ಉತ್ತರ ಪ್ರದೇಶ | ತನ್ನ ಬೈಕ್ ಮುಟ್ಟಿದ್ದಕ್ಕೆ ದಲಿತ ವಿದ್ಯಾರ್ಥಿಯನ್ನು ಕಬ್ಬಿಣದ ರಾಡ್‌ನಿಂದ ಥಳಿಸಿದ ಶಿಕ್ಷಕ

  • ಮೋಟಾರ್ ಸೈಕಲ್ ಮುಟ್ಟಿದ್ದಕ್ಕೆ ತರಗತಿ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ
  • ಶಿಕ್ಷಕ ಕೃಷ್ಣಮೋಹನ್ ಶರ್ಮಾನನ್ನು ಅಮಾನತು ಮಾಡಿದ ಶಿಕ್ಷಣ ಇಲಾಖೆ

ದಲಿತ ವಿದ್ಯಾರ್ಥಿ ತನ್ನ ಮೋಟಾರ್ ಸೈಕಲ್ ಮುಟ್ಟಿದ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ತರಗತಿ ಕೊಠಡಿ ಒಳಗೆ ಕೂಡಿ ಬೀಗ ಹಾಕಿ ಕಬ್ಬಿಣದ ರಾಡ್‌ನಿಂದ ವಿದ್ಯಾರ್ಥಿಗೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ನಾಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ರಾನೌಪುರದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ಕೃಷ್ಣ ಮೋಹನ್ ಶರ್ಮಾ ಎಂಬುವವನನ್ನು ಅಮಾನತು ಮಾಡಲಾಗಿದೆ.

6 ನೇ ತರಗತಿಯ ಬಾಲಕ ತನ್ನ ಶಿಕ್ಷಕ ಕೃಷ್ಣ ಮೋಹನ್ ಶರ್ಮಾ ಅವರ ಮೋಟಾರ್ ಸೈಕಲ್ ಅನ್ನು ಮುಟ್ಟಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕ, ವಿದ್ಯಾರ್ಥಿಯನ್ನು ತರಗತಿ ಕೋಣೆಗೆ ಕರೆತಂದು ಬಾಗಿಲಿಗೆ ಬೀಗ ಹಾಕಿದ್ದಾನೆ.

“ಕೃಷ್ಣ ಮೋಹನ್ ಶರ್ಮಾ ತನಗೆ ಕಬ್ಬಿಣದ ರಾಡ್ ಮತ್ತು ಪೊರಕೆಯಿಂದ ಹೊಡೆದಿದ್ದಾನೆ. ಕುತ್ತಿಗೆಯ ಭಾಗಕ್ಕೆ ಜೋರಾಗಿ ಪೆಟ್ಟು ಬಿದ್ದಿದೆ” ಎಂದು ಮಗು ಆರೋಪಿಸಿದ್ದು, ಶಾಲೆಯ ಇತರ ಸಿಬ್ಬಂದಿ ಬಾಲಕನನ್ನು ರಕ್ಷಿಸಿದ್ದಾರೆ ಎಂದು ನಾಗ್ರಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ದೇವೇಂದ್ರ ನಾಥ್ ದುಬೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆನ್ನು ಮೂಳೆ ಮುರಿದುಕೊಂಡು ಹಾಸಿಗೆ ಹಿಡಿದ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಮಗ: ಸಂಕಷ್ಟದಲ್ಲಿ ಪೋಷಕರು

ಘಟನೆಯ ಬಳಿಕ ಆಕ್ರೋಶಗೊಂಡ ವಿದ್ಯಾರ್ಥಿಯ ಕುಟುಂಬಸ್ಥರು, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಾಲೆಯ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಎಸ್ಎಚ್ಒ ಶಾಲೆಗೆ ಆಗಮಿಸಿ ಆರೋಪಿ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕುಟುಂಬ ಸದಸ್ಯರಿಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಬಿಇಒ ವರದಿಯ ಆಧಾರದ ಮೇಲೆ ಆರೋಪಿ ಶಿಕ್ಷಕ ಕೃಷ್ಣ ಮೋಹನ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಮಣಿರಾಮ್ ಸಿಂಗ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್