
- ಹಿಜಾಬ್ ಆಂದೋಲನ: ಯುರೋಪ್ನ ಸಂಸದೆ ಬೆಂಬಲ
- ಕೂದಲು ಕತ್ತರಿಸಿ, ಇರಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಸಹ್ಲಾನಿ
ಯುರೋಪಿನ ಸಂಸತ್ತಿನ ಸಭೆಯಲ್ಲಿ ಭಾಷಣ ಮಾಡುವಾಗ ಸ್ವೀಡನ್ ಸದಸ್ಯೆ ಅಬಿರ್ ಅಲ್-ಸಹ್ಲಾನಿ ತನ್ನ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಇರಾನ್ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲ ಸೂಚಿಸಿದರು. ಹಾಗೆಯೇ ಇರಾನ್ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಸತ್ತಿಗೆ ಆಗ್ರಹಿಸಿದರು.
ಯೂರೋಪ್ ಸಂಸತ್ತಿನ ಸ್ವೀಡಿಷ್ ಸದಸ್ಯೆ, ಇರಾನ್ನ ನೈತಿಕ ಪೊಲೀಸ್ ಅಧಿಕಾರಿಗಳ ವಶದಲ್ಲಿದ್ದ 22 ವರ್ಷದ ಮಹ್ಸಾ ಅಮಿನಿ ಸಾವನ್ನಪ್ಪಿದ ನಂತರದ ಇರಾನ್ನಲ್ಲಿ ಮಹಿಳೆಯರೆಲ್ಲರೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಸಹ್ಲಾನಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು.
"ಇರಾನ್ ಸ್ವತಂತ್ರಗೊಳ್ಳುವವರೆಗೆ, ನಮ್ಮ ಆಕ್ರೋಶವು ನಿಲ್ಲುವುದಿಲ್ಲ. ಇರಾನ್ನ ಮಹಿಳೆಯರು ಸ್ವತಂತ್ರರಾಗುವವರೆಗೆ ನಾವು ಅವರೊಂದಿಗೆ ನಿಲ್ಲುತ್ತೇವೆʼʼ ಎಂದು ಇರಾಕ್ ಮೂಲದ ಅಬಿರ್ ಅಲ್-ಸಹ್ಲಾನಿ ಮಂಗಳವಾರ ಸಂಜೆ ಫ್ರಾನ್ಸ್ನ ಸ್ಟ್ರಾಸ್ಬರ್ಗ್ನಲ್ಲಿ ಸಂಸತ್ತಿನಲ್ಲಿ ಹೇಳಿದರು.
ಈ ಸುದ್ದಿ ಓದಿದ್ದೀರಾ?: ಎಸ್ಎಸ್ಸಿಯಿಂದ 20,000 ಹುದ್ದೆ ನೇಮಕಾತಿ | ಹಿಂದಿ-ಇಂಗ್ಲಿಷ್ನಲ್ಲಿ ಮಾತ್ರ ಪರೀಕ್ಷೆಗೆ ಎಚ್ ಡಿ ಕುಮಾರಸ್ವಾಮಿ ವಿರೋಧ
ನಂತರ, ಕತ್ತರಿ ತೆಗೆದುಕೊಂಡು, ʻಮಹಿಳೆ, ಜೀವನ, ಸ್ವಾತಂತ್ರ್ಯʼ (ಜಿನ್, ಜಿಯಾನ್, ಆಜಾದಿ) ಎಂದು ಘೋಷಣೆ ಹಾಕುತ್ತಾ ಕೂದಲು ಕತ್ತರಿಸಿಕೊಂಡರು.
ಆಸ್ಕರ್ ಪ್ರಶಸ್ತಿ ವಿಜೇತ ನಟಿಯರಾದ ʼಮರಿಯನ್ ಕೊಟಿಲಾರ್ಡ್, ಜೂಲಿಯೆಟ್ ಬಿನೋಷೆ ಹಾಗೂ ಫ್ರೆಂಚ್ ಗಾಯಕಿಯರು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುವ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಇರಾನ್ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ. ಸೆಪ್ಟೆಂಬರ್ 13ರಂದು ಟೆಹ್ರಾನ್ನಲ್ಲಿ ʻಅನುಚಿತ ಉಡುಗೆʼ ಧರಿಸಿದ್ದಕ್ಕಾಗಿ ಬಂಧಿಸಲಾಗಿದೆ.
ಮಹ್ಸಾ ಅಮಿನಿ ಮರಣದ ನಂತರ ಇರಾನ್ನಲ್ಲಿ ಪ್ರತಿಭಟನೆ ಬುಗಿಲೆದ್ದಿದ್ದು, ಈ ಹೋರಾಟವನ್ನು ಬೆಂಬಲಿಸಿ ಲಂಡನ್, ಪ್ಯಾರಿಸ್, ರೋಮ್ ಹಾಗೂ ಮ್ಯಾಡ್ರಿಡ್ ಸೇರಿದಂತೆ ವಿದೇಶಗಳಲ್ಲಿ ಮಹಿಳೆಯರು ಪ್ರತಿಭಟಿಸುತ್ತಿದ್ದಾರೆ. ಈ ಹೋರಾಟವನ್ನು ಬೆಂಬಲಿಸಿ ಮಹಿಳೆಯರು ಕೂದಲು ಕತ್ತರಿಸಿಕೊಳ್ಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಏನಿದು ಪ್ರಕರಣ?
ಹಿಜಾಬ್ ಸರಿಯಾಗಿ ಧರಿಸದ ಕಾರಣಕ್ಕೆ ಇರಾನಿನ ಕುರ್ದಿಸ್ ಪ್ರದೇಶದ ಸಾಕ್ವಜ್ ನಗರದ 22 ವರ್ಷದ ಮಹ್ಸಾ ಅಮೀನಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಪೊಲೀಸ್ ಕಸ್ಟಡಿಯಲ್ಲಿಯೇ ಅವರ ಹೊಡೆತದ ಕಾರಣ ಮೂರು ದಿನ ಕೋಮಾದಲ್ಲಿದ್ದು ದಿನಾಂಕ ಸೆಪ್ಟೆಂಬರ್ 13ರಂದು ಆಕೆ ಮೃತಪಟ್ಟಳು. ಶತಮಾನಗಳಿಂದ ಇಸ್ಲಾಮಿಕ್ ಕಾನೂನು ಕಟ್ಟಳೆಗಳಿಂದ ನೊಂದಿರುವ ಇರಾನಿನ ಮಹಿಳೆಯರು ಈ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದಾರೆ. ಕೇವಲ ಮಹಿಳೆಯರೇ ಅಲ್ಲ, ಬದಲಾಗಿ ಪುರುಷರೂ ಈ ಹೋರಾಟವನ್ನು ಬೆಂಬಲಿಸಿ ಬೀದಿಗಿಳಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಸಾವಿರಾರು ಜನ ಬೀದಿಗಿಳಿದು ಹಿಜಾಬ್ಗಳನ್ನು ಸಾರ್ವಜನಿಕವಾಗಿ ಸುಡುವ ಮತ್ತು ತಮ್ಮ ಕೂದಲನ್ನು ಕತ್ತರಿಸಿ ಸುಡುವಂತಹ ಪ್ರತಿಭಟನೆಯನ್ನು ಮಾಡುತ್ತ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ.