ತೆಲಂಗಾಣ | ಎಸ್‌ಟಿ ಮೀಸಲಾತಿ ಶೇ. 6 ರಿಂದ 10ಕ್ಕೆ ಹೆಚ್ಚಿಸಲಾಗುವುದು; ಕೆಸಿಆರ್ ಘೋಷಣೆ

cm chandrashekar rao
  • 'ಬುಡಕಟ್ಟು ಆತ್ಮೀಯ ಸಮ್ಮೇಳನ'ದಲ್ಲಿ ಸಿಎಂ ಕೆ ಚಂದ್ರಶೇಖರ ರಾವ್ ಘೋಷಣೆ
  • ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ

"ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾತಿಯನ್ನು ಶೇ. 6 ರಿಂದ ಶೇ. 10 ಕ್ಕೆ ಹೆಚ್ಚಿಸಲಾಗುತ್ತಿದ್ದು, ಮುಂದಿನ ವಾರದಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗುವುದು" ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್‌) ತಿಳಿಸಿದ್ದಾರೆ. 

ಹೈದರಾಬಾದ್‌ನ ಎನ್‌ಟಿಆರ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ “ಬುಡಕಟ್ಟು ಆತ್ಮೀಯ ಸಮ್ಮೇಳನ”ದಲ್ಲಿ ಕೆಸಿಆರ್‌ ಈ ಘೋಷಣೆ ಮಾಡಿದರು.

“ನಾನು ಇಂದು ತುಂಬಾ ಸಂತೋಷವಾಗಿದ್ದೇನೆ. ಎಲ್ಲ ಬುಡಕಟ್ಟು ಮತ್ತು ಆದಿವಾಸಿಗಳಿಗೆ ಶುಭಾಶಯಗಳು. ಆದಿವಾಸಿಗಳಿಗಾಗಿ ಹೈದರಾಬಾದ್ ನಗರದ ಹೃದಯಭಾಗದಲ್ಲಿರುವ ಬಂಜಾರಾ ಹಿಲ್ಸ್‌ನಲ್ಲಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಮರಂ ಭೀಮ್ ಆದಿವಾಸಿ ಭವನ ಮತ್ತು ಸೇವಾಲಾಲ್ ಬಂಜಾರ ಭವನಗಳ ನಿರ್ಮಾಣ ಪ್ರಾರಂಭಿಸಿದ್ದೇವೆ. ದಲಿತರಿಗಾಗಿ 'ದಲಿತ ಬಂಧು' ಯೋಜನೆ ಜಾರಿ ಮಾಡಿದಂತೆಯೇ ಗಿರಿಜನರಿಗೆ 'ಗಿರಿಜನ ಬಂಧು' ಎನ್ನುವ ಹೊಸ ಯೋಜನೆ ಜಾರಿಗೆ ತರುತ್ತಿದ್ದೇವೆ” ಎಂದು ಕೆಸಿಆರ್ ಹೇಳಿದ್ದಾರೆ.

“ಎಸ್‌ಟಿ ಮೀಸಲಾತಿಯನ್ನು ಶೇಕಡಾ 10 ಕ್ಕೆ ಹೆಚ್ಚಿಸಲು, ತೆಲಂಗಾಣ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಧಾನಿ ಮೋದಿಯವರೇ, ನೀವೇಕೆ ಅದನ್ನು ಒಪ್ಪಿಕೊಳ್ಳುತ್ತಿಲ್ಲ? ನಾನು ನಿಮ್ಮನ್ನು ಕೈಮುಗಿದು ಕೇಳುತ್ತಿದ್ದೇನೆ. ನಮ್ಮ ಬುಡಕಟ್ಟು ಮಸೂದೆಯನ್ನು ಅಂಗೀಕರಿಸಿ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಿ. ರಾಷ್ಟ್ರಪತಿಯೂ ಆದಿವಾಸಿ ಸಮುದಾಯದವರು; ಆದ್ದರಿಂದ ಅವರು ಈ ಮಸೂದೆಯನ್ನು ನಿರಾಕರಿಸುವುದಿಲ್ಲ” ಎಂದು ವಿನಂತಿಸಿದರು. 

ಈ ಸುದ್ದಿ ಓದಿದ್ದೀರಾ? ಒಬಿಸಿ, ಎಸ್ಸಿ- ಎಸ್ಟಿ ಮೀಸಲಾತಿ ಪ್ರಮಾಣ ಏರಿಕೆಗೆ ಜಾರ್ಖಂಡ್ ಕ್ಯಾಬಿನೆಟ್ ಒಪ್ಪಿಗೆ

“58 ವರ್ಷಗಳಿಂದ ತೆಲಂಗಾಣಕ್ಕಾಗಿ ಜಾತಿ ಮತ್ತು ಧರ್ಮ ಭೇದವಿಲ್ಲದೇ ಹೋರಾಡುತ್ತಿದ್ದೇನೆ. ಹಿಂದಿನ ರಾಜ್ಯದಲ್ಲಿ ಬುಡಕಟ್ಟು ಜನಸಂಖ್ಯೆಯು ಶೇಕಡಾ 6 ರಷ್ಟಿತ್ತು, ಬುಡಕಟ್ಟು ಸಮುದಾಯಕ್ಕೆ ಕೇವಲ ಶೇ. 5ರಷ್ಟು ಮೀಸಲಾತಿ ಇತ್ತು. ಆದರೆ, ತೆಲಂಗಾಣದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಅವರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ” ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್