
- ದ್ವೇಷ ಭಾಷಣಗಳಿಂದಾಗಿ ದೇಶದ ಪರಿಸ್ಥಿತಿ ಹದಗೆಡುತ್ತಿದೆ
- ಕೋರ್ಟ್ಗಳನ್ನು ಲಘುವಾಗಿ ಪರಿಗಣಿಸಬೇಡಿ ಎಂದ ʻಸುಪ್ರೀಂʼ
ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡುವವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ)ಯ ಅಡಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ಕೋರಿ ಸಲ್ಲಿಸಲಾದ ಮನವಿ ಸಂಬಂಧ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು, ಶಾಹೀನ್ ಅಬ್ದುಲ್ಲಾ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, "ದ್ವೇಷ ಭಾಷಣಗಳನ್ನು ತಡೆಯಲು ಏನಾದರೂ ಕ್ರಮ ಕೈಗೊಳ್ಳಲೇ ಬೇಕಿದೆ. ದ್ವೇಷ ಭಾಷಣಗಳ ವಿರುದ್ಧ ನ್ಯಾಯಾಲಯಗಳು ಕ್ರಮ ಕೈಗೊಳ್ಳದಿದ್ದರೆ, ಈ ದೇಶವನ್ನು ದೇವರೇ ಕಾಪಾಡಬೇಕು" ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ರಸ್ತೋಗಿ, "ನಮ್ಮ ಸಂಸ್ಥೆಗಳನ್ನು ಅಥವಾ ಈ ದೇಶವನ್ನು ಲಘುವಾಗಿ ಪರಿಗಣಿಸಬೇಡಿ" ಎಂದು ಎಚ್ಚರಿಸಿದರು. "ದ್ವೇಷ ಭಾಷಣಗಳ ವಿರುದ್ಧ ಎಫ್ಐಆರ್ ದಾಖಲಾದ ಕೂಡಲೇ ನ್ಯಾಯಾಲಯವು ಅಂಥ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು" ಎಂದೂ ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಸೋನೆಪತ್ | ಪೋಕ್ಸೋ ಪ್ರಕರಣ; ಅಪರಾಧಿಗೆ ಜೈಲು ಶಿಕ್ಷೆ ವಿಧಿಸಿದ ತ್ವರಿತ ನ್ಯಾಯಾಲಯ
"ಹಲವಾರು ಕಾರ್ಯಕ್ರಮಗಳಲ್ಲಿ ಮುಸ್ಲಿಮರ ವಿರುದ್ಧದ ನರಮೇಧ ಭಾಷಣಗಳು ಮತ್ತು ದ್ವೇಷ ಭಾಷಣಗಳು ನಡೆಯುತ್ತವೆ. ಈ ಬಗ್ಗೆ ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಗಳು ಆದೇಶಿಸಿದ್ದರೂ, ಯಾರೂ ಎಚ್ಚೆತ್ತಿಲ್ಲ. ದ್ವೇಷ ಭಾಷಣಗಳಿಂದಾಗಿ ದೇಶದ ಪರಿಸ್ಥಿತಿ ಹದಗೆಡುತ್ತಿದೆ" ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.