ಬುಡಕಟ್ಟು ಭಾಷೆಯಲ್ಲಿ ಸಂವಿಧಾನ; ಅಳಿವಿಂಚಿನಲ್ಲಿರುವ ಭಾಷೆಯ ಉಳಿವಿನ ಕಥನ

  • ಸಂತಾಲಿ ಭಾಷೆಯಲ್ಲಿ ಭಾರತ ಸಂವಿಧಾನ ಪ್ರಕಟ
  • ಅಳಿವಿನಂಚಿನಲ್ಲಿರುವ ಭಾಷೆ ಉಳಿಸುವ ಪ್ರಯತ್ನ

ಭಾರತದಲ್ಲಿ ‘ಸಂವಿಧಾನ’ ಮತ್ತು ‘ಪ್ರಾದೇಶಿಕ ಭಾಷೆ’ಗಳ ಸ್ಥಿತಿ ಪ್ರಸಕ್ತ ಸಮಯದಲ್ಲಿ ಒಂದೇ ರೀತಿಯಿದೆ. ಎರಡನ್ನೂ ಮೂಲೆಗುಂಪು ಮಾಡಲಾಗುತ್ತಿದೆ ಅಥವಾ ಅದಕ್ಕಾಗಿ ಷಡ್ಯಂತ್ರ ನಡೆಯುತ್ತಿದೆ. ಇಂತಹ ಕ್ಲಿಷ್ಟ ಸಮಯದಲ್ಲಿ ಸಂವಿಧಾನ ಉಳಿಸುವ ಜತೆಗೆ ಸ್ಥಳೀಯ ಭಾಷೆಯ (ಜನಾಂಗೀಯ ಭಾಷೆ) ಮಹತ್ವ ತಿಳಿಸುವ ಕೆಲಸವೊಂದು ಪಶ್ಚಿಮ ಬಂಗಾಳದ ಬುಡಕಟ್ಟು ಸಮುದಾಯದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ‘ಭಾಷಾ ಅಧ್ಯಯನ ಮತ್ತು ಸಂಶೋಧನೆ ಸಂಸ್ಥೆ’ಯಲ್ಲಿ ಸಹಾಯಕ ಪ್ರಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಶ್ರೀಪತಿ ಟುಡು ಮಾತೃ ಭಾಷೆಯಾದ ‘ಸಂತಾಲಿ’ಯಲ್ಲಿ ಇಡೀ ಸಂವಿಧಾನವನ್ನು ಭಾಷಾಂತತರಿಸಿ ಮರೆಯಾಗುತ್ತಿರುವ ಭಾಷೆ ಉಳಿಸುವುದರ ಜತೆಗೆ ಜನಾಂಗಕ್ಕೆ ಮತ್ತು  ಮುಂದಿನ ಪೀಳಿಗೆಗೆ ಮಾತೃ ಭಾಷೆಯಲ್ಲಿ ಸಂವಿಧಾನ ಅರ್ಥಮಾಡಿಸುವ ಗುರಿ ಹೊಂದಿದ್ದಾರೆ.

Eedina App

ಪಶ್ಚಿಮ ಬಂಗಾಳದ ಮೂಲದ ‘ಸಂತಲ’ ಎನ್ನುವ ಬುಡಕಟ್ಟು ಜನಾಂಗದಲ್ಲಿ ಶ್ರೀಪತಿ ತುಡು ಜನಿಸಿದ್ದಾರೆ. ನೇಪಾಳ ಮತ್ತು ಬಾಂಗ್ಲಾದಲ್ಲಿಯೂ ಸಣ್ಣ ಪ್ರಮಾಣದಲ್ಲಿ ನೆಲೆಯೂರಿರುವ ಈ ಜನಾಂಗದ ಜನಸಂಖ್ಯೆ ಭಾರತದಲ್ಲಿ ತುಂಬಾ ಕಡಿಮೆ.

ಈ ಸುದ್ದಿ ಓದಿದ್ದೀರಾ? ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 4 | ಸಾಮಾಜಿಕ ಪರಿಷತ್ತಿಗೆ ಕೊನೆಯ ಮೊಳೆ ಹೊಡೆದ ಡಬ್ಲ್ಯೂ ಸಿ ಬ್ಯಾನರ್ಜಿ

AV Eye Hospital ad

ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಆಡಳಿತ ಭಾಷೆ ಇರುವುದರಿಂದ ಶಿಕ್ಷಣವನ್ನು ಬಂಗಾಳಿಯಲ್ಲಿಯೇ ಕಲಿಯಬೇಕಾದ ಅನಿವಾರ್ಯತೆಯಿದೆ. ಇದರಿಂದ ಎಷ್ಟೋ ಸ್ಥಳೀಯ ಭಾಷೆಗಳು ನೆಲಕಚ್ಚಿವೆ.

ಟುಡು ಅವರು ತಮ್ಮ ಶಿಕ್ಷಣವನ್ನು ಬಂಗಾಳಿಯಲ್ಲಿಯೇ ಮುಗಿಸಿದ್ದರು. ತಾಯಿ ಭಾಷೆ ಉಳಿಸುವ ಸಕಲ ಪ್ರಯತ್ನಗಳಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

“ಮನೆಯಲ್ಲಿ ಮಾತೃಭಾಷೆ ಸಂತಾಲಿ ಮಾತಾನಾಡುತ್ತಿದ್ದು, ಶಾಲೆಯಲ್ಲಿ ಬಂಗಾಳಿಯಲ್ಲಿ ಬರವಣಿಗೆ ಕಲಿಸುತ್ತಿರುವುದರಿಂದ ಮೊದಮೊದಲು ನನಗೆ (ಟುಡು) ಬಂಗಾಳಿಯಲ್ಲಿ ವಾಕ್ಯ ರಚನೆ ಮಾಡಲು ಕಷ್ಟವಾಗಿದೆ” ಎಂದು ತುಡು ಅವರು ಅಲ್ ಜಝೀರಾ ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಶಿಕ್ಷಣವನ್ನು ಬಂಗಾಳಿಯಲ್ಲಿ ಕಲಿಯುವುದು ಸಂತಲ ಬುಡಕಟ್ಟು ಜನರಿಗೆ ಕಬ್ಬಿಣದ ಕಡಲೆಯಾಗಿತ್ತು. ತುಡು ಅವರು ಸಂತಾಳಿ ಭಾಷೆಯ ಲಿಪಿ ಕಲಿತು ಅದರಲ್ಲಿ ಶಿಕ್ಷಣವನ್ನು ಸುಲಭವಾಗಿ ಅರ್ಥವಾಗುವಂತೆ ಮಾಡಿದರು. ಇದರಿಂದ ಸಂತಾಲಿ ಬುಡಕಟ್ಟು ಜನರಿಗೆ ಶಿಕ್ಷಣವು ಸರಳವಾಗತೊಡಗಿದೆ.

ಕೆಲ ಸಮಯಗಳ ಹಿಂದೆ ಪ್ರೌಢಶಾಲೆಯ ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿ ಟುಡು ಅವರ ಸ್ನೇಹಿತ ಒಂದು ಕಿರು ಪುಸ್ತಕವನ್ನು (ಪ್ಯಾಂಪ್ಲೇಟ್) ಶಾಲೆಗೆ ತಂದಿದ್ದು, ಅದರಲ್ಲಿ “ಓಲ್ ಚಿಕಿ” ಲಿಪಿ ಬರೆದಿದ್ದನ್ನು ಟುಡು ಗಮನಿಸಿದ್ದರು. ಒಲ್ ಚಿಕಿ ಎಂಬ ಪದವನ್ನು ಮೊದಲೇ ಕೇಳಿದ್ದರಾದರೂ, ಹೆಚ್ಚಿನ ಮಾಹಿತಿ ಟುಡು ಅವರಿಗೆ ಇರಲಿಲ್ಲ. ಒಲ್ ಚಿಕಿ ಎನ್ನುವುದು ಸಂತಾಲಿ ಭಾಷೆಯ ಲಿಪಿಯ ಹೆಸರಾಗಿದ್ದು, 2003ರಲ್ಲಿ ಭಾರತ ಸಂವಿಧಾನದ ಅಧಿಕೃತ ಭಾಷೆಯ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಮೊದಲ ಬಾರಿ ಮಾತೃ ಭಾಷೆಯನ್ನು ಮುದ್ರಿತ ರೂಪದಲ್ಲಿ ನೋಡಿ ಸಂತಸಗೊಂಡ ತುಡು ಒಲ್ ಚಿಕಿ ಅಕ್ಷರಗಳನ್ನು ಕೇವಲ ಒಂದೇ ವಾರದಲ್ಲಿ ಕಲಿತು ಮುಗಿಸಿದ್ದಾರೆ. 

ಭಾಷೆಯ ಆಕಸ್ಮಿಕ ಶೋಧನೆಯಿಂದ ಪುಳಕಿತರಾದ ತುಡು ತನ್ನಲ್ಲಾ ಜೀವನವನ್ನು ಭಾಷೆಗೆ ಮುಡಿಪಾಗಿಟ್ಟರು. ಸತತ ಒಂಭತ್ತು ವರ್ಷದಿಂದ ಸಂತಾಲಿ ಭಾಷೆಯನ್ನು ಜನಾಂಗದ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ.

“ನಮ್ಮದೇ ಭಾಷೆ ಕಲಿತು ಆ ಭಾಷೆಯಲ್ಲಿಯೇ ನಮ್ಮ ಪೀಳಿಗೆಗೆ ಪಾಠ ಮಾಡುವುದರಲ್ಲಿ ಒಂದು ತೆರೆನಾದ ತೃಪ್ತಿಯಿದೆ. ಯಾವಾಗಲೂ ವಿಭಿನ್ನ ಕೆಲಸಗಳನ್ನು ಮಾಡುವುದರಲ್ಲಿಯೆ ತಲ್ಲೀನನಾಗಿರುತ್ತೇನೆ” ಎಂದು 33 ವರ್ಷದ ಟುಡು ತಮ್ಮ ಕೆಲಸದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ಸಂವಿಧಾನ ಭಾಷಾಂತರ ಮತ್ತು ಸವಾಲುಗಳು

ದೇಶದ ಜನತೆಗೆ ಅದರಲ್ಲೂ ಬುಡಕಟ್ಟು ಜನರಿಗೆ ಸಂವಿಧಾನ ವಿಶೇಷ ಹಕ್ಕುಗಳನ್ನು ನೀಡಿದೆ ಎಂಬ ವಿಷಯವನ್ನು ಬಾಲ್ಯದಿಂದ ಕೇಳಿದ್ದರು. ತುಡುವರಿಗೆ ಓದಿ ತಿಳಿದುಕೊಳ್ಳುವ ಯಾವ ಅವಕಾಶವೂ ಇರಲಿಲ್ಲ.

ಆಂಗ್ಲ ಭಾಷೆಯಲ್ಲಿ ಬರೆದ ಸಂವಿಧಾನದ ಪುಸ್ತಕ ಓದಿದಾಗ ಸುಶಿಕ್ಷಿತರಿಗೆ ಅರ್ಥವಾಗುವುದು ಕಷ್ಟವಾಗಿರುವಾಗ ಸಾಮಾನ್ಯ ಜನರಿಗೆ ಸಂವಿಧಾನ ತಿಳಿಯುವುದು ಅಸಾಧ್ಯವೆಂದು ಟುಡು ಕಂಡುಕೊಂಡರು.

“ಬಂಗಾಳದಲ್ಲಿ ಸಂವಿಧಾನದ ಅನುವಾದವಿದ್ದರೂ (ಭಾಷಾಂತರ) ಸಾಮಾನ್ಯ ಜನರಿಗೆ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವೇ. ಹೀಗಾದರೆ ಜನರು ತಮ್ಮ ಹಕ್ಕುಗಳನ್ನು ಅರಿತುಕೊಳ್ಳುವುದಾದರು ಹೇಗೆ? ಎಂದು ಟುಡು ಹೇಳಿದ್ದಾರೆ.

ಇಂತಹ ಭಾಷಾ ಸಂಕೋಲೆಗಳಿಂದ ಬಿಡಿಸಿಕೊಳ್ಳಬೇಕಾದರೆ ಸಂವಿಧಾನವನ್ನು ತನ್ನವರಿಗಾಗಿ ಸಂತಾಲಿ ಭಾಷೆಯಲ್ಲಿ ಬರೆಯಲು ತುಡು ನಿರ್ಧರಿಸಿದರು. ಪ್ರಕಾಶಕರೊಬ್ಬರು ಟುಡುವಿನ ಕೆಲಸಕ್ಕೆ ಕೈಜೋಡಿಸಲು ಒಪ್ಪಿದ್ದಾರೆ. ಆದರೆ ಸಂವಿಧಾನದ ಅನುವಾದ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.

ಮೂಲ ಸಂವಿಧಾನದಲ್ಲಿರುವ ಪದಗಳಿಗೆ ಸಂತಾಲಿ ಭಾಷೆಯಲ್ಲಿ ಯಾವುದೇ ನಿರ್ದಿಷ್ಟ ಪದಗಳಿರಲಿಲ್ಲ. ಸಂತಾಲಿ ಭಾಷೆಯ ಶಬ್ದಕೋಶ ಹುಡುಕಿದರು, ವ್ಯರ್ಥವಾಯಿತು. ಶಬ್ದ ವ್ಯುತ್ಪತ್ತಿ ಕೆಲಸವು ಟುಡು ಅವರಿಗೆ ದೊಡ್ಡ ತಲೆ ನೋವು ತಂದುಕೊಟ್ಟಿತ್ತು.

ಸಂವಿಧಾನದ ಹೃದಯ ಭಾಗ ಎಂದು ಕರೆಯುವ ಪ್ರಸ್ತಾವನೆ ಭಾಷಾಂತರ ಮಾಡಲು ಹರಸಾಹಸಪಟ್ಟಿದ್ದರು. ಅದರಲ್ಲಿರುವ ಸಾರ್ವಭೌಮತೆ, ಜ್ಯಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರ ಎಂಬ ಶಬ್ದಗಳನ್ನು ಸಂತಾಲಿ ಭಾಷೆಯಲ್ಲಿ ಹೇಗೆ ಅನುವಾದ ಮಾಡುವುದು ಎಂದು ಟುಡು ಅವರಿಗೆ ಗೊಂದಲ ಉಂಟಾಗಿತ್ತು. ಕೊನೆಗೂ ಸಂವಿಧಾನದ ಪರಿಭಾಷೆಯನ್ನು (ಜಾರ್ಗನ್) ಶಬ್ದಾನುವಾದ ಮಾಡುವ ಬದಲು ಸಂತಾಲಿ ಭಾಷೆಯಲ್ಲಿ ಭಾವಾನುವಾದಕ್ಕೆ ಟುಡು ನಿರ್ಧರಿಸಿದರು. ಸಂವಿಧಾನವನ್ನು ಪೂರ್ಣ ಪ್ರಮಾಣದಲ್ಲಿ ಭಾಷಾಂತರಿಸಲು ಸುಮಾರು ಒಂಭತ್ತು ತಿಂಗಳು ತೆಗೆದುಕೊಂಡರು. 2020ರ ಕೊನೆಗೆ ಸಂತಾಲಿ ಭಾಷೆಯ ಸಂವಿಧಾನ ಹೊಸ ರೂಪ ಪಡೆದಿದೆ.

ಸಂವಿಧಾನವಲ್ಲದೇ ಬೇರೆ ಮುಖ್ಯವಾಹಿನಿ ಸಾಹಿತ್ಯವನ್ನು ಸಂತಾಲಿ ಭಾಷೆಗೆ ಭಾಷಾಂತರಿಸಲು ಅವರು ಬಯಸಿದ್ದು, ಸಾಹಿತ್ಯದ ಮೂಲಕ ಇಡೀ ಜಗತ್ತನ್ನು ತಮ್ಮ ಸಮುದಾಯಕ್ಕೆ ಪರಿಚಯಿಸಲು ಉತ್ಸುಕರಾಗಿದ್ದಾರೆ. ಯಾವುದೋ ಭಾಷೆಯ ಸಾಹಿತ್ಯವನ್ನು ಬಲವಂತವಾಗಿ ಅರ್ಥ ಮಾಡಿಕೊಳ್ಳುವ ಬದಲು ತಮ್ಮದೇ ಭಾಷೆಯಲ್ಲಿ ಸರಾಗವಾಗಿ ಓದಲು ಅವಕಾಶ ಮಾಡಿಕೊಳ್ಳಲು ತುಡು ಸಕಲ ಪ್ರಯತ್ನ ಮಾಡುತ್ತಿದ್ದಾರೆ.

ಅಳಿವಿನಂಚಿನಲ್ಲಿರುವ ಸ್ಥಳೀಯ ಮತ್ತು ಜನಾಂಗೀಯ  ಭಾಷೆ

ಬುಡಕಟ್ಟು ಜನಾಂಗದವರು ದೇಶದ ಎಲ್ಲ ವರ್ಗಗಳಿಗಿಂತ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದೆ ಬೀಳಲು ಕಾರಣ ಭಾಷೆ. ಬುಡಕಟ್ಟು ಜನಾಂಗದವರು ಮಾತನಾಡುವ ಭಾಷೆ ಕೇವಲ ಅವರಿಗೆ ಸೀಮಿತವೇ ವಿನಾಃ ಆ ಭಾಷೆಯನ್ನು ಮುಖ್ಯವಾಹಿನಿಗೆ ತರುವುದಾಗಲಿ ಮತ್ತು ಅವರ ಭಾಷೆಯನ್ನು ಶಿಕ್ಷಣದಲ್ಲಿ ಸೇರಿಸುವುದಾಗಲಿ ಮಾಡಲಿಲ್ಲ. ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಕಳೆದಿದ್ದರೂ ಬುಡಕಟ್ಟು ಜನಾಂಗದ ಭಾಷೆ ಗುರುತಿಸಿ ಮುನ್ನೆಲೆಗೆ ತರುವ ಕೆಲಸ ಸರ್ಕಾರದಿಂದ ನಡೆದಿಲ್ಲ ಎಂದು ಬುಡಕಟ್ಟು ಭಾಷೆಗಳ ಬಗ್ಗೆ ಸರ್ಕಾರ ತೋರಿಸುತ್ತಿರುವ ಅಸಡ್ಡೆ ಬಗ್ಗೆ ವಕೀಲ, ಬುಡಕಟ್ಟು ಹಕ್ಕುಗಳ ಹೋರಾಟಗಾರ  ಹನ್ಸ್ರಾಜ್ ಮೀನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಭಾಷೆಗಳು ಈ ಮಟ್ಟಕ್ಕೆ ಕಡೆಗಣಿಸಲಾಗಿರುವುದು ಮತ್ತು ಅಳಿವಿನಂಚಿಗೆ ಮುಖ ಮಾಡುವಂತೆ ಆಗಿರುವುದು ಮಾನವ ಚರಿತ್ರೆಯಲ್ಲಿಯೇ ಇದು ಮೊದಲು. "ಭಾಷೆಗಳು ಒಂದು ಜನಾಂಗದ ಸಂಸ್ಕೃತಿ, ಜ್ಞಾನ, ವಿಜ್ಞಾನ ಎಲ್ಲವನ್ನು ಸಮಾಜಕ್ಕೆ ದಾಟಿಸುವ ವಾಹಕಗಳು” ಎಂದು ಅಮೆರಿಕ ಮೂಲದ  ಸಂಸ್ಥೆ ‘ಅಳಿವಿನಂಚಿನ ಭಾಷೆಗಳ ಯೋಜನೆ’ಯ ಸಂಯೋಜಕಿ ಅನ್ನಾ ಬೆಲೆವ್ ಹೇಳಿದ್ದಾರೆ.

ಸಂತಲ ಜನಾಂಗದ ಹಕ್ಕುಗಳನ್ನು ತಿಳಿಯಲು ಸಂತಾಲಿ ಸಂವಿಧಾನ ಸಹಾಯವಾಗುದಲ್ಲದೇ ಆ ಭಾಷೆಯ ಲಿಪಿಯನ್ನು ಸಂವಿಧಾನದ ಮೂಲಕ ಉಳಿಸಲು ಸಾಧ್ಯ ಎಂದು ಬೇಲ್ಯೂ ತಿಳಿಸಿದ್ದಾರೆ.

ಸಂತಾಲಿ ಭಾಷೆಯ ಉಗಮ

ಸಂತಾಲಿ ಒಂದು ಸನಾತನ ಭಾಷೆಯಾದರೂ 1800ರವರೆಗೂ ಯಾವುದೇ ಅಕ್ಷರ ರೂಪದ ದಾಖಲೆಯಲ್ಲಿ ಈ ಭಾಷೆಯ  ಕುರುಹು ಸಿಗಲಿಲ್ಲ. ಕ್ರಿಶ್ಚಿಯನ್‌ ಮಿಶನರಿಗಳ ಗುಂಪೊಂದು ಈ ಭಾಷೆಗೆ ಲಿಪಿ ಅಭಿವೃದ್ಧಿ ಪಡಿಸಿದ್ದು, ರೋಮನ್ ಅಕ್ಷರಗಳಿಂದ ಪ್ರೇರಿತಗೊಂಡ ಲಿಪಿಯಾಗಿದೆ.

1925ರ ಹೊತ್ತಿಗೆ ಸಂತಾಲಿ ಭಾಷೆಯ ಜನರು ಬಳಸುವ ಧ್ವನಿಗೆ ಅನುಸಾರ ಲಿಪಿಯನ್ನು ರಚಿಸಲಾಗಿದೆ. ಪಂಡಿತ್ ರಘನಾಥ್ ಮುರ್ಮು 30 ಅಕ್ಷರಗಳನ್ನೊಳಗೊಂಡ ಒಲ್ ಚಿಕಿ ಲಿಪಿಯನ್ನು ಅಭಿವೃದ್ದಿ ಪಡಿಸಿದರು. ಸೂರ್ಯ, ಚಂದ್ರ, ನೀರಾವರಿ ಸಾಮಾಗ್ರಿಗಳು, ನಟನಾ ಚಿತ್ರಗಳು ಹೀಗೆ ಸಂತಲ ಜನಾಂಗದ ದೈನಂದಿನ ಬದುಕು ಮತ್ತು ನಿಸರ್ಗ ಆಕಾರಗಳನ್ನು ಲಿಪಿಗೆ ಸ್ಫೂರ್ತಿಯಾಗಿ ಪಡೆದುಕೊಂಡರು.

ಲಿಪಿಯನ್ನು ಪಡೆದರೂ ಭಾಷೆಯನ್ನು ಕಲಿಸಲು ಸರಿಯಾದ ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಲ್ಲದೆ ಸಂತಾಲಿ ಜನಾಂಗ ಭಾಷೆಯ ಪೂರ್ಣ ಪ್ರಯೋಜನ ಪಡೆದುಕೊಳ್ಳಲು ಸೋತಿತು. ದೇಶದ ಇತರ ಬುಡಕಟ್ಟು ಜನಾಂಗದ ಭಾಷೆಗೆ ಹೋಲಿಸಿದರೆ ಸಂತಾಲಿ ತನ್ನದೇ ಲಿಪಿ ಹೊಂದಿದೆ ಎನ್ನುವುದು ಸಮಾಧಾನ.

ಮಾತೃಭಾಷೆ ಏಕೆ ಮುಖ್ಯ?

ಭಾರತ ದೇಶದಲ್ಲಿ ಹಲವಾರು ಬುಡಕಟ್ಟು ಸಮುದಾಯಗಳಿದ್ದು, ಒಂದೊಂದು ಸಮುದಾಯವೂ ತನ್ನದೇ ಭಾಷೆ ಮತ್ತು ಸಂಸ್ಕೃತಿ ಹೊಂದಿದೆ. ಪೂರ್ವ ಕರಾವಳಿ ಭಾಗದಲ್ಲಿಯೇ ಸುಮಾರು 17ರಿಂದ 21 ಬುಡಕಟ್ಟು ಸಮುದಾಯಗಳಿವೆ. ಅವುಗಳಲ್ಲಿ ಹೆಚ್ಚಿನವು ಲಿಪಿ ಹೊಂದಿಲ್ಲ ಎಂದು ಆಂಧ್ರ ವಿಶ್ವವಿದ್ಯಾನಿಯದ ಪ್ರಾಧ್ಯಾಪಕ ಮತ್ತು ಭಾಷಾ ಶಾಸ್ತ್ರಜ್ಞ ಸತುಪತಿ ಪ್ರಸನ್ನಶ್ರೀ ಹೇಳಿದ್ದಾರೆ.

ಮಾತೃಭಾಷೆಯಲ್ಲಿ ಶಿಕ್ಷಣ ಲಭ್ಯವಾಗದೆ, ಅನ್ಯ ಭಾಷೆಯಲ್ಲಿ ಶಿಕ್ಷಣ ಪಡೆಯಲು ಕಷ್ಟವಾಗುವುದರಿಂದ ಬುಡಕಟ್ಟು ಜನಾಂಗದ ಮಕ್ಕಳು ಶಾಲೆಯಿಂದ ವಿಮುಖರಾಗುತ್ತಿದ್ದಾರೆಂದು ಸತುಪತಿ ಹೇಳಿದ್ದಾರೆ.

ಅನ್ಯ ಭಾಷೆಯಲ್ಲಿ ಶಿಕ್ಷಣ ಮುಂದುವರಿಸಲು ಆಗದೆ ಶಿಕ್ಷಣ ಮೊಟಕುಗೊಳಿಸಿ ಜೀವನ ನಿರ್ವಹಿಸುವ ಉದ್ದೇಶಕ್ಕೆ ತಮ್ಮ ಸಂಸ್ಕೃತಿ, ಭಾಷೆ ಬಿಟ್ಟು ನಗರಗಳಿಗೆ ವಲಸೆ ಹೋಗುತ್ತಾರೆ ಎಂದು ಮೀನಾ ಶಿಕ್ಷಣದ ಅಭಾವದಿಂದ ಒಂದು ಜನಾಂಗದ ಸಂಸ್ಕೃತಿ ಮೇಲಾಗುತ್ತಿರುವ ಪರಿಣಾಮ ವಿವರಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲವೂ ಸರಿಯಿರುವಾಗ ಜನರು ಮಾತೃಭಾಷೆ ಕಳೆದುಕೊಳ್ಳುವುದಿಲ್ಲ. ಬಲವಂತದ ಸ್ಥಳಾಂತರ, ಇತರ ಸಮಾಜ ಅಥವಾ ಸಂಸ್ಕೃತಿಯಿಂದ ಸಾಂಪ್ರದಾಯಿಕ ಜೀವನೋಪಾಯದಿಂದ ಹೊರಹಾಕಲ್ಪಡುವುದರಿಂದ ಕ್ರಮೇಣ ಅವುಗಳ ಪರಿಣಾಮ ಭಾಷೆಯ ಮೇಲೆ ಬೀರುತ್ತದೆ.

ಒಂದು ಭಾಷೆಯ ನಷ್ಟವು ಆ ಭಾಷೆ ಮಾತನಾಡುವ ಸಮುದಾಯ ಎದುರಿಸುತ್ತಿರುವ ಇತರ ಸಮಸ್ಯೆಗಳ ಸಂಕೇತ ಎಂದು ಬೆಲೆವ್ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಮಾತೃಭಾಷೆ ರಕ್ಷಿಸಿಕೊಳ್ಳುವ ಜವಾಬ್ದಾರಿ ಆಯಾ ಸಮುದಾಯದ ಮೇಲಿದೆ. ಭಾಷೆ ಉಳಿಸಿ ಬೆಳೆಸುವ ಮಾರ್ಗ ಹುಡುಕಬೇಕು. ಆ ನಂತರ ಹೊರಗಿನ ಬೆಂಬಲ ಪಡೆದುಕೊಳ್ಳಬೇಕು. ಹೊರಗಿನ ಬೆಂಬಲವು ಭಾಷೆಗೆ ಕಾನೂನು ಚೌಕಟ್ಟು ತಂದುಕೊಡಲು ಸಹಕಾರಿ ಎಂದು ಬೆಲೆವ್ ತಿಳಿಸಿದ್ದಾರೆ.

ಜನರು ತಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ, ಆರೋಗ್ಯ, ಕಾನೂನು ಹೀಗೆ ಹಲವಾರು ಹಕ್ಕುಗಳನ್ನು ಪಡೆದಿದ್ದಾರೆ. ತಮ್ಮ ಭಾಷೆಯಿಂದ ಇನ್ನು ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಜನರಿಗೆ ತಿಳಿಯಬೇಕಿದೆ. ಒಂದು ಸಮುದಾಯದ ಯೋಗಕ್ಷೇಮವು ಆ ಸಮುದಾಯದ ಭಾಷೆಯ ಯೋಗಕ್ಷೇಮದ ಮೇಲೆ ನೇರ ಸಂಬಂಧ ಹೊಂದಿದೆ.

ವಿಶ್ವಸಂಸ್ಥೆಯು 2022ರಿಂದ 2032ರ ವರ್ಷವನ್ನು ಸ್ಥಳೀಯ ಭಾಷೆಗಳ ಅಂತಾರಾಷ್ಟ್ರೀಯ ದಶಕ ಎಂದು ಘೋಷಿಸಿದೆ. ಸರ್ಕಾರಗಳು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳದಿದ್ದರೆ ಅಂತಹ ದಶಕಗಳ ಆಚರಣೆ ಕೇವಲ ಪದಗಳಿಗಷ್ಟೇ ಸೀಮಿತವಾಗುವ ಅಪಾಯವಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app