ತಮಿಳುನಾಡು | ದಲಿತ ಮಕ್ಕಳಿಗೆ ತಿಂಡಿತಿನಿಸು ಮಾರಲು ನಿರಾಕರಿಸಿದ ಅಂಗಡಿ ಮಾಲೀಕನ ಬಂಧನ

  • ದಲಿತರಿಗೆ ಯಾವುದೇ ವಸ್ತುಗಳನ್ನು ಮಾರಾಟ ಮಾಡದಂತೆ ನಿರ್ಬಂಧ
  • ಭೂಮಿ ವಿಚಾರಕ್ಕೆ ಯಾದವರು - ದಲಿತರ ನಡುವೆ ವೈಮನಸ್ಸು 

ಪರಿಶಿಷ್ಟ ಸಮುದಾಯದ ಮಕ್ಕಳಿಗೆ ತಿಂಡಿತಿನಿಸುಗಳನ್ನು ಮಾರಾಟ ಮಾಡಲು ನಿರಾಕರಿಸಿದ ಯಾದವ ಸಮುದಾಯದ ಅಂಗಡಿ ಮಾಲೀಕನನ್ನು ಬಂಧಿಸಲಾಗಿದೆ.

ತಮಿಳುನಾಡಿನ ತೆಂಕಶಿಯ ಗ್ರಾಮವೊಂದರಲ್ಲಿ ಜಾತಿ ತಾರತಮ್ಯ ಆಚರಣೆಯ ಘಟನೆ ಬೆಳಕಿಗೆ ಬಂದಿದ್ದು, ದಲಿತ ಸಮುದಾಯಕ್ಕೆ ಸೇರಿದ ಶಾಲಾ ಮಕ್ಕಳಿಗೆ ಮಿಠಾಯಿಗಳನ್ನು ಮಾರಾಟ ಮಾಡದ ಅಂಗಡಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಜಿಲ್ಲಾಡಳಿತ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದೆ.

Eedina App

ತಿಂಡಿತಿನಿಸುಗಳನ್ನು ಖರೀದಿಸಲು ಹೋದ ಕೆಲವು ಶಾಲಾ ಮಕ್ಕಳಿಗೆ ಅಂಗಡಿ ಮಾಲೀಕ ಎಸ್ ಮಹೇಶ್ವರನ್ ತಮ್ಮ ಬೀದಿಯಲ್ಲಿರುವ ಯಾರಿಗೂ ಅಂಗಡಿಯಿಂದ ಸರಕುಗಳನ್ನು ನೀಡಲಾಗುವುದಿಲ್ಲ ಎಂದು ಮಕ್ಕಳಿಗೆ ಹೇಳಿದ್ದಾನೆ.

ಗ್ರಾಮದಲ್ಲಿ ನೆಲೆಸಿರುವ ಯಾದವರು ಮತ್ತು ದಲಿತರ ನಡುವೆ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಇತ್ತು. ಎರಡೂ ಸಮುದಾಯಗಳ ಗ್ರಾಮಸ್ಥರು ಪರಸ್ಪರರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಇತ್ತೀಚೆಗೆ ಯಾದವ ಸಮುದಾಯಕ್ಕೆ ಸೇರಿದ ಕೆ ರಾಮಕೃಷ್ಣನ್ ಅವರು ಅಗ್ನಿವೀರ್ ಯೋಜನೆಗೆ ಆಯ್ಕೆಯಾಗಿದ್ದಾರೆ. ಆದರೆ, ಅವರ ವಿರುದ್ಧ ದಾಖಲಾಗಿರುವ ಪ್ರಕರಣದಿಂದಾಗಿ ಸೇನೆಗೆ ಸೇರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಯಾದವ ಸಮುದಾಯದ ಜನರು ದಲಿತರ ಜತೆ ರಾಜಿ ಮಾತುಕತೆ ನಡೆಸಿ ಪ್ರಕರಣ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ, ಮಾತುಕತೆ ಫಲಕಾರಿಯಾಗಿಲ್ಲ. ಹಾಗಾಗಿ ಯಾದವರು ಮತ್ತು ದಲಿತರು ನಡುವೆ ಬಾಂಧವ್ಯ ಮುರಿದಿತ್ತು.

AV Eye Hospital ad

ಕೆಲವು ದಿನಗಳ ಹಿಂದೆ ರಾಮಕೃಷ್ಣನ್ ಅವರ ಕುಟುಂಬದವರು ಕೆಲವು ಜನರು ಜತೆ ಸಭೆ ನಡೆಸಿ, ದಲಿತ ಸಮುದಾಯಕ್ಕೆ ಸೇರಿದ ಜನರಿಗೆ ಸರಕುಗಳನ್ನು ಮಾರಾಟ ಮಾಡದಿರಲು ನಿರ್ಧರಿಸಲಾಗಿತ್ತು. ಅದರಂತೆ ಮಕ್ಕಳು ತಿಂಡಿ ಕೊಳ್ಳಲು ಹೋದಾಗ ಅಂಗಡಿ ಮಾಲೀಕ ನಿರಾಕರಿಸಿದ್ದ.

ವೀಡಿಯೋದಲ್ಲಿ, “ಇಲ್ಲಿನ ಯಾವ ಅಂಗಡಿಯಲ್ಲೂ ನೀವು ಮಿಠಾಯಿ ಖರೀದಿಸುವಂತಿಲ್ಲ. ನಿಮಗೆ ಯಾವುದೇ ಬಗೆಯ ತಿನಿಸುಗಳನ್ನೂ ನೀಡಬಾರದೆಂಬ ನಿರ್ಬಂಧವಿದೆ. ಅಂಗಡಿಯವರು ನಮಗೆ ತಿನಿಸುಗಳನ್ನು ಕೊಡುತ್ತಿಲ್ಲವೆಂದು ನಿಮ್ಮ ಮನೆಯವರಿಗೆ ಹೋಗಿ ಹೇಳಿ. ಇಲ್ಲಿ ನಿಲ್ಲಬೇಡಿ. ಈಗ ಶಾಲೆಗೆ ಹೊರಡಿ” ಎಂದು ಅಂಗಡಿ ಮಾಲೀಕ ಹೇಳಿದ್ದಾನೆ.

ಬಳಿಕ ಬಾಲಕನೊಬ್ಬ “ನಿರ್ಬಂಧ, ಯಾವ ನಿರ್ಬಂಧ?” ಎಂದು ಮುಗ್ದತೆಯಿಂದ ಕೇಳಿದಾಗ, ನಿಮ್ಮ ಬೀದಿಯ ಜನರಿಗೆ ಯಾವುದೇ ಬಗೆಯ ತಿನಿಸುಗಳನ್ನು ನೀಡಬಾರದೆಂದು ಗ್ರಾಮದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈಗ ಹೊರಡಿ” ಎಂದು ಮಾಲೀಕ ಹೇಳಿದ ನಂತರ ಬಾಲಕರು ಬರಿಗೈಯಲ್ಲಿ ಅಲ್ಲಿಂದ ಹೊರಡುವ ದೃಶ್ಯ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ್ದಕ್ಕೆ ಪ್ರಜ್ಞೆ ತಪ್ಪುವಂತೆ ಹೊಡೆದ ಶಿಕ್ಷಕ

“ತೆಂಕಶಿಯ ಗ್ರಾಮವೊಂದರಲ್ಲಿ ಜಾತಿ ತಾರತಮ್ಯ ಆಚರಣೆ ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ಮಹೇಶ್ವರ್ ಮತ್ತು ಮತ್ತೊಬ್ಬ ಆರೋಪಿ ಮೂರ್ತಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್ ಕೃಷ್ಣರಾಜ್ ತಿಳಿಸಿದ್ದಾರೆ.

“ದಲಿತ ಸಮುದಾಯದ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲು ನಿರಾಕರಿಸಿದ ಘಟನೆ ಬಳಿಕ ಅಂಗಡಿಗೆ ತಹಶೀಲ್ದಾರ್ ಸೀಲ್ ಮಾಡಿದ್ದಾರೆ. ಪೊಲೀಸರು ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 153 ಎ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ” ಎಂದು ತೆಂಕಶಿ ಜಿಲ್ಲಾಧಿಕಾರಿ ಪಿ ಆಕಾಶ್ ತಿಳಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಮಾಹಿತಿ ಆಧರಿತ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app