ಲೈಂಗಿಕ ಕಾರ್ಯಕರ್ತರಿಗೆ ವೃತ್ತಿ ಘನತೆ ನೀಡಬೇಕು: ಸುಪ್ರೀಂಕೋರ್ಟ್ ನಿರ್ದೇಶನ

SUPRIM COURT
  • 21ನೇ ವಿಧಿಯಡಿ ಗೌರವಯುತವಾದ ಜೀವನ ನಡೆಸುವ ಹಕ್ಕಿದೆ
  • ವಯಸ್ಕ ಮತ್ತು ಪರಸ್ಪರ ಸಮ್ಮತಿಯ ಲೈಂಗಿಕತೆ ಬಗ್ಗೆ ಕ್ರಿಮಿನಲ್ ಕ್ರಮ ಸಲ್ಲ 

ಲೈಂಗಿಕ ಕಾರ್ಯಕರ್ತರ ಕೆಲಸವನ್ನು “ವೃತ್ತಿ” ಎಂದು ಗುರುತಿಸಿ, ಅವರನ್ನು ಘನತೆಯಿಂದ ನಡೆಸಿಕೊಳ್ಳಬೇಕೆಂದು ಪೊಲೀಸರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

"ವಯಸ್ಕ ಮತ್ತು ಒಪ್ಪಿಗೆಯ ಲೈಂಗಿಕತೆ ವಿಚಾರದಲ್ಲಿ ಪೊಲೀಸರು ಮಧ್ಯಪ್ರವೇಶಿಸಬಾರದು. ಕಾರ್ಯಕರ್ತರ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲು ಮುಂದಾಗಬಾರದು" ನ್ಯಾಯಮೂರ್ತಿ ಎಲ್ ನಾಗೇಶ್ವರರಾವ್ ನೇತೃತ್ವದ ತ್ರಿಸದಸ್ಯ ಪೀಠ ಮಹತ್ವದ ಸೂಚನೆ ನೀಡಿದೆ. 

"ವೃತ್ತಿಯ ಹೊರತಾಗಿಯೂ ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಸಂವಿಧಾನದ 21ನೇ ಪರಿಚ್ಛೇದದಡಿ ಗೌರವಯುತವಾದ ಜೀವನ ನಡೆಸುವ ಹಕ್ಕಿದೆ. ಕಾನೂನಿನಡಿ ಸಮಾನ ರಕ್ಷಣೆಗೆ ಎಲ್ಲರೂ ಅರ್ಹರಾಗಿದ್ದಾರೆ" ಎಂದು ಪೀಠವು ಅಭಿಪ್ರಾಯಪಟ್ಟಿದೆ.

"ಕ್ರಿಮಿನಲ್ ಕಾನೂನನ್ನು 'ವಯಸ್ಸು' ಮತ್ತು 'ಸಮ್ಮತಿಯ' ಆಧಾರದಡಿ ಎಲ್ಲ ಪ್ರಕರಣಗಳಲ್ಲಿ ಸಮಾನವಾಗಿ ಅನ್ವಯಿಸಬೇಕು. ಲೈಂಗಿಕ ಕಾರ್ಯಕರ್ತೆಯರು ವಯಸ್ಕರು ಮತ್ತು ಸಮ್ಮತಿಯೊಂದಿಗೆ ಭಾಗವಹಿಸುತ್ತಿದ್ದಾರೆ ಎಂಬುದು ಸ್ಪಷ್ಟವಾದಾಗ ಪೊಲೀಸರು ಮಧ್ಯ ಪ್ರವೇಶಿಸುವುದು ಅಥವಾ ಯಾವುದೇ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು” ಎಂದು ಸಂವಿಧಾನದ 142 ವಿಧಿಯಡಿ ಇರುವ ವಿಶೇಷ ಅಧಿಕಾರದೊಂದಿಗೆ ಸುಪ್ರೀಂಕೋರ್ಟ್ ಈ ಆದೇಶ ಹೊರಡಿಸಿದೆ. 

"ವೇಶ್ಯಾಗೃಹಗಳ ಮೇಲೆ ದಾಳಿ ನಡೆಸಿದಾಗ ಲೈಂಗಿಕ ಕಾರ್ಯಕರ್ತೆಯರ ಬಂಧನ, ದಂಡ, ಕಿರುಕುಳ ನೀಡಬಾರದು. ವೇಶ್ಯಾಗೃಹ ನಡೆಸುವುದು ಕಾನೂನುಬಾಹಿರವಾಗಿದೆ. ಆದರೆ, ಸ್ವಯಂಪ್ರೇರಿತ ಲೈಂಗಿಕ ಕೆಲಸ ಕಾನೂನುಬಾಹಿರವಲ್ಲ" ಎಂದು ಪೀಠ ಹೇಳಿದೆ. 

ಈ ಸುದ್ದಿ ಓದಿದ್ದೀರಾ:? ಭಯೋತ್ಪಾದನಾ ಚಟುವಟಿಕೆಗೆ ನಿಧಿ ಸಂಗ್ರಹಣ ಪ್ರಕರಣ; ಯಾಸಿನ್‌ ಮಲಿಕ್‌ಗೆ ಜೀವಾವಧಿ ಶಿಕ್ಷೆ

‘ಮಕ್ಕಳನ್ನು ತಾಯಿಯಿಂದ ಬೇರ್ಪಡಿಸುವುದು ಸಲ್ಲ’ 

"ಲೈಂಗಿಕ ಕಾರ್ಯಕರ್ತೆಯರ ಮಗುವನ್ನು ತಾಯಿಯಿಂದ ಬೇರ್ಪಡಿಸಬಾರದು. ಲೈಂಗಿಕ ಕಾರ್ಯಕರ್ತರು ಮತ್ತು ಅವರ ಮಕ್ಕಳಿಗೂ ಮಾನವನ ಸಭ್ಯತೆ ಮತ್ತು ಘನತೆಯ ಮೂಲಭೂತ ರಕ್ಷಣೆ ಅನ್ವಯಿಸುತ್ತದೆ" ಎಂಬ ಅಂಶವನ್ನು ಕೋರ್ಟ್‌ ಗಮನಿಸಿದೆ. 

“ವೇಶಾಗೃಹದಲ್ಲಿ ಲೈಂಗಿಕ ಕಾರ್ಯಕರ್ತರೊಂದಿಗೆ ಇರುವ ಅಪ್ರಾಪ್ತರನ್ನು ಕಳ್ಳ ಸಾಗಣೆ ಎಂದು ಭಾವಿಸಬಾರದು. ಅಲ್ಲಿದ್ದವರು ತಮ್ಮದೇ ಮಕ್ಕಳೆಂದು ಹೇಳಿಕೊಂಡರೆ, ಆ ಬಗ್ಗೆ ಪರಿಶೀಲನೆ ನಡೆಸಬೇಕು. ಬಲವಂತವಾಗಿ ಬೇರ್ಪಡಿಸಬಾರದು” ಎಂದು ನ್ಯಾಯಾಲಯ ಆದೇಶಿಸಿದೆ.

ವೈದ್ಯಕೀಯ ಆರೈಕೆ - ಕಾನೂನು ಸೇವೆ ನೀಡಬೇಕು

ವಿಶೇಷವಾಗಿ ಲೈಂಗಿಕ ಕಾರ್ಯಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ, ಲೈಂಗಿಕ ಕಾರ್ಯಕರ್ತರಿಗೆ ತಕ್ಷಣ ವೈದ್ಯಕೀಯ ಆರೈಕೆ -ಕಾನೂನು ಸೇವೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಮಾಧ್ಯಮಗಳಿಗೂ ಎಚ್ಚರಿಕೆಯ ಸೂಚನೆ 

"ಲೈಂಗಿಕ ಕಾರ್ಯಕರ್ತರ ಬಗ್ಗೆ ಪೊಲೀಸರ ವರ್ತನೆ ಸಾಮಾನ್ಯವಾಗಿ ಕ್ರೂರ ಮತ್ತು ಹಿಂಸಾತ್ಮಕವಾಗಿರುತ್ತದೆ ಎಂದು ಗಮನಿಸಲಾಗಿದೆ. ಅವರನ್ನು ಮಾನವ ಹಕ್ಕುಗಳಿಗೆ ಯೋಗ್ಯವಲ್ಲದ ವರ್ಗವೆಂಬಂತೆ ನಡೆಸಿಕೊಳ್ಳಲಾಗುತ್ತಿದೆ. ಅವರನ್ನೂ ಸಂವೇದನಾಶೀಲರಾಗಿ ನಡೆಸಿಕೊಳ್ಳಬೇಕು” ಎಂದು ಕೋರ್ಟ್‌ ಸೂಚಿಸಿದೆ. 

ಲೈಂಗಿಕ ಕಾರ್ಯಕರ್ತರ ಬಂಧನ, ದಾಳಿ ಮತ್ತು ರಕ್ಷಣಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಸಂತ್ರಸ್ತರು ಅಥವಾ ಆರೋಪಿಗಳು ಹಾಗೂ ಲೈಂಗಿಕ ಕಾರ್ಯಕರ್ತೆಯರ ಗುರುತನ್ನು ಬಹಿರಂಗಪಡಿಸದಂತೆ ಮತ್ತು ಫೋಟೋ, ವೀಡಿಯೋ ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಮಾಧ್ಯಮಗಳು ಹೆಚ್ಚಿನ ಕಾಳಜಿವಹಿಸಬೇಕೆಂದು ನ್ಯಾಯಾಲಯ ಹೇಳಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್