ನವದೆಹಲಿ | ಹಂದಿ ಸಾಕಾಣಿಕೆಯಲ್ಲಿ ತೊಡಗಿರುವ ಅಲೆಮಾರಿ ಬುಡಕಟ್ಟುಗಳ ಕುರಿತು ವರದಿ ಕೇಳಿದ ಸುಪ್ರೀಂ

supreme court of india
  • ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ನಾಲ್ಕು ವಾರ ಗಡುವು 
  • ಹಂದಿ ಸಾಕಣೆ ಮಾಡುವ ಸಮುದಾಯಗಳ ಪುನರ್ವಸತಿ ಬಗ್ಗೆ ಮಾಹಿತಿ ಕೇಳಿದ ಕೋರ್ಟ್

ಹಂದಿ ಸಾಕಾಣಿಕೆಯಲ್ಲಿ ತೊಡಗಿರುವ ಅಲೆಮಾರಿ ಬುಡಕಟ್ಟಿಗೆ ಸೇರಿದ ಕೊರಮ, ಕೊರವ ಮತ್ತು ಕೊರಚ ಸಮುದಾಯಗಳ ಪುನರ್ವಸತಿಗೆ ಕೈಗೊಂಡಿರುವ ಕ್ರಮಗಳನ್ನು ಕುರಿತು ಮಾಹಿತಿ ಒದಗಿಸಿ ಎಂದು ಸುಪ್ರೀಂ ಕೋರ್ಟ್, ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರನ್ನೊಳಗೊಂಡ ನ್ಯಾಯಪೀಠವು, ಹಂದಿ ಸಾಕಣೆ ಮಾಡುವ ಕೊರಚ, ಕೊರವ ಮತ್ತು ಕೊರಮ ಸಮುದಾಯಗಳ ಪುನರ್ವಸತಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳ ಅವಧಿಯಲ್ಲಿ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರ ಪರವಾಗಿ ವಕೀಲರಾದ ಸಂಜಯ್ ಎಂ. ನುಲಿ ಮತ್ತು ಎನ್‌ಜಿಒ ಪರವಾಗಿ ಚಕೀಲ ಅನಿತಾ ಶೆಣೈ ವಾದ ಮಂಡಿಸಿದ್ದರು.

ದಾವಣಗೆರೆ ನಗರದ ಹಂದಿಗಳಿಗೆ ಚಿತ್ರದುರ್ಗದ ಗುಡ್ಡ ಪ್ರದೇಶಗಳಲ್ಲಿ ಪುನರ್ ವಸತಿ ಕಲ್ಪಿಸಬೇಕು ಮತ್ತು 500 ರಿಂದ 600 ಹಂದಿಗಳ ಸಾಕಣಿಕೆಯ ವೆಚ್ಚವನ್ನು ಪಾವತಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಪಾಲಿಕೆ ಆಯುಕ್ತರಿಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ, ಆಯುಕ್ತರು ಸುಪ್ರೀಂ ಕೋರ್ಟ್ ಮೊರೆ ಹೊಕ್ಕಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.

AV Eye Hospital ad

ಸಾಲ್ಮೊನೆಲೋಸಿಸ್, ರಿಂಗ್ ವರ್ಮ್, ಹೆಪಟೈಟಿಸ್- ಇ, ಎಚ್1ಎನ್1, ಹಂದಿಜ್ವರ, ಬ್ರೂಸೆಲ್ಲೋಸಿಸ್, ಟೊಕ್ಸೊಪ್ಲಾಸ್ಮಾಸಿಸ್, ಕ್ಷಯ, ಆಂಥ್ರಾಕ್ಸ್ನಂತಹ ಮಾರಣಾಂತಿಕ ಕಾಯಿಲೆಗಳು ಹರಡುವ ಭೀತಿಯಿಂದ ಬಿಡಾಡಿ ಹಂದಿಗಳನ್ನು ಸ್ಥಳಾಂತರಿಸಬೇಕು ಎಂದು 2018ರ ಅ. 26ರಂದು ಆದೇಶ ಹೊರಡಿಸಲಾಗಿತ್ತು.

ಆದರೆ, ಈ ಆದೇಶವನ್ನು ಉಲ್ಲಂಘಿಸಿ ದಾವಣಗೆರೆ ಮಹಾನಗರ ಪಾಲಿಕೆಯು, ಅಲೆಮಾರಿ ಬುಡಕಟ್ಟಿಗೆ ಸೇರಿದ ಕೊರಮ, ಕೊರವ ಮತ್ತು ಕೊರಚ ಸಮುದಾಯಗಳು ಸಾಕಿದ್ದ ಹಂದಿಗಳನ್ನು ನಗರದಿಂದ ಸುಮಾರು 60 ಕಿ.ಮೀ ದೂರಕ್ಕೆ ಸಾಗಿಸಿತ್ತು ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘವು ಹೈಕೋರ್ಟ್‌ ಮೊರೆ ಹೋಗಿತ್ತು.

ಈ ಸುದ್ದಿ ಓದಿದ್ದೀರಾ ? ಉತ್ತರ ಪ್ರದೇಶ | ಪೊಲೀಸರ ಎದುರೇ ದಲಿತನಿಗೆ ಥಳಿತ : ಗ್ರಾಮದ ಮುಖ್ಯಸ್ಥನ ಬಂಧನ

ದಾವಣಗೆರೆ ಅಥವಾ ರಾಜ್ಯದ ಯಾವುದೇ ಸ್ಥಳದಿಂದ ಹಂದಿಗಳನ್ನು ಹಿಡಿದು ಹೊರ ರಾಜ್ಯಗಳಿಗೆ ಸಾಗಾಟ ಮಾಡಬಾರದು. ಈ ಸಮುದಾಯಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ 2019ರಂದು ಏಪ್ರಿಲ್ 22ರಂದು ಆದೇಶ ನೀಡಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app