ತಮಿಳುನಾಡು | ವಿದ್ಯಾರ್ಥಿ ಆತ್ಮಹತ್ಯೆ ; ಕೇವಲ ಎರಡು ವಾರಗಳಲ್ಲಿ ಐವರ ಸಾವು

tamilnadu suicide
  • ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಮನೆಯಲ್ಲಿ ಬಾಲಕ ಶವವಾಗಿ ಪತ್ತೆ
  • ವಿದ್ಯಾರ್ಥಿಗಳಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಆಗಬೇಕು ಎಂದ ಸಿಎಂ

ತಮಿಳುನಾಡಿನಲ್ಲಿ ಬುಧವಾರ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇವಲ ಎರಡು ವಾರಗಳಲ್ಲಿ ಮೃತಪಟ್ಟ ಐದನೇ ವಿದ್ಯಾರ್ಥಿ ಮತ್ತು ಕಳೆದ 24 ಗಂಟೆಗಳಲ್ಲಿ ಆತ್ಮಹತ್ಯೆಗೆ ಶರಣಾದ ಎರಡನೇ ಪ್ರಕರಣ ಇದಾಗಿದೆ. 

"ಶಿವಗಂಗಾ ಜಿಲ್ಲೆಯ ತನ್ನ ಮನೆಯಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಬಾಲಕ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಗಣಿತ ಮತ್ತು ಜೀವಶಾಸ್ತ್ರ ವಿಷಯಗಳು ಅಭ್ಯಾಸ ಮಾಡಲು ಕಷ್ಟಕರವಾಗಿವೆ" ಎಂದು ಬರೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಕಳೆದ ಹದಿನೈದು ದಿನಗಳಲ್ಲಿ ನಾಲ್ವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಮೂವರು 12ನೇ ತರಗತಿ ವಿದ್ಯಾರ್ಥಿನಿಯರಾಗಿದ್ದು, ಇನ್ನೊಬ್ಬರು 11ನೇ ತರಗತಿ ಓದುತ್ತಿದ್ದರು. 

ಇಂದು ಬೆಳಗ್ಗೆ ಶಿವಕಾಶಿಯಲ್ಲಿ  11ನೇ ತರಗತಿಯ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. "ಬಾಲಕಿ ದೀರ್ಘಕಾಲದ, ಹೊಟ್ಟೆನೋವಿನಿಂದ ಬಳಲುತ್ತಿದ್ದಳು" ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಯ ಸಾವಿಗೂ ಕೆಲವೇ ಗಂಟೆಗಳ ಮೊದಲು, ಕಡಲೂರು ಜಿಲ್ಲೆಯಲ್ಲಿ 12 ನೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಳು. ಈಕೆ ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಳು. ಅದರಲ್ಲಿ "ಐಎಎಸ್ ಕನಸು ನನಸು ಮಾಡಲು ನಾನು ಅಸಮರ್ಥಳಾಗಿದ್ದೇನೆ" ಎಂದು ಉಲ್ಲೇಖಿಸಿದ್ದಳು. 

ಈ ಸುದ್ದಿ ಓದಿದ್ದೀರಾ?:  ತಮಿಳುನಾಡು | ವಿದ್ಯಾರ್ಥಿನಿ ಆತ್ಮಹತ್ಯೆ; ಎರಡೇ ವಾರದಲ್ಲಿ ನಾಲ್ಕನೇ ಪ್ರಕರಣ ದಾಖಲು

ಜುಲೈ 25 ರಂದು ತಿರುವಳ್ಳೂರು ಜಿಲ್ಲೆಯ ʼಸೇಕ್ರೆಡ್ ಹಾರ್ಟ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆʼಯ 12ನೇ ತರಗತಿ ವಿದ್ಯಾರ್ಥಿನಿ ತನ್ನ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿರಲಿಲ್ಲ. 

ಜುಲೈ 13 ರಂದು ಕಲ್ಲಕುರಿಚಿ ಜಿಲ್ಲೆಯ ಖಾಸಗಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಳು. ಇದರಿಂದಾಗಿ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಪ್ರಕರಣ ಸಂಬಂಧ ಇಬ್ಬರು ಶಿಕ್ಷಕರು ಸೇರಿ ಐವರನ್ನು ಬಂಧಿಸಲಾಗಿತ್ತು. 

ಮಂಗಳವಾರ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು, "ವಿದ್ಯಾರ್ಥಿಗಳ ಆತ್ಮಹತ್ಯೆ ವರದಿಗಳು ತೀವ್ರ ನೋವನ್ನುಂಟು ಮಾಡಿವೆ. ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು" ಎಂದು ಅವರು ಕರೆ ನೀಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್