
- ಪ್ರತಿ ಸರ್ಕಾರವು ತನಗೆ ಬೇಕಾದವರನ್ನೇ ನೇಮಿಸುತ್ತದೆ: ಕೋರ್ಟ್
- ಸದ್ಯದ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ: ಸರ್ಕಾರ
"ಭಾರತದ ಮುಖ್ಯ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ನೇಮಕಾತಿ ಕಡತವನ್ನು ಸಲ್ಲಿಸಿ" ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಆ ಕುರಿತ ವಿಚಾರಣೆಯನ್ನು ನಾಳೆಗೆ(ನ.24) ಮುಂದೂಡಿದೆ.
"ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಪ್ರಕರಣದ ವಿಚಾರಣೆ ಆರಂಭವಾದ ಬಳಿಕ, ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಅರುಣ್ ಗೋಯೆಲ್ ಅವರನ್ನು ನೇಮಕ ಮಾಡಲಾಗಿದೆ. ಈ ನೇಮಕಾತಿಯಲ್ಲಿ ಎಲ್ಲವೂ ಸರಿ ಇದೆಯೇ ಎಂಬ ಬಗ್ಗೆ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಅರುಣ್ ಗೋಯೆಲ್ ನೇಮಕಕ್ಕೆ ಸಂಬಂಧಿಸಿದ ಸಂಪೂರ್ಣ ಕಡತವನ್ನು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು" ಎಂದು ಸುಪ್ರೀಂ ಕೋರ್ಟಿನ ಐವರ ಸಾಂವಿಧಾನಿಕ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
"ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಸುಧಾರಣೆ ತರಬೇಕು" ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಐವರ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸುತ್ತಿದೆ.
ಭಾರತದ ಮುಖ್ಯ ಚುನಾವಣಾ ಆಯುಕ್ತರು ದೇಶದ ಪ್ರಧಾನಮಂತ್ರಿ ವಿರುದ್ಧವೇ ಕ್ರಮ ಕೈಗೊಳ್ಳುವಂತಹ ಪರಿಸ್ಥಿತಿ ಎದುರಾದರೆ, ಅವರು ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದರೆ, ಅದು ಇಡೀ ವ್ಯವಸ್ಥೆಯ ವೈಫಲ್ಯಕ್ಕೆ ನಿದರ್ಶನ ಅಲ್ಲವೇ? ಎಂದು ಈ ವೇಳೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗಂಭೀರ ಪ್ರಶ್ನೆ ಎತ್ತಿದೆ.
ಚುನಾವಣಾ ಆಯುಕ್ತರು ಯಾರ ಮುಲಾಜಿಗೂ ಒಳಗಾಗದೆ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ ಪೀಠ, ಚುನಾವಣಾ ಆಯುಕ್ತರನ್ನು ನೇಮಿಸುವಾಗ ಕೇಂದ್ರ ಸಚಿವ ಸಂಪುಟಕ್ಕಿಂತ ದೊಡ್ಡ ಸಂಸ್ಥೆ ನೇಮಕಾತಿ ಸ್ಥಾನದಲ್ಲಿರಬೇಕಾದ ಅಗತ್ಯವಿದೆ ಎಂದು ಹೇಳಿದೆ.
"ಪ್ರತಿ ಸರ್ಕಾರವು ಚುನಾವಣಾ ಆಯೋಗದ ಮುಖ್ಯಸ್ಥರನ್ನಾಗಿ ತನಗೆ ಬೇಕಾದವರನ್ನೇ ನೇಮಿಸುತ್ತದೆ. ಅಂದರೆ, ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಒಪ್ಪಿಗೆ ಸೂಚಿಸುವಂಥ ವ್ಯಕ್ತಿಯನ್ನೇ ನೇಮಿಸುತ್ತದೆ" ಎಂದು ಪೀಠ ಇದೇ ವೇಳೆ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, "ನ್ಯಾಯಾಲಯವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ತಪ್ಪು ನಿದರ್ಶನಗಳನ್ನು ನೀಡುತ್ತಿದೆ" ಎಂದು ಆಕ್ಷೇಪಿಸಿದರು.
"ಚುನಾವಣಾ ಆಯುಕ್ತರ ನೇಮಕಾತಿಗೂ ಮುನ್ನ, ಎಲ್ಲ ಹಿರಿಯ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಬಳಿಕ ಅದನ್ನು ಕಾನೂನು ಸಚಿವಾಲಯಕ್ಕೆ ಕಳಿಸಲಾಗುತ್ತದೆ. ನಂತರ ಅದನ್ನು ಪ್ರಧಾನಿಗೆ ರವಾನಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಎಷ್ಟರಮಟ್ಟಿಗೆ ಮಧ್ಯ ಪ್ರವೇಶಿಸಬಹುದು?" ಎಂದು ವಕೀಲರು ಪ್ರಶ್ನಿಸಿದರು.
ಮಾತ್ರವಲ್ಲದೆ, "ಈಗ ಅಸ್ತಿತ್ವದಲ್ಲಿರುವ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಯಾವುದೇ ಅವಕಾಶವಿಲ್ಲ" ಎಂದೂ ಅವರು ಸರ್ಕಾರವನ್ನು ಸಮರ್ಥಿಸಿಕೊಂಡರು.
ಈ ಸುದ್ದಿ ಓದಿದ್ದೀರಾ?:ಟಿ ಎನ್ ಶೇಷನ್ರಂತಹ ದಕ್ಷ ಚುನಾವಣಾ ಆಯುಕ್ತರು ಮತ್ತೆ ಬೇಕಾಗಿದೆ: ಸುಪ್ರೀಂ ಕೋರ್ಟ್
ಆಗ ಪೀಠ, "ವ್ಯವಸ್ಥೆ ಸರಿಯಿಲ್ಲ ಎಂದು ಹೇಳುತ್ತಿಲ್ಲ. ಬದಲಿಗೆ ಪಾರದರ್ಶಕ ವ್ಯವಸ್ಥೆ ಬೇಕು. ನೇಮಕಾತಿ ಯಾವಾಗಲೂ ಹಿರಿತನವನ್ನು ಆಧರಿಸಿರುತ್ತದೆ ಎಂಬುದು ನಮಗೂ ತಿಳಿದಿದೆ" ಎಂದಿತು.
"ಚುನಾವಣಾ ಆಯುಕ್ತರನ್ನಾಗಿ ನಾಗರಿಕ ಸೇವೆಯಲ್ಲಿರುವವರನ್ನು ಮಾತ್ರ ಹೆಸರಿಸಲಾಗುತ್ತದೆ ಯಾಕೆ?" ಎಂದು ನ್ಯಾಯಾಲಯ ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲ, "ನಾವು ಅಭ್ಯರ್ಥಿಗಳಿಗಾಗಿ ರಾಷ್ಟ್ರೀಯ ಸಮೀಕ್ಷೆ ನಡೆಸಬೇಕೇ? ಅದು ಅಸಾಧ್ಯ" ಎಂದರು. ಈಗಿನ ವ್ಯವಸ್ಥೆಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಯಾಕೆಂದರೆ, ನೇಮಕಾತಿ ಯಾವ ರೀತಿ ಮಾಡಲಾಗಿದೆ ಎಂಬುದರ ಕುರಿತಾಗಿ ಪ್ರತಿಯೊಂದನ್ನೂ ನಾವು ತೋರಿಸಲು ಆಗುವುದಿಲ್ಲ. ನೇಮಕಾತಿಯಲ್ಲಿ ಏನಾದರೂ ತಪ್ಪುಗಳಾಗಿದ್ದರೆ, ಅದನ್ನು ತೋರಿಸಿ, ನಾವು ಉತ್ತರಿಸುತ್ತೇವೆ" ಎಂದರು.