ತಾಲಿಬಾನ್‌ | ಉಸಿರುಗಟ್ಟುವ ವಾತಾವರಣದಲ್ಲಿ ಬದುಕುತ್ತಿರುವ ಮಹಿಳೆಯರು

  • ತಾಲಿಬಾನಿಗಳ ಆಡಳಿತಕ್ಕೆ ಒಂದು ವರ್ಷ
  • ಕಮರಿದ ಅಫ್ಘನ್‌ ಮಹಿಳೆಯರ ಬದುಕು

ಮಹಿಳೆಯರ ಸ್ವಾತಂತ್ಯ್ರದ ನೆಲೆವೀಡಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡು, ಆಡಳಿತ ನಡೆಸಲು ಆರಂಭಿಸಿ ಆಗಸ್ಟ್‌ 15ಕ್ಕೆ ಒಂದು ವರ್ಷ ಆಗಲಿದೆ. ಸ್ವತಂತ್ರವಾಗಿದ್ದ ಮಹಿಳೆಯರು ಪ್ರಸ್ತುತ ಎಲ್ಲ ಬಗೆಯ ಹಕ್ಕುಗಳನ್ನು ಕಳೆದುಕೊಂಡು, ಬೀದಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

ಮಹಿಳಾ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ತಾಲಿಬಾನ್‌ ಆಡಳಿತದ ವಿರುದ್ಧ  ಮಹಿಳೆಯರು ಶನಿವಾರ (ಆಗಸ್ಟ್‌ 14) ಅಫ್ಘಾನ್‌ ರಾಜಧಾನಿ ಕಾಬೂಲ್‌ನಲ್ಲಿ ಬೀದಿಗಿಳಿದು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ಪ್ರತಿಭಟನಾಕಾರರನ್ನು ಚದುರಿಸಲು ತಾಲಿಬಾನ್‌ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಆಹಾರ, ಉದ್ಯೋಗ ಮತ್ತು ಸ್ವಾತಂತ್ರ್ಯ ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತ 40 ಮಂದಿ ಮಹಿಳೆಯರು ಕಾಬೂಲ್‌ನ ಶಿಕ್ಷಣ ಸಚಿವಾಲಯದ ಮುಂದೆ ಮೆರವಣಿಗೆ ನಡೆಸುತ್ತಿದ್ದರು.

ತಾಲಿಬಾನ್‌ ಸೈನಿಕರ ಗುಂಡಿನ ಸದ್ದಿಗೆ ಅಲ್ಲಿಂದ ಚದುರಿದ ಮಹಿಳೆಯರು ಕೆಲವು ಸ್ಥಳಗಳಲ್ಲಿ ಬಚ್ಚಿಟ್ಟುಕೊಂಡರೂ ಬಿಡದ ತಾಲಿಬಾನಿಗಳು ಅವರನ್ನು ಬೆನ್ನಟ್ಟಿ, ಥಳಿಸಿದ್ದಾರೆ.

ʻಆಗಸ್ಟ್ 15 ಕರಾಳ ದಿನʼ ಎಂಬ ಬ್ಯಾನರ್ ಅನ್ನು ಹಿಡಿದುಕೊಂಡು ಕೆಲಸ ಮಾಡುವ ಹಕ್ಕು ಮತ್ತು ರಾಜಕೀಯ ಭಾಗವಹಿಸುವಿಕೆಗೆ ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು| ಸ್ವಾತಂತ್ರ್ಯದ ಅಮೃತ ಮಹೋತ್ಸವ ಸರಣಿ ಕಾರ್ಯಕ್ರಮ; ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ

ಇಸ್ಲಾಮಿಕ್‌ ಮೂಲಭೂತವಾದಿ ಆಲೋಚನೆಗಳ ಆಧಾರದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನಿಗಳು ಮಹಿಳೆಯರನ್ನು ಉದ್ಯೋಗದಿಂದ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದಾರೆ. ಆರನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗದಂತೆ ತಡೆದಿದ್ದಾರೆ. ಉದ್ಯೋಗಗಳಿಗೆ ಮಹಿಳೆಯರ ಬದಲಿಗೆ ಅವರ ಕುಟುಂಬದ ಪುರುಷ ಸದಸ್ಯರನ್ನು ಕಳುಹಿಸುವಂತೆ ತಾಲಿಬಾನ್‌ ಆಡಳಿತ ಆದೇಶಿಸಿದೆ.

ಇಡೀ ದೇಹವನ್ನು ಬುರ್ಖಾದಿಂದ ಮುಚ್ಚಿಕೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಕಡ್ಡಾಯವಾಗಿ ಪುರುಷ ಸದಸ್ಯನೊಬ್ಬ ಜೊತೆಯಲ್ಲಿರಬೇಕು ಎಂಬುದು ಸೇರಿ ಹಲವಾರು ಕಟ್ಟಳೆಗಳನ್ನು ಜಾರಿ ಮಾಡಿ ಮಹಿಳೆಯರಿಗೆ ಉಸಿರುಗಟ್ಟುವಂತೆ ಮಾಡಲಾಗಿದೆ.

ಈ ಮೊದಲು 1996ರಲ್ಲಿ ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಸುಮಾರು ಐದು ವರ್ಷಗಳ ಕಾಲ ಇಸ್ಲಾಮಿಕ್‌ ಮೂಲಭೂತವಾದಿ ನೀತಿಗಳ ಆಡಳಿತ ನಡೆಸಿತ್ತು. ಪುನಃ ಕಳೆದ ವರ್ಷ ಅಧಿಕಾರಕ್ಕೆ ಬಂದ ತಾಲಿಬಾನ್‌ ಈ ಹಿಂದೆ ಇದ್ದಂತೆ ಕಠಿಣ ನೀತಿಗಳನ್ನು ಜಾರಿ ಮಾಡುವುದಿಲ್ಲ. ಮಹಿಳೆಯರ ಸ್ವಾತಂತ್ಯ್ರಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇವೆ ಎಂಬ ಪೊಳ್ಳು ಆಶ್ವಾಸನೆಯನ್ನು ನೀಡಿತ್ತು. ಆದರೆ, ಈಗಾಗಲೇ ಮಹಿಳೆಯರ ಎಲ್ಲ ಬಗೆಯ ಹಕ್ಕುಗಳ ಮೇಲೆ ಸರ್ಕಾರವು ಹಲವು ನಿರ್ಬಂಧಗಳನ್ನು ಹೇರಲಾಗಿದೆ. 

ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ, ಪುರುಷರಿಂದ ಪ್ರತ್ಯೇಕವಾದ ದಿನಗಳಲ್ಲಿ ರಾಜಧಾನಿಯಲ್ಲಿ ಸಾರ್ವಜನಿಕ ಉದ್ಯಾನಗಳಿಗೆ ಮಾತ್ರ ಭೇಟಿ ನೀಡಬಹುದಾಗಿದೆ.

Image

ತಾಲಿಬಾನಿಗಳ ಆಡಳಿತ: 700 ಮಂದಿ ಸಾವು

ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತ ವಹಿಸಿಕೊಂಡ 10 ತಿಂಗಳಲ್ಲಿ ಅಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿಗಳನ್ನು ಕುರಿತಂತೆ ವಿಶ್ವಸಂಸ್ಥೆಯು ವರದಿ ಬಿಡುಗಡೆ ಮಾಡಿತ್ತು. ಅದರಲ್ಲಿ, ತಾಲಿಬಾನ್ ಆಡಳಿತಕ್ಕೆ ಒಳಪಟ್ಟ ನಂತರ ಅಫ್ಘಾನಿಸ್ತಾನದ ಭದ್ರತಾ ವ್ಯವಸ್ಥೆ ಸುಧಾರಿಸಿದೆ. ಆದರೆ, ಕಳೆದ ಒಂದು ವರ್ಷದಲ್ಲಿ ಆ ದೇಶದ ನೂರಾರು ಮಂದಿ ಮೃತಪಟ್ಟಿರುವುದಾಗಿ ವಿಶ್ವಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿತ್ತು. 2021ರ ಆಗಸ್ಟ್‌ ಮಧ್ಯದಿಂದ ಈವರೆಗೆ ಸುಮಾರು 700 ಮಂದಿ ಸಾವನ್ನಪ್ಪಿದ್ದು, 1,400 ಜನರು ಗಾಯಗೊಂಡಿದ್ದಾರೆ ಎಂದು ವರದಿಯು ಅಂಕಿ ಅಂಶಗಳನ್ನು ಬಹಿರಂಗ ಪಡಿಸಿತ್ತು.

ಮಹಿಳೆಯರು ಮತ್ತು ಹೆಣ್ಣುಮಕ್ಕಳ ಹಕ್ಕುಗಳನ್ನು ಕಸಿದುಕೊಂಡ ತಾಲಿಬಾನ್‌ ಸರ್ಕಾರ

ತಾಲಿಬಾನಿಗಳು ಆಡಳಿತ ಆರಂಭಿಸಿದ ನಂತರ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವುದರೊಂದಿಗೆ ಮಾನವ ಹಕ್ಕುಗಳನ್ನು ನಿರ್ಬಂಧಿಸಿರುವ ಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯು ವಿಷಾದ ವ್ಯಕ್ತಪಡಿಸಿದೆ.

ಕಣ್ಣುಗಳನ್ನು ಹೊರತುಪಡಿಸಿ ಮಹಿಳೆಯರು ತಮ್ಮ ಇಡೀ ದೇಹವನ್ನು ಬುರ್ಖಾದಿಂದ ಮುಚ್ಚಿಕೊಳ್ಳಬೇಕೆಂದು ತಾಲಿಬಾನ್‌ ಸರ್ಕಾರವು ಸುಗ್ರೀವಾಜ್ಞೆಗಳನ್ನು ಹೊರಡಿಸಿತ್ತು. ಹುಡುಗಿಯರು ಆರನೇ ತರಗತಿಯ ನಂತರ ಶಾಲೆಗೆ ಹೋಗುವುದನ್ನು ಸರ್ಕಾರವು ನಿಷೇಧಿಸಿತ್ತು.

ಬಾಲಕಿಯರು ಮಾಧ್ಯಮಿಕ ಶಾಲೆಗೆ ತೆರಳಲು ಅವಕಾಶ ನೀಡದಿರುವ ನಿರ್ಧಾರವು ಒಂದು ಪೀಳಿಗೆಯ ಮಕ್ಕಳ 12 ವರ್ಷಗಳ ಮೂಲಭೂತ ಶಿಕ್ಷಣವನ್ನು ಪೂರ್ಣಗೊಳಿಸುವುದಿಲ್ಲ ಎಂದು ವಿಶ್ವಸಂಸ್ಥೆಯು ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಆಗಸ್ಟ್‌ 15| ಕಬ್ಬನ್‌ಪಾರ್ಕ್‌ ರಸ್ತೆಯಲ್ಲಿ ಖಾಸಗಿ ವಾಹನ ಸಂಚಾರ ನಿರ್ಬಂಧ

ಧಾರ್ಮಿಕ ಪಂಡಿತರ ಮಹಾಕೂಟದಲ್ಲಿ ಮಹಿಳೆಯರನ್ನು ನಿಷೇಧಿಸಿದ್ದ ತಾಲಿಬಾನ್‌

ತಾಲಿಬಾನಿಗರು ಆಯೋಜಿಸಿದ್ದ ಧಾರ್ಮಿಕ ಪಂಡಿತರ ಮಹಾಕೂಟದಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ ಎಂದು  ತಾಲಿಬಾನ್‌ನ ಉಪ ಪ್ರಧಾನಮಂತ್ರಿ ಮೌಲಾವಿ ಅಬ್ದುಲ್‌ ಸಲಾಂ ಹನಫಿ ಇತ್ತೀಚಿಗೆ ತಿಳಿಸಿದ್ದರು.

ʻʻಮಹಿಳೆಯರನ್ನು ನಾವು ಮಾತೆಯರು ಮತ್ತು ಸಹೋದರಿಯರಂತೆ ಗೌರವಿಸುತ್ತೇವೆ. ಆದರೆ, ಅವರು ನಮ್ಮ ಕೂಟದಲ್ಲಿ ಭಾಗವಹಿಸುವಂತಿಲ್ಲ. ಮಹಿಳೆಯರ ಪರವಾಗಿ ಅವರ ಗಂಡು ಮಕ್ಕಳು ಭಾಗವಹಿಸಬಹುದುʼʼ ಎಂದು ಅವರು ಹೇಳಿದ್ದರು.

ಮಾಧ್ಯಮ ಉದ್ಯೋಗ ಕಳೆದುಕೊಂಡ ಶೇ. 80 ಮಹಿಳೆಯರು

ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಆರಂಭಿಸಿದ ಮೇಲೆ, ಮಾಧ್ಯಮದಲ್ಲಿ ಕೆಲಸ ಮಾಡುವ ಶೇ. 80 ಮಹಿಳೆಯರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಹಕ್ಕುಗಳಿಗಾಗಿ ಅವರು ಹೋರಾಡುತ್ತಿದ್ದಾರೆ. ಬ್ಯಾಂಕ್‌ಗಳಲ್ಲಿದ್ದ ಮಹಿಳಾ ಉದ್ಯೋಗಿಗಳು ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ. ಟಿವಿ ನಿರೂಪಕರು ಹಿಜಾಬ್ ಧರಿಸಿ ವಾರ್ತೆ ಓದುವಂತೆ ಆದೇಶಿಸಲಾಗಿದೆ. ಮಹಿಳಾ ಪೊಲೀಸರಿಗೂ ಬೆದರಿಕೆಗಳು ಬಂದಿವೆ. ಮಹಿಳೆಯರು ಅವರ ಕುಟುಂಬದ ಪುರುಷ ಸದಸ್ಯರ ಜೊತೆಯಿಲ್ಲದೇ ಪ್ರಯಾಣಿಸಲು ಅನುಮತಿಸುವುದಿಲ್ಲ. ಮಹಿಳೆಯರ ಗರ್ಭಧಾರಣೆಯ ಹಕ್ಕುಗಳಿಗೂ ಕಡಿವಾಣ ಹಾಕಲಾಗುತ್ತಿದೆ. ಅಫ್ಘನ್‌ನಲ್ಲಿ ತಾಲಿಬಾನಿಗರು ಆಡಳಿತ ಆರಂಭಿಸುತ್ತಿದ್ದಂತೆ ಮಹಿಳೆಯರ ವಿರುದ್ಧ ದೌರ್ಜನ್ಯಗಳು ನಿರಂತರವಾಗಿ ಹೆಚ್ಚಾಗಿವೆ.

ವ್ಯವಸ್ಥಿತ ದಬ್ಬಾಳಿಕೆ ಕೊನೆಗೊಳಿಸಲು ವಿಶ್ವಸಂಸ್ಥೆ ಒತ್ತಾಯ

ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ʻವ್ಯವಸ್ಥಿತ ದಬ್ಬಾಳಿಕೆʼ ಕೊನೆಗೊಳಿಸಿ ಅವರ ಹಕ್ಕುಗಳ ಸುಧಾರಣೆಗೆ ಒತ್ತು ನೀಡುವಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ರಾಯಭಾರಿ ಮಿಶೆಲ್‌ ಬ್ಯಾಷ್ಲೆಟ್ ತಾಲಿಬಾನ್‌ ಸರ್ಕಾರವನ್ನು ಇತ್ತೀಚೆಗೆ ಒತ್ತಾಯಿಸಿದ್ದರು.

ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ʻಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಇಂದಿನ ಪರಿಸ್ಥಿತಿಯ ಕುರಿತು ನಡೆದ ತುರ್ತು ಕೌನ್ಸಿಲ್ ಚರ್ಚೆಯನ್ನು ಉದ್ದೇಶಿಸಿ ಬ್ಯಾಷ್ಲೆಟ್ ಮಾತನಾಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್