
- ಔಷಧಿಗಳಿಂದ ಮಕ್ಕಳ ಸಾವಿನ ಬಗ್ಗೆ ಭಾರತದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಕ ಸಂಸ್ಥೆ ತನಿಖೆ
- ಹರಿಯಾಣ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಕಂಪನಿಯಲ್ಲಿ 4 ಔಷಧಿಗಳ ತಯಾರಿ
ಭಾರತೀಯ ಸಂಸ್ಥೆಯೊಂದು ತಯಾರಿಸಿದ ಕೆಮ್ಮು ಮತ್ತು ಶೀತದ ಸಿರಪ್ಗಳ ಸೇವನೆಯಿಂದ ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿನ ನಂತರ ಭಾರತದ ಔಷಧ ನಿಯಂತ್ರಕ ಸಂಸ್ಥೆಯು ಗುರುವಾರ (ಅ. 6) ತನಿಖೆಗೆ ಆದೇಶಿಸಿದೆ.
ಮೂತ್ರಪಿಂಡಕ್ಕೆ ತೀವ್ರವಾದ ಹಾನಿ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಕಾರಣವಾದ ಭಾರತದಲ್ಲಿ ಉತ್ಪಾದಿಸಲಾದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್ಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಬುಧವಾರ (ಅ. 5) ಎಚ್ಚರಿಕೆ ನೀಡಿತ್ತು.
ಕೆಮ್ಮು ಮತ್ತು ಶೀತಕ್ಕೆ ಬಳಸುವ ಈ ನಾಲ್ಕು ಸಿರಪ್ಗಳು ಭಾರತದ ಹರಿಯಾಣದ ಸೋನಿಪತ್ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಕಂಪನಿಯಲ್ಲಿ ತಯಾರಾಗಿವೆ. ಇವುಗಳು ಗುಣಮಟ್ಟ ಕಡಿಮೆ ಇದ್ದ ಕಾರಣ ಮಕ್ಕಳ ಸಾವಿಗೆ ಕಾರಣವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಜಿನೀವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಭಾರತದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಕ ಸಂಸ್ಥೆಗೆ (ಸಿಡಿಎಸ್ಸಿಒ) ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯು ಸಂಪೂರ್ಣ ಮಾಹಿತಿ ನೀಡಿಲ್ಲ. ಕೆಮ್ಮು ಸಿರಪ್ ಉತ್ಪನ್ನಗಳ ತಯಾರಿಕೆಯ ಬಗ್ಗೆ ಲಭ್ಯವಿರುವ ಮಾಹಿತಿ ಮೇರೆಗೆ ಔಷಧ ನಿಯಂತ್ರಕ ಸಂಸ್ಥೆಯು ಹರಿಯಾಣದ ಸೋನಿಪತ್ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಕಂಪನಿಯ ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಿರಪ್ನ ಮಾದರಿಗಳು ಮತ್ತು ಮಕ್ಕಳ ಸಾವುಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ವಿನಂತಿಸಲಾಗಿದೆ” ಎಂದು ಔಷಧ ನಿಯಂತ್ರಕ ಸಂಸ್ಥೆ ಹೇಳಿದೆ.
ಹರಿಯಾಣದ ರಾಜ್ಯ ಮಾದಕ ದ್ರವ್ಯ ನಿಯಂತ್ರಕ ಸಂಸ್ಥೆಯ ಸಹಯೋಗದೊಂದಿಗೆ ಈ ವಿಷಯದ ಬಗ್ಗೆ ಭಾರತದ ಔಷಧ ನಿಯಂತ್ರಕ ಸಂಸ್ಥೆಯು ವಿವರವಾದ ತನಿಖೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕೆಮ್ಮಿನ ಸಿರಪ್ಗಳನ್ನು ಸೋನಿಪತ್ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಕಂಪನಿ ಗ್ಯಾಂಬಿಯಾಗೆ ಮಾತ್ರವೇ ರಫ್ತು ಮಾಡಿದೆ ಎನ್ನಲಾಗಿದೆ. ಆದರೆ ಈ ಆರೋಪಗಳಿಗೆ ಕಂಪನಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೆಹಲಿಯ ಪಿತಾಂಪುರದಲ್ಲಿರುವ ಸಂಸ್ಥೆಯ ಆಡಳಿತ ಕಚೇರಿ ಶುಕ್ರವಾರ (ಅ. 7) ಬೆಳಗ್ಗೆ ಮುಚ್ಚಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.
ಕಲುಷಿತ ಕೆಮ್ಮಿನ ಔಷಧಿಗಳು ಸದ್ಯ ಗ್ಯಾಂಬಿಯಾದಲ್ಲಿ ಮಾತ್ರ ಪತ್ತೆಯಾಗಿವೆ. ಇತರೆ ದೇಶಗಳಿಗೂ ಅದೇ ಕಂಪನಿಯ ಉತ್ಪನ್ನಗಳು ವಿತರಿಸಲಾಗಿರುವುದರಿಂದ ಎಚ್ಚರವಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ? ಗ್ಯಾಂಬಿಯಾ | ಭಾರತದ ಕೆಮ್ಮಿನ ಸಿರಪ್ ಸೇವಿಸಿ 66 ಮಕ್ಕಳು ಸಾವು: ವಿಶ್ವಸಂಸ್ಥೆ ಎಚ್ಚರಿಕೆ
ಪ್ರೋಮೆಥಾಜಿನ್ ಓರಲ್ ಸಲ್ಯೂಷನ್, ಕೋಫೆಕ್ಸ್ಮಾಲಿನ್ ಮಕ್ಕಳ ಕೆಮ್ಮಿನ ಸಿರಪ್, ಮ್ಯಾಕೋಫ್ ಮಕ್ಕಳ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಔಷಧಿಗಳಾಗಿವೆ.
ನಾಲ್ಕೂ ಔಷಧಿ ಉತ್ಪನ್ನಗಳ ಮಾದರಿಗಳ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಅವುಗಳು ಅಧಿಕ ಪ್ರಮಾಣದ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಅನ್ನು ಒಳಗೊಂಡಿವೆ ಎಂಬುದು ಖಚಿತಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯಕೀಯ ಉತ್ಪನ್ನ ವಿಭಾಗ ಹೇಳಿದೆ.