ಚುನಾವಣಾ ಆಯುಕ್ತರ ನೇಮಕ | ಅರುಣ್‌ ಗೋಯೆಲ್‌ ಅವರ ತರಾತುರಿ ನೇಮಕಾತಿ ಯಾಕೆ?: ಕೇಂದ್ರಕ್ಕೆ ʻಸುಪ್ರೀಂʼ ಚಾಟಿ

  • ಅರುಣ್ ಗೋಯೆಲ್ ನೇಮಕಾತಿ ಕಡತ ಸಲ್ಲಿಕೆ
  • ದಿಢೀರ್ ನೇಮಕಾತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ಭಾರತದ ಮುಖ್ಯ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ನೇಮಕಾತಿ ಕಡತವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. ಕಡತ ಪರಿಶೀಲಿಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ನೇತೃತ್ವದ ನ್ಯಾಯಪೀಠ, ಅರುಣ್‌ ಗೋಯೆಲ್‌ ಅವರ ದಿಢೀರ್‌ ನೇಮಕಾತಿಯನ್ನು ಪ್ರಶ್ನಿಸಿದೆ.

"ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಸುಧಾರಣೆ ತರಬೇಕು" ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌, ಅಜಯ್‌ ರಸ್ತೋಗಿ, ಅನಿರುದ್ಧ ಬೋಸ್‌, ಹೃಷಿಕೇಶ್‌ ರಾಯ್‌ ಹಾಗೂ ಸಿ ಟಿ ರವಿಕುಮಾರ್‌ ಅವರನ್ನೊಳಗೊಂಡ ಐವರ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸುತ್ತಿದೆ.‌

Eedina App

"ಐಎಎಸ್‌ ಹುದ್ದೆಯಿಂದ ನಿವೃತ್ತಿಯಾದ ಮರುದಿನವೇ ಅರುಣ್‌ ಗೋಯೆಲ್‌ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈ ʻಸೂಪರ್‌ ಫಾಸ್ಟ್‌ʼ ನೇಮಕಾತಿ ಮಾಡಿದ್ದು ಯಾಕೆ" ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ನ.18ರಂದು ಚುನಾವಣಾ ಆಯುಕ್ತರ ನೇಮಕಾತಿ ಸಂಬಂಧ ನಾಲ್ವರ ಹೆಸರನ್ನು ಪಟ್ಟಿ ಮಾಡಲಾಗಿದೆ. ಆ ಪಟ್ಟಿಯಲ್ಲಿ ಒಬ್ಬರ ಹೆಸರನ್ನು ಕಾನೂನು ಸಚಿವರು ಆಯ್ಕೆ ಮಾಡಿ ಪ್ರಧಾನಿಗೆ ಕಳಿಸಿದ್ದಾರೆ. ಬಳಿಕ, ಪ್ರಧಾನಿ ಕೂಡ ಅದೇ ಹೆಸರನ್ನು ಶಿಫಾರಸು ಮಾಡುತ್ತಾರೆ. ಈ ತರಾತುರಿಯ ನೇಮಕಾತಿ ಯಾಕೆ" ಎಂದು ಪೀಠ ಪ್ರಶ್ನಿಸಿದೆ. 

AV Eye Hospital ad

"ಭಾರತದ ಮುಖ್ಯ ಚುನಾವಣಾ ಆಯುಕ್ತರ ಹುದ್ದೆ ಮೇ ತಿಂಗಳಿನಿಂದ ನವೆಂಬರ್‌ವರೆಗೆ ಖಾಲಿಯಿತ್ತು. ಆವರೆಗೆ ಚುನಾವಣಾ ಆಯುಕ್ತರ ಹುದ್ದೆಗೆ ಸಂಬಂಧಿಸಿದಂತೆ ಸರ್ಕಾರ ಏನು ಕ್ರಮ ಕೈಗೊಂಡಿತ್ತು ಎಂಬುದು ತಿಳಿದಿಲ್ಲ. ಆದರೆ, ಗೋಯೆಲ್‌ ಅವರ ನೇಮಕಾತಿ ಪ್ರಕ್ರಿಯೆ ಒಂದೇ ದಿನದಲ್ಲಿ ಪೂರ್ಣಗೊಂಡಿದೆ. ನಾವು ಅರುಣ್‌ ಗೋಯೆಲ್‌ ಅವರ ಅರ್ಹತೆ ಪ್ರಶ್ನಿಸುತ್ತಿಲ್ಲ. ಆದರೆ, ಕೇವಲ 24 ಗಂಟೆಗಳಲ್ಲಿ ಚುನಾವಣಾ ಆಯುಕ್ತ ನೇಮಕಾತಿ ಪ್ರಕ್ರಿಯೆ ಹೇಗೆ ಮುಗಿಯಿತು" ಎಂಬುದು ಪ್ರಶ್ನೆ ಎಂದು ಪೀಠ ಹೇಳಿದೆ.  

ಇದಕ್ಕೆ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಪ್ರತಿಕ್ರಿಯಿಸಿ, "ದಯವಿಟ್ಟು ಸಾವಧಾನದಿಂದ ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸುವಂತೆ ಕೋರುತ್ತೇನೆ" ಎಂದರು. 

ಆದರೆ ಸುಪ್ರೀಂ ಕೋರ್ಟ್‌, "ಆಯುಕ್ತರ ನೇಮಕಾತಿ ಪ್ರಕ್ರಿಯೆಗೆ ನಾಲ್ವರು ಹೆಸರನ್ನು ಆಯ್ಕೆ ಮಾಡಲಾಗಿತ್ತು. ಆ ಪೈಕಿ ಸರ್ಕಾರ ತಾನು ತೆಗೆದುಕೊಳ್ಳುವ ನಿರ್ಧಾರಗಳಿಗೆ ಒಪ್ಪಿಗೆ ಸೂಚಿಸುವಂಥ ವ್ಯಕ್ತಿಯನ್ನೇ ಆಯ್ಕೆ ಮಾಡಿದೆ ಅಲ್ಲವೇ?" ಎಂದು ಟೀಕಿಸಿದೆ.

ಈ ಸುದ್ದಿ ಓದಿದ್ದೀರಾ?: ಶೀಘ್ರದಲ್ಲಿ ಕೇಂದ್ರದಿಂದ ಡಿಜಿಟಲ್ ಮಾಧ್ಯಮ ನಿಯಂತ್ರಣಕ್ಕೆ ಹೊಸ ಕಾನೂನು: ಸಚಿವ ಅನುರಾಗ್‌ ಠಾಕೂರ್

"ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಪ್ರಕರಣದ ವಿಚಾರಣೆ ಆರಂಭವಾದ ಬಳಿಕ, ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಅರುಣ್‌ ಗೋಯೆಲ್‌ ಅವರನ್ನು ನೇಮಕ ಮಾಡಲಾಗಿದೆ. ಈ ನೇಮಕಾತಿಯಲ್ಲಿ ಎಲ್ಲವೂ ಸರಿ ಇದೆಯೇ ಎಂಬ ಬಗ್ಗೆ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಅರುಣ್‌ ಗೋಯೆಲ್‌ ನೇಮಕಕ್ಕೆ ಸಂಬಂಧಿಸಿದ ಸಂಪೂರ್ಣ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು" ಎಂದು ಸುಪ್ರೀಂ ಕೋರ್ಟಿನ ಐವರ ಸಾಂವಿಧಾನಿಕ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app