ಶಾಸಕ ಅಮಾನತುಲ್ಲಾ ಖಾನ್‌ ಆಪ್ತ ಸಹಾಯಕನ ಬಂಧನ:‌ ಕೇಂದ್ರದ ವಿರುದ್ಧ ಕಿಡಿಕಾರಿದ ಕೇಜ್ರಿವಾಲ್

amantullahkhan
  • ಗುಜರಾತ್‌ನಲ್ಲಿ ಬಿಜೆಪಿಗರು ಹೆಚ್ಚು ತೊಂದರೆ ಅನುಭವಿಸುತ್ತಿರುವಂತೆ ಕಾಣುತ್ತದೆ
  • ಎಎಪಿಯ ಇನ್ನೂ ಹಲವು ಶಾಸಕರ ಬಂಧನವಾಗುತ್ತದೆ ಎಂದ ಕೇಜ್ರಿವಾಲ್‌

ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ಅವರ ಆಪ್ತ ಹಮೀದ್ ಅಲಿ ಅವರನ್ನು ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಜಾಮಿಯಾ ನಗರದ ನಿವಾಸಿ ಅಲಿ ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ದೆಹಲಿ ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. 

ದೆಹಲಿ ವಕ್ಫ್ ಮಂಡಳಿಯಲ್ಲಿ ಅಕ್ರಮ ನೇಮಕಾತಿ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಶುಕ್ರವಾರ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿ, ಮಂಡಳಿಯ ಅಧ್ಯಕ್ಷರೂ ಆಗಿರುವ ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಿತ್ತು. ದಾಳಿ ನಡೆಸಿದ ಸ್ಥಳಗಳಲ್ಲಿ ಅಲಿ ಅವರಿಗೆ ಸೇರಿದ ಸ್ಥಳಗಳೂ ಇದ್ದವು. ಈ ವೇಳೆ ಲೈಸೆನ್ಸ್‌ ರಹಿತವಾದ ಪಿಸ್ತೂಲು, ₹12 ಲಕ್ಷ ನಗದು ಹಾಗೂ ಕೆಲವು ಜೀವಂತ ಗುಂಡುಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಸರ್ ಇಮಾಮ್ ಸಿದ್ಧಿಕಿ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆತನ ಮನೆಯಲ್ಲಿ ನಾಡಪಿಸ್ತೂಲು, ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧನ ಭೀತಿಯಲ್ಲಿದ್ದ ಕೌಸರ್ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ವಕ್ಫ್ ಮಂಡಳಿಯಲ್ಲಿ ಹಣಕಾಸು ದುರುಪಯೋಗ ಮತ್ತು ಇತರ ಅಕ್ರಮಗಳ ಆರೋಪದ ಪ್ರಕರಣದಲ್ಲಿ ಎಸಿಬಿಯು ಖಾನ್ ಅವರಿಗೆ ಈ ಹಿಂದೆ ಸಮನ್ಸ್ ನೀಡಿತ್ತು. 

ಈ ಸುದ್ದಿ ಓದಿದ್ದೀರಾ?: ಎಎಪಿ ಜನಪ್ರಿಯತೆ ಸಹಿಸದೆ ಬಿಜೆಪಿ ಇಡಿ ದಾಳಿ ಯೋಜಿಸಿದೆ: ಅರವಿಂದ ಕೇಜ್ರಿವಾಲ್‌

ಅಮಾನತುಲ್ಲಾ ಖಾನ್ ಬಂಧನ ವಿಚಾರವಾಗಿ ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌, "ಮೊದಲು ಸತ್ಯೇಂದ್ರ ಜೈನ್‌ ಅವರನ್ನು ಬಂಧಿಸಿದರು. ನಂತರ ಮನೀಶ್‌ ಸಿಸೋಡಿಯಾ ನಿವಾಸದ ಮೇಲೂ ದಾಳಿ ನಡೆಯಿತು. ಏನೂ ಪತ್ತೆಯಾಗಲಿಲ್ಲ. ಈಗ ಅಮಾನತುಲ್ಲಾ ಖಾನ್‌ ಅವರ ಬಂಧನವಾಗಿದೆ. ಇನ್ನೂ ಅನೇಕ ಶಾಸಕರ ಬಂಧನವಾಗುತ್ತದೆ. ಗುಜರಾತ್‌ನಲ್ಲಿ ಅವರು ತುಂಬಾ ತೊಂದರೆ ಅನುಭವಿಸುತ್ತಿರುವಂತೆ ಕಾಣುತ್ತದೆ" ಎಂದು ಅವರು ಉಲ್ಲೇಖಿಸಿದ್ದಾರೆ. 

ಅಮಾನತುಲ್ಲಾ ಖಾನ್ ಬಂಧನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮನೀಶ್‌ ಸಿಸೋಡಿಯಾ, "ಮೊದಲು ಸತ್ಯೇಂದ್ರ ಜೈನ್‌ ಅವರನ್ನು ಬಂಧಿಸಿದರು. ಆದರೆ, ಅವರ ವಿರುದ್ಧದ ಆರೋಪವನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಲು ಯಾವುದೇ ಪುರಾವೆಗಳಿಲ್ಲ. ಅವರು ನನ್ನ ಮನೆ ಮೇಲೂ ದಾಳಿ ಮಾಡಿದರು, ಏನೂ ಸಿಗಲಿಲ್ಲ. ಕೈಲಾಶ್‌ ಗೆಹ್ಲೋಟ್‌ ವಿರುದ್ಧ ತನಿಖೆ ಆರಂಭಿಸಿದರು. ಈಗ ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಿದ್ದಾರೆ. ಆಪರೇಷನ್‌ ಕಮಲದ ಮೂಲಕ ಎಎಪಿಯನ್ನು ಒಡೆಯಲು ಯತ್ನಿಸಿದರು. ಅದೂ ಸಾಧ್ಯವಾಗಲಿಲ್ಲ. ಇದು ಅದರ ಮುಂದುವರಿದ ಭಾಗ" ಎಂದು ಕಿಡಿಕಾರಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180