ಸಂಸತ್ತಿನಲ್ಲಿ ಯಾವ ಪದ ಬಳಕೆಗೂ ಅಡ್ಡಿ ಇಲ್ಲ, ಸರ್ಕಾರ ಎಲ್ಲಾ ವಿಷಯಗಳ ಚರ್ಚೆಗೆ ಮುಕ್ತ ಎಂದ ಪ್ರಹ್ಲಾದ ಜೋಶಿ

Prahlad Joshi
  • ಎಲ್ಲಾ ವಿಷಯಗಳ ಕುರಿತ ಚರ್ಚೆಗೆ ಕೇಂದ್ರ ಸರ್ಕಾರ ಮುಕ್ತವಾಗಿದೆ
  • ಅಗ್ನಿಪಥ್ ಯೋಜನೆ ಕುರಿತು ಚರ್ಚೆ ನಡೆಸಲು ಸರ್ಕಾರ ಬದ್ಧವಾಗಿದೆ

ಪ್ರತಿಪಕ್ಷಗಳ ಭಾರಿ ಟೀಕೆಗೆ ಗುರಿಯಾಗಿದ್ದ ಲೋಕಸಭೆ ಹೊರಡಿಸಿದ ಅಸಂಸದೀಯ ಪದಗಳ ಪಟ್ಟಿಯ ಹೊಸ ಕೈಪಿಡಿಯ ಕುರಿತ ವಿವಾದವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ತಣ್ಣಗಾಗಿಸಲು ಯತ್ನಿಸಿದ್ದಾರೆ. 

ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಭಾನುವಾರ ಕರೆದ ಸರ್ವಪಕ್ಷಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಯಾವುದೇ ಪದಗಳ ಬಳಕೆಗೆ ನಿಷೇಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Eedina App

ಅಲ್ಲದೆ ಕೇಂದ್ರ ಸರ್ಕಾರವು ಎಲ್ಲಾ ವಿಷಯಗಳ ಕುರಿತ ಚರ್ಚೆಗೆ ಮುಕ್ತವಾಗಿದೆ ಎಂದೂ ಹೇಳಿದ್ದಾರೆ. “ಅಸಂಸದೀಯ ಪದಗಳನ್ನು ಪಟ್ಟಿ ಮಾಡುತ್ತಿರುವುದು ಇದು ಮೊದಲಲ್ಲ. ಇಂತಹ ಪದ್ಧತಿಯು 1954ರಿಂದಲೇ ಅಸ್ತಿತ್ವದಲ್ಲಿದೆ” ಎಂದು ಹೇಳಿದರು. 

ದೇಶದಾದ್ಯಂತ ಭಾರಿ ಪ್ರತಿಭಟನೆಗೆ ಗುರಿಯಾದ ಕೇಂದ್ರ ಸರ್ಕಾರದ ನೂತನ ಅಲ್ಪಾವಧಿ ಸೇನಾ ನೇಮಕಾತಿ ಯೋಜನೆ ಅಗ್ನಿಪಥದ ಕುರಿತು ಅಧಿವೇಶನದಲ್ಲಿ ಚರ್ಚಿಸಲು ಪ್ರತಿಪಕ್ಷಗಳು ಬೇಡಿಕೆ ಇಟ್ಟಿವೆ. 

AV Eye Hospital ad

ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಹ್ಲಾದ್‌ ಜೋಶಿ, “ಸಂಸತ್ತಿನ ನಿಯಮಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಸರ್ಕಾರ ಸಿದ್ಧವಿದೆ” ಎಂದು ಹೇಳಿದರು. 

ಈ ಸುದ್ದಿ ಓದಿದ್ದೀರಾ? ದುಬಾರಿ ದುನಿಯಾ | ʼಆತ್ಮನಿರ್ಭರ ಭಾರತʼದಲ್ಲೂ ಏರಿದ ಆಮದು, ಕುಗ್ಗಿದ ರಫ್ತು; ಇನ್ನಷ್ಟು ಸಂಕಷ್ಟದ ದಿನಗಳಿಗೆ ಆಹ್ವಾನ

ಕ್ಷುಲ್ಲಕ ವಿಚಾರಗಳಲ್ಲಿ ವಿವಾದಗಳನ್ನು ಸೃಷ್ಟಿಸಿ ಪ್ರತಿಪಕ್ಷಗಳು ಸಂಸತ್ತಿನ ಘನತೆಗೆ ಧಕ್ಕೆ ತರುತ್ತಿವೆ ಎಂದು ಪ್ರಹ್ಲಾದ್‌ ಜೋಶಿ ಆರೋಪಿಸಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸದಿರುವುದು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ. 

ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಜೋಶಿ ಅವರು, “ಇಂದಿನ ಸಭೆಯನ್ನು ಪ್ರಧಾನಿ ಮೋದಿ ಅವರು ಭಾಗವಹಿಸದೇ ಇರುವ ಬಗ್ಗೆ ಕಾಂಗ್ರೆಸ್‌ನ ಜೈ ರಾಮ್‌ ರಮೇಶ್‌ ಅವರು ಪ್ರಸ್ತಾಪಿಸಿದ್ದಾರೆ. 2014ರಿಂದ ಪ್ರಧಾನಿ ಮೋದಿ ಅವರು ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಮನಮೋಹನ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಎಷ್ಟು ಬಾರಿ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದಾರೆ?” ಎಂದು ಪ್ರಶ್ನಿಸಿದರು. 

ಶ್ರೀಲಂಕಾ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಜುಲೈ 19ರಂದು ಸರ್ವ ಪಕ್ಷಗಳ ಸಭೆ ಕರೆದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದೂ ಅವರು ಹೇಳಿದರು.  

ಮೋದಿ ಗೈರು- ಕಾಂಗ್ರೆಸ್‌ ಆಕ್ಷೇಪ

ಸರ್ವಪಕ್ಷಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೈರಾಗಿರುವುದಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

“ಮುಂದಿನ ಸಂಸತ್ತಿನ ಅಧಿವೇಶನದ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಆರಂಭವಾಗಿದೆ. ಆದರೆ ಪ್ರಧಾನಿ ಮೋದಿ ಗೈರಾಗಿದ್ದಾರೆ. ಇದು ಅಸಂಸದೀಯ ನಡೆ ಅಲ್ಲವೇ?” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈ ರಾಮ್‌ ರಮೇಶ್‌ ಟ್ವೀಟ್‌ನಲ್ಲಿ ಕುಟುಕಿದ್ದಾರೆ. 

ಯಾರೆಲ್ಲ ಭಾಗವಹಿಸಿದ್ದರು?

ಸಚಿವ ರಾಜನಾಥ್‌ ಸಿಂಗ್, ರಾಜ್ಯಸಭೆಯ ಬಿಜೆಪಿ ನಾಯಕ ಪೀಯೂಷ್‌ ಗೋಯಲ್‌ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ ಹಲವು ಸಚಿವರು ಸರ್ಕಾರವನ್ನು ಪ್ರತಿನಿಧಿಸಿದ್ದರು. 

ಕಾಂಗ್ರೆಸ್ ಪರವಾಗಿ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಅಧೀರ್‌ ರಂಜನ್‌ ಚೌಧರಿ ಮತ್ತು ಜೈರಾಮ್‌ ರಮೇಶ್‌, ಡಿಎಂಕೆಯ ಟಿ ಆರ್‌ ಬಾಲು ಮತ್ತು ತಿರುಚಿ ಶಿವ, ಟಿಎಂಸಿಯ ಸುದೀಪ್‌ ಬಂಡೋಪಾಧ್ಯಾಯ ಮತ್ತು ಎನ್‌ಸಿಪಿಯ ಶರದ್‌ ಪವಾರ್‌ ಸೇರಿದಂತೆ ಬಹುತೇಕ ಎಲ್ಲಾ ಪಕ್ಷಗಳ ನಾಯಕರು ಇದ್ದರು. 

ಬಿಜೆಡಿಯ ಪಿನಾಕಿ ಮಿಶ್ರಾ, ವೈಎಸ್‌ಆರ್‌ಸಿಪಿಯ ವಿಜಯಸಾಯಿ ರೆಡ್ಡಿ ಮತ್ತು ಮಿಥುನ್‌ ರೆಡ್ಡಿ, ಟಿಆರ್‌ಎಸ್‌ನ ಕೇಶವ ರಾವ್‌ ಮತ್ತು ನಾಮ ನಾಗೇಶ್ವರ ರಾವ್, ಆರ್‌ಜೆಡಿಯ ಎಡಿ ಸಿಂಗ್ ಮತ್ತು ಶಿವಸೇನೆಯ ಸಂಜಯ್‌ ರಾವುತ್‌ ಇದ್ದರು. 

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18ರಂದು ಆರಂಭವಾಗಲಿದ್ದು ಆಗಸ್ಟ್‌ 12ರಂದು ಮುಕ್ತಾಯವಾಗಲಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app