ಎನ್‌ಸಿಎಎ ವರ್ಷದ ಮಹಿಳೆ ಪ್ರಶಸ್ತಿ | ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಈಜುಗಾತಿ ಲಿಯಾ ಥಾಮಸ್‌ ನಾಮ ನಿರ್ದೇಶನ

  • ಎನ್‌ಸಿಎಎ ವರ್ಷದ ಮಹಿಳೆ ಪ್ರಶಸ್ತಿಗೆ ಲಿಯಾ ಥಾಮಸ್‌ ನಾಮನಿರ್ದೇಶನ
  • ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಈಜುಗಾತಿ ಲಿಯಾ ಥಾಮಸ್‌

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಈಜುಗಾತಿ ಲಿಯಾ ಥಾಮಸ್‌ ಅವರನ್ನು ಎನ್‌ಸಿಎಎ ವರ್ಷದ ಮಹಿಳೆ- 2022ರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

ವಿಶ್ವವಿದ್ಯಾಲಯ ಮಟ್ಟದ ಈಜು ಮತ್ತು ಡೈವಿಂಗ್‌ ವಿಭಾಗದ ಡಿವಿಷನ್- I ಅಥ್ಲೀಟ್‌ ಆಗಿರುವವರನ್ನು ಈ ವರ್ಷ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.  ಎನ್‌ಸಿಎಎ ಪ್ರಶಸ್ತಿಯನ್ನು ಶೈಕ್ಷಣಿಕ ಸಾಧನೆ, ಅಥ್ಲೆಟಿಕ್ಸ್‌ ಶ್ರೇಷ್ಠತೆ ಹಾಗೂ ಸಮುದಾಯ ಸೇವೆ… ಮೂರರಲ್ಲಿಯೂ ಕಾರ್ಯನಿರತರಾಗಿರುವ ಮಹಿಳಾ ಕಾಲೇಜುಗಳ ಕ್ರೀಡಾಪಟುಗಳನ್ನು ಗೌರವಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಮಾರ್ಚ್‌ನಲ್ಲಿ ನಡೆದಿದ್ದ ಮಹಿಳೆಯರ 500 ಮೀಟರ್‌ ಫ್ರೀ ಸ್ಟೈಲ್‌ ಈಜುಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ್ದ ಥಾಮಸ್‌ ಅವರು ಎನ್‌ಸಿಎಎ ಡಿವಿಷನ್ –I ಕ್ರೀಡೆಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವರಾಗಿದ್ದಾರೆ.

ಥಾಮಸ್‌ ಅವರು ಈ ಹಿಂದೆ ವಿಶ್ವವಿದ್ಯಾಲಯದ ಪುರುಷರ ತಂಡದಿಂದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಲಿಂಗತ್ವ ಅಲ್ಪಸಂಖ್ಯಾತರು ಕ್ರೀಡೆಯಲ್ಲಿ ಭಾಗವಹಿಸುವ ಕುರಿತು ಅಮೆರಿಕದಾದ್ಯಂತ ಚರ್ಚೆಗಳು ನಡೆದು ಸರ್ಕಾರವು ಹೊಸ ಕಾನೂನನ್ನು ಜಾರಿಗೆ ತಂದಿತು. ಈ ಹೊಸ ಕಾನೂನು ಭಾಗವಾಗಿ ಪ್ರಸ್ತುತ ಲಿಂಗತ್ವ ಅಲ್ಪಸಂಖ್ಯಾತರಾದ ಥಾಮಸ್‌ ಅವರು ಮಹಿಳಾ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ಓಹಿಯೋದಲ್ಲಿ ನಡೆದ ಜಿಪ್ಪಿ ಇನ್ವಿಟೇಷನಲ್ 200 ಮತ್ತು 500 ಮೀಟರ್‌ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಬೆರಗುಗೊಳಿಸುವ ಪ್ರದರ್ಶನದೊಂದಿಗೆ ಸಾರ್ವಜನಿಕ ಗಮನ ಸೆಳೆದಿದ್ದ ಅವರು, ಫೆಬ್ರವರಿಯಲ್ಲಿ ನಡೆದಿದ್ದ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ 100, 200 ಹಾಗು 500 ಮೀಟರ್‌ ಫ್ರೀಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.

''ಕಾಲೇಜಿನ ಆರಂಭದ ದಿನಗಳಲ್ಲಿ ನಾನು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದೆ. 2019ರಲ್ಲಿ ಹಾರ್ಮೋನ್‌ ರಿಪ್ಲೇಸ್‌ಮೆಂಟ್‌ ಥೆರಪಿ ಆರಂಭಿಸಿದೆ. ನಂತರ 2020ರಲ್ಲಿ ಎನ್‌ಸಿಎಎ ನಿಯಮಗಳನುಸಾರ ಮಹಿಳಾ ತಂಡವನ್ನು ಸೇರಿದೆ'' ಎಂದು ಥಾಮಸ್‌ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ʻʻಮಹಿಳೆಯಾಗಿ ಸ್ಪರ್ಧಿಸಿದರೆ ನನ್ನ ವಿರುದ್ಧ ವಿಚಾರಣೆ ನಡೆಯಲಿದೆ ಎಂದು ತಿಳಿದಿದ್ದೆ. ಅದಕ್ಕಾಗಿ ನಾನು ಸಿದ್ಧಳಾಗಿದ್ದೆ. ಆದರೆ, ನಾನು ನಾನಾಗಿರಲು ಮತ್ತು ನಾನು ಇಷ್ಟಪಡುವ ಕ್ರೀಡೆಯನ್ನು ಉತ್ಸಾಹದಿಂದ ಭಾಗವಹಿಸಲು ನನಗೆ ಯಾರ ಅನುಮತಿಯೂ ಅಗತ್ಯವಿಲ್ಲʼʼ ಎಂದು ಅವರು ತಿಳಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್