂಕಿಂಗ್‌' ಬಂದಿದೆ. ಈ ಸಮಸ್ಯೆ ಬಗೆಹರಿಸುವಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಸಿಇಟಿ ಫಲಿತಾಂಶ | ಸಿಇಟಿ ಫಲಿತಾಂಶದಲ್ಲಿ ಅಗ್ರಸ್ಥಾನ ಪಡೆದ 45 ವಿದ್ಯಾರ್ಥಿಗಳು

ಜುಲೈ 30ರಂದು ಕೆಇಎ, ಈ ಸಾಲಿನ ಸಿಇಟಿ ಫಲಿತಾಂಶ ಪ್ರಕಟಿಸಿತ್ತು, ಆದರೆ, 2020-21ನೇ ಸಾಲಿನ ಪುನರಾವರ್ತಿತರಿಗೆ ಅವರ ಸಿಇಟಿ ಅಂಕ ಮತ್ತು ಪಿಯು ಫಲಿತಾಂಶಗಳ ಪ್ರಕಾರ ಸಿಇಟಿ ರ‍್ಯಾಂಕ್ ಪಡೆಯದೆ ಇರುವುದರಿಂದ ಉನ್ನತ ವ್ಯಾಸಂಗ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು ಸಮಸ್ಯೆಯಾಗಲಿದೆ ಎಂಬುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ರ‍್ಯಾಂಕ್ ನೀಡಲು ಶೇ.50ರಷ್ಟು ಪಿಯುಸಿ ಅಂಕ ಮತ್ತು ಸಿಇಟಿಯಿಂದ ಶೇ.50ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. 

ಕೆಇಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತ ಪೋಷಕರು, “ಅರ್ಜಿಯಲ್ಲಿ 50-50 ಅಂಕಗಳನ್ನು ಪರಿಗಣಿಸಲಾಗುವುದು ಎಂದು ನಮೂದಿಸಲಾಗಿದೆ. ಆದರೆ, ಅವರು ಈ ನಿಯಮವನ್ನು ಪಾಲನೆ ಮಾಡಿಲ್ಲ. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಜೊತೆ ಸ್ಪಷ್ಟನೆ ಕೇಳಿದ್ದೇನೆ. ಎರಡೂ ಕಡೆಯ ಅಂಕಗಳನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದರು. ಹಾಗಾಗಿ ಮಕ್ಕಳಿಗೆ ಪರೀಕ್ಷೆ ಬರೆಸಿದೆವು. ಮಕ್ಕಳು ಕಷ್ಟಪಟ್ಟು ಓದಿದ್ದಾರೆ. ಜೊತೆಗೆ ಉತ್ತಮ ಅಂಕ ಗಳಿಸಿದ್ದಾರೆ. ಆದರೆ, ಅವರ ಪಿಯು ಅಂಕಗಳನ್ನು ರ‍್ಯಾಂಕ್‌ನಲ್ಲಿ ಪರಿಗಣಿಸಿಲ್ಲ. ಹೀಗಾಗಿ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ಕಷ್ಟವಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೋಷಕರ ಆಕ್ರೋಶ ಕುರಿತು ಪ್ರತಿಕ್ರಿಯಿಸಿದ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ, “ರ‍್ಯಾಂಕ್ ಪಟ್ಟಿ ನೀಡುವಾಗ ‘ರಿಪೀಟರ್ಸ್’ ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ. ಆದರೆ, ವಿದ್ಯಾರ್ಥಿಗಳು ಮತ್ತು ಪೋಷಕರು, ಪುನರಾವರ್ತಿತರು ಪಡೆದ ಅಂಕಗಳನ್ನೂ ಪರಿಗಣಿಸಬೇಕೆಂದು ಒತ್ತಾಯಿಸುತ್ತಿದ್ದು, ಈ ಬಗ್ಗೆ ಸಾಕಷ್ಟು ಅರ್ಜಿಗಳು ಬಂದಿವೆ. ಉನ್ನತ ಶಿಕ್ಷಣ ಸಚಿವರು ಸಹ ಪಿಯು ಅಂಕಗಳನ್ನು ಪರಿಗಣಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಪರಿಶೀಲನೆಗೆ ಮುಂದಾಗಿದ್ದೇವೆ. ಶೀಘ್ರ ಪರಿಷ್ಕೃತ ಸಿಇಟಿ ರ‍್ಯಾಂಕ್ ಪಟ್ಟಿಯು ವೆಬ್‌ಸೈಟ್‌ನಲ್ಲಿ ನವೀಕರಣ ಆಗಲಿದೆ. ನಿಯಮದ ಪ್ರಕಾರ ಈಗ ಬಂದಿರುವ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು” ಎಂದು ಮಾಧ್ಯಮದವರಿಗೆ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್