ಮೇಕೆದಾಟು | ಕರ್ನಾಟಕದ ಒತ್ತಡಕ್ಕೆ ಮಣಿಯದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ತಮಿಳುನಾಡು ಚಿಂತನೆ

  • ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹಿನ್ನೆಲೆ 
  • ಕೇಂದ್ರ ಜಲಶಕ್ತಿ ಸಚಿವರ ಭೇಟಿ ಮಾಡಿದ ತಮಿಳುನಾಡು

ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಚರ್ಚೆಯಲ್ಲಿರುವ ಮೇಕೆದಾಟು ವಿಚಾರವು ಮತ್ತೆ ಮುನ್ನೆಲೆಗೆ ಬಂದಿದ್ದು, ಕರ್ನಾಟಕದ ಒತ್ತಡಕ್ಕೆ ಮಣಿಯದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ತಮಿಳುನಾಡು ಹೇಳಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಅಣೆಕಟ್ಟು ಸಮಸ್ಯೆ ಚರ್ಚಿಸುವ ನಿರ್ಧಾರ ‘ಆಘಾತಕಾರಿ ಮತ್ತು ಕಾನೂನುಬಾಹಿರ‘ ಎಂದು ಹೇಳಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಬಿಡುವುದಿಲ್ಲ. ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲಾಗುವುದು ಎಂದು ‍ಪ್ರತಿಪಾದಿಸಿದ್ದಾರೆ.

ತಮಿಳುನಾಡಿನ ಜಲಸಂಪನ್ಮೂಲ ಸಚಿವ ದುರೈ ಮುರುಗನ್ ನೇತೃತ್ವದಲ್ಲಿ ನಿಯೋಗವೊಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, ಪ್ರಾಧಿಕಾರದ ಅಧ್ಯಕ್ಷ ಎಸ್ ಕೆ ಹಲ್ದಾರ್ ಅವರ ಹೇಳಿಕೆಯಿಂದ ತಮಿಳುನಾಡಿನ ರೈತರು ಮತ್ತು ಜನರಿಗೆ ಆಗಿರುವ ನೋವಿನ ಬಗ್ಗೆ ತಿಳಿಸಲಾಗುವುದು ಎಂದರು. 

ಮೇಕೆದಾಟು  ಅಣೆಕಟ್ಟು ವಿವಾದದ ಕುರಿತು ಕಾವೇರಿ ಪ್ರಾಧಿಕಾರವು ಜೂನ್ 23 ರಂದು ಚರ್ಚೆ ನಡೆಸಲಿದೆ ಎಂದು ಕಾವೇರಿ ನೀರು ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ ಹಲ್ದಾರ್ ಹೇಳಿಕೆ ನೀಡಿದ್ದರು. ಇದು ತಮಿಳುನಾಡಿಗೆ ಆತಂಕ  ಉಂಟು ಮಾಡಿದೆ  ಎಂದು ದುರೈ ಮುರುಗನ್ ನೇತೃತ್ವದ ಶಾಸಕಾಂಗ ಪಕ್ಷದ ನಿಯೋಗವು ತಿಳಿಸಿದೆ.

ಶುಕ್ರವಾರ ಹಲ್ದಾರ್‌ ಅವರು, ತಂಜಾವೂರು ಜಿಲ್ಲೆಯ ಕಲ್ಲನೈ ಅಣೆಕಟ್ಟು ಪರಿಶೀಲಿಸಿದ ನಂತರ, ತಮಿಳುನಾಡಿನ ಆಕ್ಷೇಪಣೆ ಹೊರತಾಗಿಯೂ ಮೇಕೆದಾಟು ಸಮಸ್ಯೆಯನ್ನು ಚರ್ಚಿಸಲು ಪ್ರಾಧಿಕಾರಕ್ಕೆ ಅಧಿಕಾರವಿದೆ ಎಂದು  ಹೇಳಿದ್ದರು. 

ಈ ಸುದ್ದಿಯನ್ನು ಓದಿದ್ದೀರಾ ? ಹಿಮನದಿಯಲ್ಲಿ ಸಿಲುಕಿದ ಪರ್ವತಾರೋಹಿ; ರಕ್ಷಣೆಗೆ ಹವಾಮಾನ ಅಡ್ಡಿ

ಮೇಕೆದಾಟು ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅರ್ಜಿಗೆ ಮಣಿಯಬಾರದೆಂದು ಎಂ ಕೆ ಸ್ಟಾಲಿನ್ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವಾಗ ಚರ್ಚಿಸಲು ಪ್ರಾಧಿಕಾರಕ್ಕೆ ಅಧಿಕಾರವಿಲ್ಲ. ಇದು ಗೊತ್ತಿದ್ದರೂ ಅಧ್ಯಕ್ಷರು ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿರುವುದು ಕಾನೂನು ಬಾಹಿರ ಎಂದು ಸ್ಟಾಲಿನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೇಕೆದಾಟು ವಿಷಯ ಚರ್ಚಿಸದಂತೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಮೇಕೆದಾಟು ಯೋಜನೆ ಚರ್ಚೆಗೆ ತೆಗೆದುಕೊಳ್ಳದಂತೆ ಪ್ರಾಧಿಕಾರಕ್ಕೆ ತಡೆ ನೀಡಬೇಕು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ. 8 ಫೆಬ್ರವರಿ 2018 ನದಿ ನೀರನ್ನು ಹಂಚಿಕೆ ಮಾಡಿ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಎಂಕೆ ಸ್ಟಾಲಿನ್ ನೆನಪಿಸಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್