
- ಕುಟುಂಬದವರು ತೋರಿಸಿದ ವರನನ್ನು ಮದುವೆಯಾಗಲು ನಿರಾಕರಿಸಿದ ಯುವತಿ
- ಯುವತಿಯನ್ನು ಕೊಂದು, ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಹಿಳೆ
ಕುಟುಂಬದವರು ತೋರಿಸಿದ ವರನನ್ನು ವಿವಾಹವಾಗಲೂ ಒಪ್ಪದ ಕಾರಣಕ್ಕೆ 20 ವರ್ಷದ ಯುವತಿಯನ್ನು ತಾಯಿಯೇ ಕತ್ತುಹಿಸುಕಿ ಕೊಂದಿರುವ ಅಮಾನವೀಯ ಘಟನೆ ತಮಿಳುನಾಡಿನ ತಿರುನೆಲ್ವೆಲಿಯಲ್ಲಿ ಬುಧವಾರ (ನವೆಂಬರ್ 23) ನಡೆದಿದೆ. ಇದು ಮರ್ಯಾದಾಗೇಡು ಹತ್ಯೆ ಪ್ರಕರಣ ಎಂದು ಶಂಕಿಸಲಾಗಿದ್ದು, ಮಗಳನ್ನು ಕೊಂದು ನಂತರ, ಆಕೆಯು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಯುವತಿಯು, ಮತ್ತೊಂದು ಸಮುದಾಯದ ಯುವಕನನ್ನು ಮದುವೆಯಾಗಲು ಇಚ್ಛಿಸಿದ್ದಳು. ಆದರೆ, ಇದಕ್ಕೆ ಆಕೆಯ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೇ, ತಮ್ಮದೇ ಸಮುದಾಯದ ಯುವಕನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಯುವತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಸಂತ್ರಸ್ತೆಯ ತಂದೆ ಮತ್ತು ಸಹೋದರ ಚೆನ್ನೈನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಕೊಯಂಬತ್ತೂರಿನಲ್ಲಿ ಶುಶ್ರೂಶಕಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯು ಆರು ತಿಂಗಳ ಹಿಂದೆ ಊರಿಗೆ ಬಂದು ತಾಯಿಯೊಂದಿಗೆ ವಾಸವಿದ್ದಳು.
ಈ ಸುದ್ದಿ ಓದಿದ್ದೀರಾ?: 9 ಮತ್ತು 10ನೇ ತರಗತಿಗಳು ಪ್ರಾಥಮಿಕ ಶಿಕ್ಷಣದ ಭಾಗ: ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ
ಬುಧವಾರ ಕುಟುಂಬದವರು ಗೊತ್ತುಮಾಡಿದ ತಮ್ಮದೇ ಸಮುದಾಯದ ವರನನ್ನು ನೋಡುವ ಸಂಪ್ರದಾಯವಿತ್ತು. ಯುವತಿಯು ಆತನನ್ನು ಭೇಟಿಯಾಗಬೇಕಿತ್ತು. ಆದರೆ, ಸಂತ್ರಸ್ತೆಯು ಆತನನ್ನು ಭೇಟಿ ಮಾಡಲು ವಿರೋಧ ವ್ಯಕ್ತಪಡಿಸಿದ್ದಾಳೆ. ಈ ವಿಚಾರವಾಗಿ ತಾಯಿ ಮಗಳ ನಡುವೆ ವಾಗ್ವಾದ ನಡೆದು, ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ತನಿಖಾಧಿಕಾರಿಯು ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಆರೋಪಿ ಮಹಿಳೆ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.