ತಮಿಳುನಾಡು | ವಿದ್ಯಾರ್ಥಿನಿ ಸಾವು ಪ್ರಕರಣದಲ್ಲಿ ಇಬ್ಬರು ಶಿಕ್ಷಕರ ಬಂಧನ

tamilnadu school
  • ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 300 ಜನರು ಪೊಲೀಸರ ವಶಕ್ಕೆ
  • ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ನ್ಯಾಯಾಲಯ ನಿರ್ದೇಶನ

ತಮಿಳುನಾಡಿನ ಕಲ್ಲಕುರಿಚಿ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನ ಸೇಲಂನ ಖಾಸಗಿ ಶಾಲೆಯ ಇಬ್ಬರು ಶಿಕ್ಷರನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ಮತ್ತು ಜುಲೈ 17ರಂದು ಶಾಲೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಸುಮಾರು 300 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

Eedina App

ವಿದ್ಯಾರ್ಥಿನಿ ಸಾವಿನ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆಸಿದ ಆರೋಪದಡಿ ಭಾನುವಾರ 70 ಮಂದಿಯನ್ನು ಬಂಧಿಸಲಾಗಿತ್ತು. ವಿದ್ಯಾರ್ಥಿನಿ ಸಾವಿಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯ ಮೂವರನ್ನು ಬಂಧಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ಅವರು ಹಿಂಸಾಚಾರದಲ್ಲಿ ತೊಡಗಿರುವವರನ್ನು ಗುರುತಿಸಲು ವಿಶೇಷ ತಂಡಗಳನ್ನು ರಚಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಹೊಸದಾಗಿ ಶವಪರೀಕ್ಷೆ ನಡೆಸುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ.

AV Eye Hospital ad

ಏನಿದು ಪ್ರಕರಣ?

12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಜುಲೈ 13ರಂದು ಶವವಾಗಿ ಆಕೆಯ ಖಾಸಗೀ ಶಾಲಾ ಆವರಣದಲ್ಲಿ ಪತ್ತೆಯಾಗಿದ್ದಳು. ಆದರೆ, ಸಾವಿಗೂ ಮೊದಲೇ ಆಕೆಗೆ ಗಾಯಗಳಾಗಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿದೆ. ಇದರಿಂದಾಗಿ ಪೋಷಕರು ಮೃತದೇಹ ಸ್ವೀಕರಿಸುವುದಕ್ಕೆ ಹಿಂದೇಟು ಹಾಕಿದ್ದರು.

ಈ ಸುದ್ದಿ ಓದಿದ್ದೀರಾ? : ತಮಿಳುನಾಡು | ಶಿಕ್ಷಕರ ಕಿರುಕುಳ ಆರೋಪ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ, ತೀವ್ರ ಪ್ರತಿಭಟನೆ

"ಅಧ್ಯಯನಕ್ಕೆ ಸಂಬಂಧಿಸಿದಂತೆ ಗಣಿತ ಮತ್ತು ರಸಾಯನ ಶಾಸ್ತ್ರ ಬೋಧಿಸುವ ಇಬ್ಬರು ಶಿಕ್ಷಕರು ನಮ್ಮ ಮಗಳಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ" ಎಂದು ಪೋಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕಳೆದ ಐದು ದಿನಗಳಿಂದ ಕಲ್ಲಕುರಿಚಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app