
- 4 ವರ್ಷದ ಹೆಣ್ಣುಮಗುವನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಪ್ರಕರಣ
- ಬಾಲಕಿ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ಒದಗಿಸುವಂತೆ ಆದೇಶಿಸಿದ ನ್ಯಾಯಾಲಯ
4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಆರೋಪದಲ್ಲಿ ಮಾಜಿ ಸೈನಿಕ ದಂಪತಿಗೆ ತಮಿಳುನಾಡಿನ ತಿರುವಳ್ಳೂರು ಮಹಿಳಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಬಾಲಕಿಯನ್ನು ಅಪಹರಿಸಿದ್ದಕ್ಕಾಗಿ ಹತ್ತು ವರ್ಷಗಳ ಜೈಲು ಶಿಕ್ಷೆ ಹಾಗೂ ಕೊಲೆ ಮಾಡಿರುವುದಕ್ಕಾಗಿ ಜೀವಾವಧಿ ಶಿಕ್ಷೆಗೆ ನ್ಯಾಯಾಲಯ ಆದೇಶಿಸಿದೆ.
ಅಪರಾಧಿಗಳ ಮಾಜಿ ಸೈನಿಕ, ಶಿಕ್ಷೆ ಘೋಷಣೆಯಾಗುವ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ತನ್ನ ಉಡುಪಿನೊಳಗೆ ಚಾಕುವನ್ನು ಬಚ್ಚಿಟ್ಟುಕೊಂಡಿದ್ದನು. ನ್ಯಾಯಾಲಯಕ್ಕೆ ಪ್ರವೇಶಿಸುವ ಮುನ್ನ ಪೊಲೀಸರು ಆತನಿಂದ ಆಯುಧ ವಶಪಡಿಸಿಕೊಂಡಿದ್ದಾರೆ.
ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಆರೋಪಿಗಳನ್ನು ದೋಷಿ ಎಂದು ಘೋಷಿಸಿದರು.
ʻʻನ್ಯಾಯಾಲಯಕ್ಕೆ ಪ್ರವೇಶಿಸುವ ಮೊದಲು, ಪೊಲೀಸರು ದಂಪತಿಯನ್ನು ಪರೀಕ್ಷಿಸಿದಾಗ ಸುಂದರಂನ ಜೇಬಿನಲ್ಲಿ ಚಾಕು ಪತ್ತೆಯಾಗಿದೆ. ನ್ಯಾಯಾಲಯ ತೀರ್ಪು ನೀಡಿದ ನಂತರ ತಮ್ಮ ಜೀವನವನ್ನು ಕೊನೆಗೊಳಿಸಲು ಅಪರಾಧಿ ಬಯಸಿದ್ದʼʼ ಎಂದು ಪೊಲೀಸ್ ಇನ್ಸ್ಪೆಕ್ಟರ್ ಆರ್ ವಿಜಯರಾಘವನ್ ಹೇಳಿದರು.
ಈ ಸುದ್ದಿ ಓದಿದ್ದೀರಾ?: ಬಿಎಂಟಿಸಿ | ಕಡಿಮೆ ಖರ್ಚಿನ ಇ ಬಸ್ ಬಿಟ್ಟು ಹೆಚ್ಚು ವೆಚ್ಚ ಬೇಡುವ 840 ಡೀಸೆಲ್ ಬಸ್ ಖರೀದಿಗೆ ಮುಂದಾದ ಸಂಸ್ಥೆ!
ಬಾಲಕಿಯ ನೆರೆಹೊರೆಯವರಾಗಿದ್ದ ಆರೋಪಿ ಸುಂದರಂ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಘಟನೆ 2019ರ ಜೂನ್ನಲ್ಲಿ ನಡೆದಿತ್ತು. ಬಾಲಕಿ ಕೂಗಿಕೊಂಡಾಗ, ಆರೋಪಿ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ, ಪತ್ನಿಯ ಸಹಾಯದಿಂದ, ಅವನು ಶವವನ್ನು ಗೋಣಿಚೀಲದಲ್ಲಿ ಕಟ್ಟಿಹಾಕಿ, ಮನೆಯ ಮೂಲೆಯೊಂದರಲ್ಲಿ ಇಟ್ಟಿದ್ದರು. ನಂತರ ಬಾಲಕಿಯ ಹುಡುಕಾಟದಲ್ಲಿ ಆಕೆಯ ಕುಟುಂಬದವರೊಂದಿಗೆ ಸೇರಿಕೊಂಡಿದ್ದಾರೆ. ನಂತರ ಮನೆಯವರು ಇಲ್ಲದಿದ್ದಾಗ ದಂಪತಿ ಶವವನ್ನು ಬಾಲಕಿಯ ಮನೆಯಲ್ಲಿದ್ದ ನೀರಿನ ತೊಟ್ಟಿಗೆ ಎಸೆದಿದ್ದಾರೆ. ಈ ಪ್ರಕರಣ ಸಂಬಂಧ, ಆರೋಪಿಗಳನ್ನು 2019ರ ಜೂನ್ 28ರಂದು ಬಂಧಿಸಲಾಗಿತ್ತು.
ಸಾಕ್ಷಾಧಾರಗಳನ್ನು ನಾಶ ಮಾಡಿದ ಕಾರಣಕ್ಕೆ ಅಪರಾಧಿ ಸುಂದರಂಗೆ ಮೂರು ವರ್ಷ ಜೈಲು ಶಿಕ್ಷೆ, ಪೋಕ್ಸೋ ಪ್ರಕರಣದಡಿ ಜೀವಾವಧಿ ಶಿಕ್ಷೆ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ್ದಕ್ಕಾಗಿ ರಾಜಮ್ಮಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಹಾಗೆಯೇ ಅಪರಾಧಿಗಳಿಗೆ ತಲಾ 22,000 ದಂಡವನ್ನು ವಿಧಿಸಿದೆ.
ಸಂತ್ರಸ್ತೆಯ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡುವಂತೆ ನ್ಯಾಯಮೂರ್ತಿ ಸುಭದ್ರಾ ದೇವಿ ಅವರು ಅಪರಾಧಿಗೆ ಆದೇಶಿಸಿದರು.