ಮಹಿಳೆಯರ ಮೇಲೆ ತಾಲಿಬಾನಿಗರು ನಡೆಸುತ್ತಿರುವ ವ್ಯವಸ್ಥಿತ ದಬ್ಬಾಳಿಕೆ ಕೊನೆಗೊಳ್ಳಲಿ ಎಂದ ವಿಶ್ವಸಂಸ್ಥೆ

  • ತಾಲಿಬಾನಿಗರು ಮಹಿಳೆಯರ ಹಕ್ಕುಗಳ ಸುಧಾರಣೆಗೆ ಒತ್ತು ನೀಡಬೇಕು
  • ವಿಶ್ವಸಂಸ್ಥೆ ಮಾನವ ಹಕ್ಕುಗಳ ರಾಯಭಾರಿ ಮಿಶೆಲ್‌ ಬ್ಯಾಷ್ಲೆಟ್‌ ಆಗ್ರಹ

ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ʻವ್ಯವಸ್ಥಿತ ದಬ್ಬಾಳಿಕೆʼ ಕೊನೆಗೊಳಿಸಿ ಅವರ ಹಕ್ಕುಗಳ ಸುಧಾರಣೆಗೆ ಒತ್ತು ನೀಡುವಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ರಾಯಭಾರಿ ಮಿಶೆಲ್‌ ಬ್ಯಾಷ್ಲೆಟ್ ತಾಲಿಬಾನ್‌ಗೆ ಒತ್ತಾಯಿಸಿದರು.

ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ʻಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಇಂದಿನ ಪರಿಸ್ಥಿತಿಯ ಕುರಿತು ನಡೆದ ತುರ್ತು ಕೌನ್ಸಿಲ್ ಚರ್ಚೆʼಯನ್ನು ಉದ್ದೇಶಿಸಿ ಬ್ಯಾಷ್ಲೆಟ್ ಮಾತನಾಡಿದರು.

Eedina App

ʻʻತಾಲಿಬಾನಿಗರು ಬಾಲಕಿಯರಿಗಾಗಿ ಮಾಧ್ಯಮಿಕ ಶಾಲೆಗಳನ್ನು ಪುನರಾರಂಭಿಸಬೇಕು. ಮಹಿಳೆಯರು ಮುಖದ ಹೊದಿಕೆಗಳನ್ನು ಧರಿಸಬೇಕು ಹಾಗೂ ಪುರುಷ ರಕ್ಷಕರ ಜೊತೆಗಿರುವಾಗ ಮಾತ್ರ ಪ್ರಯಾಣಿಸುವ ಅವಶ್ಯಕತೆಯನ್ನು ತೆಗೆದುಹಾಕಬೇಕುʼʼ ಎಂದು ಅವರು ಒತ್ತಾಯಿಸಿದರು.

AV Eye Hospital ad

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರು ಎದುರಿಸುತ್ತಿರುವ ʻಹತಾಶ ಪರಿಸ್ಥಿತಿʼ ಖಂಡಿಸಿದರು. ಇತರೆ ಮುಸ್ಲಿಂ ರಾಷ್ಟ್ರಗಳ ಮಹಿಳಾ ಹಕ್ಕುಗಳ ರಕ್ಷಣೆಯ ಕಾರ್ಯವೈಖರಿಯಿಂದ ಸ್ಫೂರ್ತಿ ಪಡೆಯುವಂತೆ ಅವರು ಸೂಚಿಸಿದರು.

ʻʻಕಳೆದ ಎರಡು ದಶಕಗಳಿಂದ ಅಫ್ಘಾನಿಸ್ತಾನದ ಮಹಿಳೆಯರು ತಮ್ಮ ಹಕ್ಕುಗಳನ್ನು ಸ್ವತಂತ್ರವಾಗಿ ಬಳಸುತ್ತಿದ್ದರು. ಆದರೆ ಈಗ ಆ ದೇಶದಲ್ಲಿ ಕತ್ತಲು ಮರುಕಳಿಸಿದಂತಾಗಿದೆ. ಈ ವ್ಯವಸ್ಥೆ ಹೀಗೆ ಮುಂದುವರಿದಲ್ಲಿ, ಅವರ ಭವಿಷ್ಯವೂ ಕಗ್ಗತ್ತಲ ಕೂಪದೊಳಗೆ ಕಣ್ಮರೆಯಾಗಲಿದೆ. ತಾಲಿಬಾನಿಗರು ಮಹಿಳೆಯರ ಹಕ್ಕುಗಳನ್ನು ಗೌರವಿಸುವಂತೆ ಮಾಡಲು ಅಂತಾರಾಷ್ಟ್ರೀಯ ಸಮುದಾಯದಿಂದ ಸಂಘಟಿತ ಪ್ರಯತ್ನವಾಗಬೇಕುʼʼ ಎಂದು ಅವರು ಮಹಿಳಾ ಹಕ್ಕುಗಳ ಹೋರಾಟಕ್ಕೆ ಕರೆ ನೀಡಿದರು.

ʻʻಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ಖಾತ್ರಿಪಡಿಸಿದ ಹಕ್ಕುಗಳನ್ನು ಮಹಿಳೆಯರಿಗೆ ನೀಡುವುದು ತಾಲಿಬಾಣ್‌ನ ಕಾನೂನಾತ್ಮಕ ಬದ್ಧತೆಯಾಗಿದೆ. ಅದರಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯವನ್ನು ತಡೆಯುವುದು ಮತ್ತು ಸಾರ್ವಜನಿಕ ಜೀವನದಲ್ಲಿ ಮಹಿಳೆಯರಿಗೆ ಸಮಾನ ಭಾಗವಹಿಸುವಿಕೆಯ ಹಕ್ಕನ್ನು ಖಾತರಿ ಪಡಿಸುವುದೂ ಸೇರಿದೆ" ಎಂದು ವಿಶ್ವಸಂಸ್ಥೆ ಹೇಳಿದೆ.

"ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಮಕ್ಕಳು ಅತೀ ವೇಗವಾಗಿ ಮತ್ತು ವ್ಯಾಪಕವಾಗಿ ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ತಕ್ಷಣ ಪರಿಸ್ಥಿತಿ ಬದಲಾಗದೆ ಇದ್ದಲ್ಲಿ ಅವರ ಭವಿಷ್ಯ ಮಂಕಾಗಲಿದೆ" ಎಂದು ಬಾಷ್ಲೆಟ್ ಅಭಿಪ್ರಾಯಪಟ್ಟಿದ್ದಾರೆ. 

ಬಾಷ್ಲೆಟ್ ಅವರು ಕಳೆದ ಮಾರ್ಚ್‌ನಲ್ಲಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದಾಗ ತಾಲಿಬಾನ್ ಆಡಳಿತದ ಜೊತೆಗೆ ಮಾನವ ಹಕ್ಕುಗಳ ಬದ್ಧತೆ ಬಗ್ಗೆ ಚರ್ಚಿಸಿದ್ದರು. ಇಸ್ಲಾಮಿಕ್ ಶರಿಯಾ ಕಾನೂನಿನನ್ವಯ ಹಕ್ಕುಗಳನ್ನು ನೀಡಲು ತಾಲಿಬಾನ್ ಒಪ್ಪಿಕೊಂಡಿತ್ತು. "ಇಸ್ಲಾಮಿಕ್ ಕಾನೂನಿನ ಪ್ರಕಾರ ಹಕ್ಕುಗಳನ್ನು ನೀಡುವ ಭರವಸೆಯ ಹೊರತಾಗಿಯೂ ನಿಧಾನವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಸಾರ್ವಜನಿಕ ಕ್ಷೇತ್ರದಿಂದ ಹೊರಗಿಡಲಾಗುತ್ತಿದೆ. ಅವರು ಸಾಂಸ್ಥಿಕ ಮತ್ತು ವ್ಯವಸ್ಥಿತವಾದ ಶೋಷಣೆ ಎದುರಿಸುತ್ತಿದ್ದಾರೆ" ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಅನುಭವ ಹಂಚಿಕೊಂಡಿರುವ ಬಾಷ್ಲೆಟ್, ಹತ್ತು ಲಕ್ಷಕ್ಕೂ ಹೆಚ್ಚು ಬಾಲಕಿಯರು ಶಾಲೆಗಳಿಂದ ದೂರ ಉಳಿದಿದ್ದಾರೆ. ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿರುವುದು ಹಾಗೂ ಬುರ್ಖಾ ಧರಿಸುವುದರ ಬಗ್ಗೆ ತಾಲಿಬಾನಿಗಳ ಆದೇಶದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app