ತೆಲಂಗಾಣ | ಬುಡಕಟ್ಟು ಮಹಿಳೆಯರ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ: ಆರೋಪ

  • ಗರ್ಭಿಣಿಯರು ಸೇರಿ ಒಂಬತ್ತು ಮಹಿಳೆಯರಿಗೆ ದೊಣ್ಣೆ, ಬೆಲ್ಟ್‌ನಿಂದ ಥಳಿತ
  • ಚಂದ್ರುಗೊಂಡ ಠಾಣೆಗೆ ದೂರು; ಆರೋಪ ನಿರಾಕರಿಸಿದ ಅರಣ್ಯಾಧಿಕಾರಿಗಳು

ತೆಲಂಗಾಣದ ಕೊಥಗುಡೆಮ್ ಜಿಲ್ಲೆಯ ಚಂದ್ರುಗೊಂಡ ಮಂಡಲದ ಮದ್ದುಕೂರು ಮತ್ತು ಬೆಂಡಲಪಾಡು ಗ್ರಾಮದ ಬುಡಕಟ್ಟು ಸಮುದಾಯ ಮಹಿಳೆಯರ ಮೇಲೆ ಅಲ್ಲಿನ ಅರಣ್ಯಾಧಿಕಾರಿಗಳು ದೊಣ್ಣೆ ಮತ್ತು ಬೆಲ್ಟ್ ಗಳಿಂದ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶುಕ್ರವಾರ ಮತ್ತು ಶನಿವಾರ ಈ ಘಟನೆಗಳು ನಡೆದಿದ್ದು, ನಾಲ್ವರು ಗರ್ಭಿಣಿಯರು ಸೇರಿದಂತೆ ಒಂಬತ್ತು ಮಂದಿ ಮಹಿಳೆಯರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ ಅಧಿಕಾರಿಗಳ ವಿರುದ್ಧ ಸಂತ್ರಸ್ತೆಯರು ಚಂದ್ರುಗೊಂಡ ಪೊಲೀಸರಿಗೆ ಭಾನುವಾರ ದೂರು ನೀಡಿದ್ದಾರೆ.

ಛತ್ತೀಸ್‌ಗಡ್‌ದಿಂದ ಮದ್ದುಕೂರು ಮತ್ತು ಬೆಂಡಲಪಾಡು ಅರಣ್ಯ ಪ್ರದೇಶಗಳಿಗೆ ವಲಸೆ ಬಂದ ಸುಮಾರು 35 ಗೊಟ್ಟಿಕೋಯ ಕುಟುಂಬಗಳು, ಕಳೆದ 15 ರಿಂದ 20 ವರ್ಷಗಳಿಂದ 39 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿವೆ.

ಕೆಲವು ವರ್ಷಗಳಿಂದ ಬುಡಕಟ್ಟು ಜನರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ಹಲವು ಬಾರಿ ಘರ್ಷಣೆಗಳು ನಡೆದಿವೆ. 'ಭೂಮಿಯನ್ನು ಅತಿಯಾಗಿ ಸಾಗುವಳಿ ಮಾಡಲಾಗುತ್ತಿದೆ. ಜತೆಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಬುಡಕಟ್ಟು ಸಮುದಾಯದ ಜನರು ವ್ಯವಸಾಯ ಮಾಡುತ್ತಿದ್ದಾರೆ' ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಆರೋಪ.

ಮೊದಲ ಘಟನೆಯಲ್ಲಿ, “ಅರಣ್ಯ ಅಧಿಕಾರಿಗಳು ಹೊಲಕ್ಕೆ ಬಂದು ಹತ್ತಿ ಬಿತ್ತನೆಗೆ ಅಡ್ಡಿಪಡಿಸಿದ್ದಾರೆ. ಜತೆಗೆ ಹೊಲದಲ್ಲಿ ಕಂದಕಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ವೇಳೆ ಹೊಲದಲ್ಲಿಯೇ ಇದ್ದ ಮಹಿಳೆಯರು ಕಂದಕ ನಿರ್ಮಿಸಿದಂತೆ ಅಧಿಕಾರಿಗಳನ್ನು ತಡೆಯಲು ಪ್ರಯತ್ನಿಸಿದಾಗ, ಗರ್ಭಿಣಿಯರು ಎಂದು ನೋಡದೆ ಅಧಿಕಾರಿಗಳು ಹಲ್ಲೆ ನಡೆಸಿದರು” ಎಂದು ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ.

Image

ಎರಡನೇ ಘಟನೆಯಲ್ಲಿ, ಬೆಂಡಲಪಾಡು ಗ್ರಾಮದ ಬುಡಕಟ್ಟು ಸಮುದಾಯದ ರವ್ವಾ ಜೋಗಿ, ರವ್ವಾ ವಿದಿ, ಸೋದೆ ಶಾಂತಿ, ಸೋದೆ ಸುಕುಡೆ ಮತ್ತು ರವ್ವಾ ಭೆಮೆ ಎಂಬ ಮಹಿಳೆಯರ ಮೇಲೆ ಅರಣ್ಯ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ. “ಕಳೆದ ಕೆಲವು ವರ್ಷಗಳಿಂದ ಅರಣ್ಯ ಅಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ಬುಡಕಟ್ಟು ಮಹಿಳೆಯರು ದೂರಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕನಿ‍‍‍‍‍‍‍ಷ್ಠ ಸೌಕರ್ಯಗಳಿಲ್ಲದೆ ಬದುಕುತ್ತಿವೆ 49 ಆದಿವಾಸಿ ಕುಟುಂಬಗಳು

"ಬುಡಕಟ್ಟು ಸಮುದಾಯದ ಜನರು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ದಾಖಲೆ ನೀಡುವಂತೆ ಅರ್ಜಿ ಸಲ್ಲಿಸಿದ್ದೇವೆ. ಇದರ ನಡುವೆಯೂ ಅರಣ್ಯ ಇಲಾಖೆ ಅಧಿಕಾರಿಗಳು ಕೃಷಿ ಚಟುವಟಿಕೆ ನಡೆಸಲು ಅಡ್ಡಿಪಡಿಸುತ್ತಿದ್ದಾರೆ" ಎಂದು ಬುಡಕಟ್ಟು ಜನರು ಆರೋಪಿಸಿದ್ದಾರೆ.

ಚಂದ್ರುಗೊಂಡ ವಲಯಾ ಅರಣ್ಯಾಧಿಕಾರಿ ಚಲಮಾಲಾ ಶ್ರೀನಿವಾಸ ರಾವ್ ಪ್ರತಿಕ್ರಿಯಿಸಿದ್ದು, “ನಾವು ಬುಡಕಟ್ಟು ಮಹಿಳೆಯರ ಮೇಲೆ ಯಾವುದೇ ಹಲ್ಲೆ ನಡೆಸಿಲ್ಲ. ನಾವು ಕೇವಲ 10 ಕ್ಕಿಂತ ಕಡಿಮೆ ಮಂದಿ ಇದ್ದೆವು. ಆದರೆ, ಅವರು 50 ಕ್ಕಿಂತ ಹೆಚ್ಚು ಜನರಿದ್ದರು. ನಾವು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ” ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್