ಪ್ರಚೋದನಕಾರಿ ಭಾಷಣ | 'ಅಧಿಕಾರದಲ್ಲಿರುವವರು ಜವಾಬ್ದಾರಿಯುತವಾಗಿ ವರ್ತಿಸಬೇಕು' ; ದೆಹಲಿ ಹೈಕೋರ್ಟ್

Delhi_High_Court
  • ಬಿಜೆಪಿಯ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮೇಲೆ ಎಫ್ಐಆರ್ ದಾಖಲಿಸಲು ಬೃಂದಾ ಕಾರಟ್ ಮನವಿ
  • ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ವಿರುದ್ಧ ದೆಹಲಿ ವಿಧಾನಸಭಾ ಚುನಾವಣೆ ವೇಳೆ ದ್ವೇಷ ಭಾಷಣ

2020ರಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆ ವೇಳೆ ದ್ವೇಷಭಾಷಣ ಮಾಡಿದ ಬಿಜೆಪಿ ಸಂಸದರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಸಿಪಿಎಂ ನಾಯಕಿ ಬೃಂದಾ ಕಾರಟ್ ಮಾಡಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರು ಅರ್ಜಿ ವಜಾಗೊಳಿಸಿದ್ದಾರೆ. ಅಧೀನ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಲೋಪವಿಲ್ಲ ಎಂದ ಹೈಕೋರ್ಟ್ ‘ಆದೇಶ’ ರದ್ದುಪಡಿಸಲು ತಿರಸ್ಕರಿಸಿದೆ. ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಏಕೆ ಬೇಕೆನ್ನುವುದನ್ನು ಸಮರ್ಥಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಇದೇ ವೇಳೆ ಹೇಳಿದೆ.

ಆದರೆ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ದ್ವೇಷಭಾಷಣದ ಕುರಿತು ವಿಶೇಷವಾಗಿ ರಾಜಕೀಯ ನಾಯಕರ ಭಾಷಣದ ಬಗ್ಗೆ ತೀವ್ರ ಟೀಕೆ ಕಳವಳ ವ್ಯಕ್ತಪಡಿಸಿದರು. 

"ಚುನಾಯಿತ ಪ್ರತಿನಿಧಿಗಳು, ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಧರ್ಮ, ಜಾತಿ, ಪ್ರದೇಶ ಅಥವಾ ಜನಾಂಗದ ಮೇಲೆ ದ್ವೇಷದ ಭಾಷಣ ಮಾಡುವುದು ಸಹೋದರತ್ವದ ಪರಿಕಲ್ಪನೆಗೆ ವಿರುದ್ಧವಾಗಿದೆ" ಎಂದು ಹೇಳಿದರು.

ಇಂಥವರು "ಸಾಂವಿಧಾನಿಕ ನೀತಿಗಳನ್ನು ನೆಲಸಮ (ಬುಲ್ಡೋಜ್) ಮಾಡುತ್ತಾರೆ" ಮತ್ತು ಸಂವಿಧಾನದಡಿ ನೀಡಲಾದ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಾರೆ ಎಂದು ಅವರು ಹೇಳಿದರು.

ಇದು ಸಂವಿಧಾನದಡಿಯ ಮೂಲಭೂತ ಕರ್ತವ್ಯಗಳಿಗೆ ಮಾಡಿದ ಘೋರ ಅವಮಾನವಾಗಿದೆ, ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ನ್ಯಾಯಾಧೀಶರು ಹೇಳಿದರು.

ದ್ವೇಷದ ಭಾಷಣವನ್ನು "ದಾಳಿಗಳ ಆರಂಭಿಕ ಹಂತ" ಎಂದು ಕರೆದ ನ್ಯಾಯಾಲಯ "ಉದ್ದೇಶಿತ ಸಮುದಾಯದ ವಿರುದ್ಧ (ತಾರತಮ್ಯ ಮಾಡುವ ಮೂಲಕ ಹೊರಗಿಡುವುದು, ಗಡಿಪಾರುಮಾಡುವುದು ಮತ್ತು ನರಮೇಧ ನಡೆಸುವಂಥ ಕೃತ್ಯಗಳು) ನಾಯಕರು ಭಾಷಣ  ಮಾಡುವುದು, ತೊಡಗುವುದು ಸೂಕ್ತವಲ್ಲ" ಎಂದು ಹೇಳಿದೆ. 

"ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ಚುನಾಯಿತ ನಾಯಕರು ತಮ್ಮ ಕ್ಷೇತ್ರದ ಮತದಾರರು, ತಾವಿರುವ ಸಮಾಜ, ರಾಷ್ಟ್ರ, ಅಂತಿಮವಾಗಿ ಸಂವಿಧಾನಕ್ಕೆ ಬದ್ಧರಾಗಿರಬೇಕಾದ ಗುರುತರ ಜವಾಬ್ದಾರಿಯನ್ನು ಹೊತ್ತಿದ್ದಾರೆ" ಎಂದು ನ್ಯಾಯಾಲಯ ಹೇಳಿದೆ.

ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರ ನಿರ್ಗಮನದ ಉದಾಹರಣೆಯನ್ನಾಗಿ ಬಳಸಿದ ನ್ಯಾಯಾಲಯ, ದ್ವೇಷಭಾಷಣ ನಿರ್ದಿಷ್ಟವಾಗಿ ಯಾವುದೇ ಧರ್ಮ ಅಥವಾ ಸಮುದಾಯಕ್ಕೆಷ್ಟೇ ಸೀಮಿತವಾಗಿಲ್ಲ. ಕಾರ್ಯಾಂಗ ಮತ್ತು ನಾಗರಿಕ ಸಮಾಜ "ದ್ವೇಷದ ಭಾಷಣದ ಬೆದರಿಕೆ" ತಡೆಯುವ ನಿಟ್ಟಿನಲ್ಲಿ ಸಾಗಬೇಕೆಂದು ನ್ಯಾಯಾಧೀಶರು ಹೇಳಿದರು.

"ಎಲ್ಲ ಹಂತಗಳಲ್ಲಿ "ದ್ವೇಷ ಭಾಷಣ" ವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಾದ ಅವಶ್ಯಕತೆ ಇದೆ ಮತ್ತು ಎಲ್ಲ ಕಾನೂನು ಜಾರಿ ಸಂಸ್ಥೆಗಳು ಅಸ್ತಿತ್ವದಲ್ಲಿರುವ ಕಾನೂನನ್ನು ಶೇಷ ಪತ್ರವನ್ನಾಗಿ (ಡೆಡ್ ಲೆಟರ್) ಮಾಡದಂತೆ ನೋಡಿಕೊಳ್ಳಬೇಕು" ಎಂದು ನ್ಯಾಯಾಲಯ ತಾಕೀತು ಮಾಡಿತು. 

ಸಿಎಎ ಪ್ರತಿಭಟನೆ ಕುರಿತು ದೆಹಲಿ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯ ಇಬ್ಬರು ನಾಯಕರು ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಬೇಕು ಎಂಬ ಮನವಿಯನ್ನು ಈ ಹಿಂದೆಯೂ ದೆಹಲಿ ನ್ಯಾಯಾಲಯ ತಿರಸ್ಕರಿಸಿತ್ತು.

ಈ ಸುದ್ದಿ ಓದಿದ್ದೀರಾ:? ಒಡಿಶಾದಲ್ಲಿ ತಿಂಗಳೊಳಗೆ ಎರಡು ಬಾಲ್ಯವಿವಾಹ ರದ್ದು; ಬಾಲ್ಯವಿವಾಹ ಉಚ್ಛಾಟನೆಗೆ ಪ್ರತಿಜ್ಞೆ

ದೂರುದಾರರಾದ ಸಿಪಿಐ(ಎಂ) ನಾಯಕರಾದ ಬೃಂದಾ ಕಾರಟ್ ಮತ್ತು ಕೆ ಎಂ ತಿವಾರಿ ಅವರು ಮನವಿ ಸಲ್ಲಿಸಿದ್ದರು. ಬಿಜೆಪಿ ನಾಯಕರನ್ನು ವಿಚಾರಣೆಗೆ ಒಳಪಡಿಸಲು ಸೂಕ್ತ ಪ್ರಾಧಿಕಾರದ ಪೂರ್ವಾನುಮತಿ ಪಡೆದಿಲ್ಲವೆಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜಾ ಅವರು ತಮ್ಮ ಆದೇಶದಲ್ಲಿ ಈ ಹಿಂದೆ ತಿಳಿಸಿದ್ದರು. ಈ ಆದೇಶವನ್ನು ವಜಾಗೊಳಿಸುವಂತೆ ಕೋರಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.

2020ರ ಜನವರಿ 27ರಂದು ದೆಹಲಿಯ ರಿಥಾಲಾದಲ್ಲಿ ನಡೆದ ರ‍್ಯಾಲಿಯಲ್ಲಿ, ಸಂಸದ ಅನುರಾಗ್ ಠಾಕೂರ್ ಅವರು ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ವಾಗ್ದಾಳಿ ನಡೆಸಿದ್ದರು. "ದೇಶದ್ರೋಹಿಗಳನ್ನು ಶೂಟ್ ಮಾಡಿ" (‘ದೇಶ್ ಕೆ ಗದ್ದಾರೋಂಕೋ; ಗೋಲಿ ಮಾರೋ ಸಾಲೋಂಕೊʼ) ಘೋಷಣೆ ಕೂಗುವಂತೆ ಜನರನ್ನು ಪ್ರಚೋದಿಸಲು ಪ್ರಯತ್ನಿಸಿದ್ದರು. "ಇದರ ಪರಿಣಾಮವಾಗಿ ದೆಹಲಿಯ ಎರಡು ವಿಭಿನ್ನ ಪ್ರತಿಭಟನಾ ಸ್ಥಳಗಳಲ್ಲಿ ಮೂರು ಗುಂಡಿನ ಘಟನೆಗಳು ನಡೆದವು" ಎಂದು ಹೇಳಿದ್ದಾರೆ. 2020ರ ಜನವರಿ 28ರಂದು ಶಾಹೀನ್ ಬಾಗ್‌ನಲ್ಲಿ ಪರ್ವೇಶ್ ವರ್ಮಾ ಸಿಎಎ ವಿರೋಧಿ ಪ್ರತಿಭಟನಾನಿರತರಿಗೆ ಬೆದರಿಕೆ ಹಾಕಿದ್ದರೆಂದು ಅರ್ಜಿದಾರರು ಆರೋಪಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್