ಇವಿಎಂ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

evm
  • ಮತದಾನಕ್ಕೆ ಇವಿಎಂ ಬಳಕೆ ಪ್ರಶ್ನಿಸಿ ವಕೀಲ ಎಂ ಎಲ್ ಶರ್ಮಾರಿಂದ ಅರ್ಜಿ 
  • ಅರ್ಜಿಯಲ್ಲಿ ಹುರುಳಿಲ್ಲ ಎಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಚುನಾವಣೆಗಳಿಗೆ ಮತಪತ್ರಗಳ ಬದಲು ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಬಳಸಲು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಅವಕಾಶ ನೀಡಿರುವ ಪ್ರಸ್ತಾವನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಜನಪ್ರತಿನಿಧಿ ಕಾಯ್ದೆಯಡಿ (1951ರ ಕಾಯ್ದೆಯ ಸೆಕ್ಷನ್ 61ಎ) ಚುನಾವಣೆಗಳಲ್ಲಿ ಮತದಾನಕ್ಕೆ ವಿದ್ಯುನ್ಮಾನ ಯಂತ್ರ ಬಳಸುತ್ತಿರುವುದನ್ನು ಪ್ರಶ್ನಿಸಿ ವಕೀಲ ಎಂ ಎಲ್‌ ಶರ್ಮಾ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್‌ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ನಿರಾಕರಿಸಿದೆ. 

ಅರ್ಜಿದಾರರು, ಕೇಂದ್ರ ಕಾನೂನು ಸಚಿವಾಲಯವನ್ನು ಪ್ರತಿವಾದಿಯನ್ನಾಗಿಸಿ ಇವಿಎಂ ಬಳಕೆಯ ಕಾಯ್ದೆಯನ್ನು ಅನೂರ್ಜಿತ, ಕಾನೂನುಬಾಹಿರ ಹಾಗೂ ಅಸಾಂವಿಧಾನಿಕವೆಂದು ಘೋಷಿಸಬೇಕು ಎಂದು ಕೋರಿದ್ದರು.

ಅರ್ಜಿದಾರರು, “ಮತ ಪತ್ರದ ಬದಲು ಮತಯಂತ್ರ ಬಳಸಲು ಅವಕಾಶ ನೀಡಿರುವ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 61ಎ ಅನ್ನು ಪ್ರಶ್ನಿಸಿದ್ದಾರೆ. ಚುನಾವಣೆಗಳಲ್ಲಿ ಇವಿಎಂ ಬಳಕೆಯು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿನ ಜನಪ್ರತಿನಿಧಿಗಳ ಬಹುಮತದಿಂದ ಅಂಗೀಕಾರಗೊಂಡಿಲ್ಲ” ಎಂದು ವಾದಿಸಿದರು.

ಈ ಸುದ್ದಿ ಓದಿದ್ದೀರಾ?: ಮಧ್ಯಪ್ರದೇಶ | ಅಪೌಷ್ಟಿಕತೆಗೆ ಬಲಿಯಾದ ಬುಡಕಟ್ಟು ಸಮುದಾಯದ ಬಾಲಕಿ

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, “ಸಂಸತ್ತಿನಲ್ಲಿ ನಡೆದಿರುವುದನ್ನು ಪ್ರಶ್ನಿಸುತ್ತಿರುವಿರಾ, ಸಾರ್ವತ್ರಿಕ ಮತದಾನವನ್ನು ಪ್ರಶ್ನಿಸುತ್ತಿರುವಿರಾ ಅಥವಾ ನೀವು ಬೇರೆ ಏನನ್ನು ಪ್ರಶ್ನಿಸುತ್ತಿರುವಿರಿ” ಎಂದು ಅರ್ಜಿದಾರರನ್ನು ಪ್ರಶ್ನಿಸಿತು. “ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ ಅರ್ಜಿ ವಜಾಗೊಳಿಸಲಾಗುತ್ತಿದೆ” ಎಂದು ಮೌಖಿಕವಾಗಿ ತಿಳಿಸಿತು.

ನಿಮಗೆ ಏನು ಅನ್ನಿಸ್ತು?
2 ವೋಟ್