ಗಂಟೆಗೆ 36,252 ಕಿಮೀ ವೇಗದಲ್ಲಿ ಭೂಮಿಯತ್ತ ಬರುತ್ತಿದೆ ಕ್ಷುದ್ರಗ್ರಹ 2022 ಎಸ್‌ಡಬ್ಯೂ1

  • ಭೂಮಿಯತ್ತ ಬರುತ್ತಿದೆ ʻಆಸ್ಟರಾಯ್ಡ್‌ 2022 ಎಸ್‌ಡಬ್ಯೂ1ʼ ಹೆಸರಿನ ಕ್ಷುದ್ರಗ್ರಹ
  • ಕ್ಷುದ್ರಗ್ರಹದ ಹಾವಳಿ ತಪ್ಪಿಸಲು ʻಡಾರ್ಟ್‌ʼ ಮಿಷನ್‌ಗೆ ಸಜ್ಜಾಗಿದೆ ನಾಸಾ

ಭೂಮಿಯತ್ತ ಅಪಾಯಕಾರಿಯಾಗಿ ಸಾಗಿ ಬರುತ್ತಿರುವ ʻಆಸ್ಟರಾಯ್ಡ್‌ 2022 ಎಸ್‌ಡಬ್ಯೂ1ʼ ಹೆಸರಿನ ಕ್ಷುದ್ರಗ್ರಹದ ಬಗ್ಗೆ ಮಂಗಳವಾರ (ಸೆಪ್ಟೆಂಬರ್ 20) ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಎಚ್ಚರಿಸಿದೆ.

ಈಗಾಗಲೇ ಗಂಟೆಗೆ 36,252 ಕಿಮೀ ವೇಗದಲ್ಲಿ ಪ್ರಯಾಣಿಸುತ್ತಿರುವ ಕ್ಷುದ್ರಗ್ರಹವು ಭೂಮಿಗೆ ಕೇವಲ 6,79,000 ಕಿಮೀ ದೂರದಲ್ಲಿದೆ ಎಂದು ನಾಸಾ ಹೇಳಿದೆ. ಈ ತಿಂಗಳು ನಾವು ಎದುರಿಸುತ್ತಿರುವ ಕ್ಷುದ್ರಗ್ರಹಗಳಲ್ಲಿ ಅತ್ಯಂತ ಸಮೀಪಕ್ಕೆ ಬಂದಿರುವ ಕ್ಷುದ್ರಗ್ರಹ ಇದಾಗಿದೆ.

ಈ ಅಪಾಯಕಾರಿ ಆಸ್ಟರಾಯ್ಡ್‌ 2022 ಎಸ್‌ಡಬ್ಲೂ1 ಭೂಮಿಯತ್ತ ಸಾಗುತ್ತಿರುವುದನ್ನು ಸೆಪ್ಟೆಂಬರ್ 18ರಂದು ಕಂಡುಹಿಡಿಯಲಾಯಿತು. ಸೂರ್ಯನ ಸುತ್ತ ಒಂದು ಕಕ್ಷೆಯನ್ನು ಪೂರ್ಣಗೊಳಿಸಲು ಸುಮಾರು 1013 ದಿನಗಳನ್ನು ತೆಗೆದುಕೊಳ್ಳುವ, ಗುರು ಗ್ರಹದ ವ್ಯಾಪ್ತಿಯಲ್ಲಿ ಇರುವ ಮುಖ್ಯ ಕ್ಷುದ್ರಗ್ರಹಗಳ ಪಟ್ಟಿಯಲ್ಲಿರುವ ಅಪೊಲೊ ಗುಂಪಿನ ಕ್ಷುದ್ರಗ್ರಹಗಳಿಗೆ ಸೇರಿದೆ ಆಸ್ಟರಾಯ್ಡ್‌ 2022 ಎಸ್‌ಡಬ್ಲೂ1.

ಈ ಸುದ್ದಿ ಓದಿದ್ದೀರಾ?: ಈ ಜಗತ್ತು | ದಶಕದ ಹಿಂದೆಯೇ ಸಿದ್ಧವಾಗಿದ್ದ ಎಲಿಜಬೆತ್‌ ಶವಪೆಟ್ಟಿಗೆ

ಗ್ರಹಗಳ ರಕ್ಷಣಾ ವ್ಯವಸ್ಥೆ ಪರೀಕ್ಷೆಗೆ ನಾಸಾದ ಹೊಸ ಯೋಜನೆ

ಮುಂಬರುವ ದಿನಗಳಲ್ಲಿ ಭೂಮಿಗೆ ಅಪಾಯವನ್ನುಂಟು ಮಾಡುವ ಕ್ಷುದ್ರಗ್ರಹದ ಪಥ ಬದಲಿಸುವ ಹೊಸ ಯೋಜನೆಗೆ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಮುಂದಾಗಿದೆ. ಈ ನಿಟ್ಟಿನಲ್ಲಿ, ಸೆಪ್ಟೆಂಬರ್‌ 26ರಂದು ನಾಸಾವು ʻಡಾರ್ಟ್‌ʼ (ಡಬಲ್‌ ಆಸ್ಟರಾಯ್ಡ್‌ ರೀಡೈರೆಕ್ಷನ್‌ ಟೆಸ್ಟ್‌) ಬಾಹ್ಯಾಕಾಶ ನೌಕೆಯನ್ನು ಪರೀಕ್ಷಾರ್ಥವಾಗಿ ಉಡಾಯಿಸಲಿದೆ. ಆದರೆ, ಈ ಪರೀಕ್ಷೆ ನಡೆಯುವ ಮೊದಲೇ, ಕ್ಷುದ್ರಗ್ರಹವೊಂದು ಇಂದು ಭೂಮಿಯತ್ತ ಸಾಗುತ್ತಿರುವ ಬಗ್ಗೆ ನಾಸಾ ಎಚ್ಚರಿಸಿದೆ.

ಈ ಪರೀಕ್ಷಾರ್ಥ ʻಡಾರ್ಟ್‌ʼ ನೌಕೆಯು ʻಡಿಡಿಮೋಸ್‌ʼ ಕ್ಷುದ್ರಗ್ರಹವನ್ನು ಸುತ್ತುತ್ತಿರುವ ʻಡಿಮಾರ್ಫಾಸ್‌ʼ ಕ್ಷುದ್ರಗ್ರಹವನ್ನು ಸೆಪ್ಟೆಂಬರ್‌ 27ರಂದು ಅಪ್ಪಳಿಸಲಿದೆ. ಕ್ಷುದ್ರಗ್ರಹಗಳನ್ನು ಬೇರೆಡೆಗೆ ತಿರುಗಿಸಲು ಬಾಹ್ಯಾಕಾಶ ನೌಕೆಯಂತಹ ಬೃಹತ್ ವಸ್ತುವನ್ನು ಬಳಸಿ ಕ್ಷುದ್ರಗ್ರಹದ ಪ್ರಭಾವವನ್ನು ತಪ್ಪಿಸುವ ಈ ವಿಧಾನವನ್ನು ʻಚಲನಾ ಪ್ರಭಾವ ವಿಧಾನʼ ಎಂದು ಕರೆಯಲಾಗುತ್ತದೆ.

ಸುಮಾರು 780 ಮೀಟರ್ ಅಗಲವಿರುವ ʻಡಿಡಿಮೋಸ್ʼ ಕ್ಷುದ್ರಗ್ರಹವನ್ನು ಸುತ್ತುವ 160 ಮೀಟರ್ ಅಗಲದ ʻಡಿಮಾರ್ಫಸ್‌ʼ ಕ್ಷುದ್ರಗ್ರಹಕ್ಕೆ ʻಡಾರ್ಟ್‌ʼ ನೌಕೆಯು ಅಪ್ಪಳಿಸಿದ ನಂತರ, ಅದು ʻಡಿಡಿಮೋಸ್ʼ  ಕ್ಷುದ್ರಗ್ರಹ ಪರಿಭ್ರಮಿಸುವ ವಿಧಾನವನ್ನು ಸ್ಪಲ್ಪ ಬದಲಾಯಿಸುವ ನಿರೀಕ್ಷೆಯಿದೆ. ನಾಸಾ ಈ ಪರೀಕ್ಷೆಗೆ ಈಗಾಗಲೇ ಸಜ್ಜಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್