ತೆಲಂಗಾಣ | ಮದುವೆ ಪ್ರಸ್ತಾಪ ತಿರಸ್ಕಾರ; ಯುವತಿಯನ್ನು ಕೊಲೆಗೈದು ಹೂತುಹಾಕಿದ ಆರೋಪಿ

Death
  • ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿ ಹೂತು ಹಾಕಿದ ಆರೋಪಿ
  • ಒಂದು ತಿಂಗಳ ನಂತರ ಬೆಳಕಿಗೆ ಬಂದ ಕೊಲೆ ಪ್ರಕರಣ

ಮದುವೆ ಪ್ರಸ್ತಾಪ ತಿರಸ್ಕರಿಸಿದ 19 ವರ್ಷದ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಹೂತು ಹಾಕಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಮನಜಿಪೇಟ್‌ ಗ್ರಾಮದಲ್ಲಿ, ಆಗಸ್ಟ್‌ 5ರಂದು ಈ ಘಟನೆ ನಡೆದಿದ್ದು, ಆರೋಪಿ ಬತಿನಿ ಶ್ರೀಶೈಲನನ್ನು ಬಂಧಿಸಿದ ನಂತರ ಕಳೆದ ಗುರುವಾರ (ಸೆಪ್ಟೆಂಬರ್‌ 8) ಈ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯು 2017ರಿಂದ ಹೈದರಾಬಾದ್‌ನ ಕಾಟೇದನ್ ಪ್ರದೇಶದ ನಿವಾಸಿಯಾಗಿದ್ದ ಯುವತಿಯನ್ನು ಹಿಂಬಾಲಿಸುತ್ತಿದ್ದ. ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ. ಯುವತಿ ಆತನ ಪ್ರಸ್ತಾಪವನ್ನು ತಿರಸ್ಕರಿಸುತ್ತಲೇ ಬಂದಿದ್ದಳು. ಆ ವ್ಯಕ್ತಿಯು ಹಿಂಬಾಲಿಸುತ್ತಿದ್ದರ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಳು. ಆಕೆಯ ಪಾಲಕರು ಆರೋಪಿಗೆ ಕೆಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ, ಆರೋಪಿಯು ಹಿಂಬಾಲಿಸುವುದನ್ನು ಮುಂದುವರೆಸಿದ್ದʼʼ ಎಂದು ಪೊಲೀಸ್ ಉಪನಿರೀಕ್ಷಕ (ಎಸ್‌ಐ) ವೆಂಕಟೇಶ್ವರ ಗೌಡ ತಿಳಿಸಿರುವುದಾಗಿ ವರದಿಯಾಗಿದೆ.

ಆಗಸ್ಟ್ 5ರಂದು ಆರೋಪಿ ಶ್ರೀಶೈಲಂ ಸಂತ್ರಸ್ತೆಗೆ ಕರೆ ಮಾಡಿ ತನ್ನ ಗ್ರಾಮಕ್ಕೆ ಒಮ್ಮೆ ಭೇಟಿ ನೀಡುವಂತೆ ಕೇಳಿದ್ದಾನೆ. ಆತನನ್ನು ನಂಬಿದ ಆಕೆ ಬಸ್‌ನಲ್ಲಿ ಪ್ರಯಾಣಿಸಿದ್ದಾಳೆ. ತನ್ನ ಗ್ರಾಮದ ಹತ್ತಿರದ ಊರಿನಿಂದ ಬೈಕ್‌ನಲ್ಲಿ ತನ್ನ ಗ್ರಾಮವಾದ ಮನಾಜಿಪೇಟೆಗೆ ಕರೆದುಕೊಂಡು ಹೋಗಿದ್ದಾನೆ. ಗ್ರಾಮವನ್ನು ತಲುಪಿದ ನಂತರ, ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಆದರೆ, ಆತನ ಪ್ರಸ್ತಾಪವನ್ನು ಯುವತಿ ನಿರಾಕರಿಸಿದ್ದಾಳೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ ಹಾಗೂ ಕೋಪದಲ್ಲಿ ಶ್ರೀಶೈಲಂ ಯುವತಿ ಧರಿಸಿದ್ದ ದುಪ್ಪಟ್ಟಾ ಬಳಸಿ ಆಕೆಯ ಕತ್ತು ಹಿಸುಕಿ ಸಾಯಿಸಿದ್ದಾನೆʼʼ ಎಂದು ಎಸ್‌ಐ ಹೇಳಿದರು.

ಈ ಸುದ್ದಿ ಓದಿದ್ದೀರಾ?: ಉತ್ತರ ಪ್ರದೇಶ | ಲಖನೌ ಅಗ್ನಿ ಅವಘಡ; 15 ಅಧಿಕಾರಿಗಳ ಅಮಾನತುಗೊಳಿಸಿದ ಯೋಗಿ ಆದಿತ್ಯನಾಥ್

ಬಳಿಕ, ತನ್ನ ಸ್ನೇಹಿತನ ಸಹಾಯದೊಂದಿಗೆ ಆಕೆಯ ಮೃತದೇಹವನ್ನು ಹತ್ತಿರವೇ ಇದ್ದ ನೀರಿನ ಕಾಲುವೆ ಬಳಿಯ ಜನ ಸಂಚಾರವಿಲ್ಲದ ಸ್ಥಳಕ್ಕೆ ಕೊಂಡೊಯ್ದು ಹೂತುಹಾಕಿದ್ದಾನೆ. ಸಂತ್ರಸ್ತೆಯ ಪೋಷಕರು ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಶ್ರೀಶೈಲಂನನ್ನು ವಿಚಾರಣೆಗಾಗಿ ಒಂದೆರಡು ದಿನಗಳ ಪೊಲೀಸ್‌ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆರಂಭದಲ್ಲಿ ಆರೋಪಿಯು ಯಾವ ಮಾಹಿತಿಯನ್ನೂ ತಿಳಿಸಲಿಲ್ಲ. ನಂತರ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆತ ನೀಡಿದ ಮಾಹಿತಿಯ ಆಧಾರದ ಮೇಲೆ ನಾವು ಅವರ ಗ್ರಾಮದ ಬಳಿ ಶವವನ್ನು ವಶಪಡಿಸಿಕೊಂಡಿದ್ದೇವೆ" ಎಂದು ಎಸ್‌ಐ ಹೇಳಿದರು.

ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ವಿವರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್