ಸ್ವಾತಂತ್ರ್ಯ ನಡಿಗೆ| ಟಿಪ್ಪು ಫ್ಲೆಕ್ಸ್‌ ಕಿತ್ತು ಹಾಕಿದ ಘಟನೆ: ಕ್ರಮಕೈಗೊಳ್ಳಲು ಡಿ ಕೆ ಶಿವಕುಮಾರ್‌ ಆಗ್ರಹ

tippu sultan flex
  • ಬೆಂಗಳೂರಿನಲ್ಲಿ ಟಿಪ್ಪು ಫ್ಲೆಕ್ಸ್‌ ಕಿತ್ತು ಹಾಕಿದ ಘಟನೆಗೆ ಡಿಕೆಶಿ ಆಕ್ರೋಶ
  • ವೈರಲ್‌ ವೀಡಿಯೋದಲ್ಲಿ ಘಟನೆ ಕುರಿತು ಪುನೀತ್‌ ಕೆರೆಹಳ್ಳಿ ಸಮರ್ಥನೆ

ನಗರದ ಕೆ.ಆರ್. ಸರ್ಕಲ್ ಹಾಗೂ ಹಡ್ಸನ್ ಸರ್ಕಲ್‌ನಲ್ಲಿ‌ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ʼಸ್ವಾತಂತ್ರ್ಯ ನಡಿಗೆʼ ಕಾರ್ಯಕ್ರಮದ ಅಂಗವಾಗಿ ಅಳವಡಿಸಿದ್ದ ಟಿಪ್ಪು ಸುಲ್ತಾನ್‌ ಭಾವಚಿತ್ರದ ಫ್ಲೆಕ್ಸ್‌ ಮತ್ತು ಕಟೌಟ್‌ಗಳನ್ನು ಕೆಲವರು ಹರಿದು ಹಾಕಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. 

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕಟೌಟ್‌ ಮತ್ತು ಫ್ಲೆಕ್ಸ್‌ಗಳನ್ನು ಅಳವಡಿಸಿ ಸಿಂಗರಿಸಲಾಗಿತ್ತು. ಮಹಾತ್ಮಾ ಗಾಂಧಿ, ನೆಹರು, ಝಾನ್ಸಿ ರಾಣಿ, ಭಗತ್‌ ಸಿಂಗ್‌, ಸುಭಾಶ್ಚಂದ್ರ ಬೋಸ್‌ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿದ ಹಲವರು ಚಿತ್ರಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗಿತ್ತು. ಅದೇ ರೀತಿ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಮಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಚಿತ್ರವನ್ನೂ ಅಳವಡಿಸಲಾಗಿತ್ತು.

ಆದರೆ, ಎಲ್ಲೆಡೆ ಪೊಲೀಸ್‌ ಬಿಗಿ ಬಂದೋಬಸ್ತ್‌ ನಡುವೆಯೇ ಟಿಪ್ಪು ಭಾವಚಿತ್ರ ಇದ್ದ ಪ್ಲೆಕ್ಸ್ ಶನಿವಾರ ರಾತ್ರಿ ಕಿತ್ತುಹಾಕಿ ವಿರೂಪಗೊಳಿಲಾಗಿದೆ. ಈ ಕೃತ್ಯವನ್ನು ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರೇ ಎಸಗಿದ್ದು, ಈ ಕೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರ ತೆರವಿಗೆ ಕೆಲವು ಸಂಘಟನೆಯವರು ಆಕ್ಷೇಪವ್ಯಕ್ತಪಡಿಸಿದ ಘಟನೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಅಳವಡಿಸಿದ್ದ ಟಿಪ್ಪು ಭಾವಚಿತ್ರದ ಪ್ಲೆಕ್ಸ್‌ ಹರಿದು ಹಾಕಲಾಗಿದೆ ಎಂದು ಹೇಳಲಾಗಿದೆ. 

ಈ ಸುದ್ದಿ ಓದಿದ್ದೀರಾ?: ತ್ರಿವರ್ಣ ಧ್ವಜ ವಿರೋಧಿಸಿದ್ದ ಸಾವರ್ಕರ್ ಅವರನ್ನು ಆರ್‌ಎಸ್ಎಸ್‌ ಆರಾಧಿಸುತ್ತದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ವೈರಲ್ ವಿಡಿಯೋದಲ್ಲಿ ಪುನೀತ್ ಕೆರೆಹಳ್ಳಿ, "ಸ್ವಾತಂತ್ರ್ಯ ಹೋರಾಟಕ್ಕಾಗಿ ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿದ ವೀರ ಸಾವರ್ಕರ್ ಬ್ಯಾನರನ್ನು ಶಿವಮೊಗ್ಗದಲ್ಲಿ ಹರಿದು ಹಾಕಲಾಗಿದೆ. ಆ ಘಟನೆಗೆ ಪ್ರತೀಕಾರವಾಗಿ ಟಿಪ್ಪು ಬ್ಯಾನರ್ ಹರಿದು ಹಾಕಲಾಗಿದೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಹೈಕೋರ್ಟ್‌ ಹೇಳಿದೆ. ಹೀಗಾಗಿ ಟಿಪ್ಪು ಬದಲಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರ ಹಾಕಿ" ಎಂದು ಹೇಳಿರುವುದು ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಹಡ್ಸನ್ ಸರ್ಕಲ್ ಮಾತ್ರವಲ್ಲ‌, ಒಟ್ಟು ಎರಡು ಕಡೆಗಳಲ್ಲಿ ಬ್ಯಾನರ್ ಹರಿಯಲಾಗಿದೆ. ಪೊಲೀಸರ ಭದ್ರತೆ ನಡುವೆಯೂ ಈ ಕೃತ್ಯ ನಡೆದಿದೆ. ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಬೇರೆಯದ್ದಾಗಿರುತ್ತದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ" ಎಂದಿದ್ದಾರೆ.

"ನಾವೂ ದೇಶಕ್ಕಾಗಿ ಹೋರಾಡಿದವರ ಚರಿತ್ರೆ ಓದಿದ್ದೇವೆ. ಚರಿತ್ರೆ ನಮಗೂ ಗೊತ್ತಿದೆ. ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಅವರು ಕೂಡ ಬಂದು ಪಾಠ ಹೇಳಿದ್ದಾರೆ. ಆದರೆ ಇವತ್ತು ಟಿಪ್ಪು ಸುಲ್ತಾನ್ ಭಾವಚಿತ್ರ ಇರುವ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ನಾನು ಘಟನಾ ಸ್ಥಳಕ್ಕೆ ಹೋಗಿ ನೋಡಿದ್ದೇನೆ. ಪೊಲೀಸರ ಕಣ್ಣೆದುರೇ ಅವರು ಈ ಕೃತ್ಯ ಎಸಗಿದ್ದಾರೆ. ಟಿಪ್ಪು ಅರಮನೆಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಭಾರತೀಯ ಪುರಾತತ್ವ ಇಲಾಖೆಯೇ  ದೀಪಾಲಂಕಾರ ಮಾಡಿದೆ. ಕೇಂದ್ರ ಸರ್ಕಾರ ಕೂಡ ಟಿಪ್ಪು ಅವರನ್ನು ಗೌರವದಿಂದ ಕಾಣುತ್ತಿದೆ. ಇಷ್ಟಿದ್ದರೂ ಈ ರೀತಿ ಮಾಡುವ ಧೈರ್ಯ ಇದೆ ಅನ್ನೋದು ವಿಪರ್ಯಾಸ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್