
- ಅಗರ್ತಲಾದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುರಜಿತ್
- ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರದ್ಯೋತ್ ಮಾಣಿಕ್ಯ ಆಗ್ರಹ
ತಾನು ಕೆಲಸ ಮಾಡಿದ ಸಂಬಳ ನೀಡುವಂತೆ ಕೇಳಿದ್ದಕ್ಕೆ ಬುಡಕಟ್ಟು ಸಮುದಾಯದ ಉದ್ಯೋಗಿಗೆ ಅಂಗಡಿಯ ಮಾಲೀಕ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ.
ತ್ರಿಪುರದ ಅಗರ್ತಲಾದಲ್ಲಿ ಬಟ್ಟೆ ಅಂಗಡಿ ಹೊಂದಿರುವ ಅಪುಸಹಾ ತನ್ನ ಅಂಗಡಿಯ ಮಾಜಿ ಉದ್ಯೋಗಿ ಸುರಜಿತ್ ಅವರಿಗೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾನೆ. ಮತ್ತೊಬ್ಬ ಸಿಬ್ಬಂದಿ ಸಾಗರ್ ದೇಬ್ ಕೂಡ ಹಲ್ಲೆ ಮಾಡಿದ್ದು, ಇನ್ನೊಬ್ಬ ಸಿಬ್ಬಂದಿ ಘಟನೆಯನ್ನು ಮೊಬೈಲ್ನಲ್ಲಿ ವಿಡಿಯೋ ಚಿತ್ರಿಕರಿಸಿದ್ದಾನೆ.
ಧಲೈ ಜಿಲ್ಲೆಯ ಬುಡಕಟ್ಟು ಸಮುದಾಯದ ಯುವಕ ಸುರಜಿತ್, ಅಗರ್ತಲಾ ನಗರದಲ್ಲಿ ಬಟ್ಟೆ ಶೋರೂಂ ಹೊಂದಿರುವ ಅಪುಸಹಾ ಅವರ ಬಳಿ ಕೆಲಸ ಮಾಡುತ್ತಿದ್ದ. ಅಕ್ಟೋಬರ್ ತಿಂಗಳ ಬಾಕಿ ವೇತನ ನೀಡುವಂತೆ ಶೋರೂಂ ಮಾಲೀಕನನ್ನು ಕೇಳಿದ್ದಾನೆ. ಈ ವೇಳೆ ಸಂಬಳ ನೀಡದೆ ಆತನನ್ನು ಥಳಿಸಿದ್ದಾರೆ.
ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟಿಪ್ರಾ ಮೋಥಾ ಬುಡಕಟ್ಟು ಸಂಘಟನೆಯ ಮುಖ್ಯಸ್ಥ ಪ್ರದ್ಯೋತ್ ಮಾಣಿಕ್ಯ ಸೇರಿದಂತೆ ಹಲವರು ಈ ಘಟನೆಯನ್ನು ಖಂಡಿಸಿದ್ದಾರೆ.
Attention @Tripura_Police ! @YTFTIPRA have already taken up this matter with you ! We demand justice ! It breaks my heart to see treatment like this given to anyone ! Kindly Take action or I will personally come down to your station with my YTF warriors ! pic.twitter.com/ysOiiiSY5o
— Pradyot_Tripura (@PradyotManikya) November 8, 2022
“ಬುಡಕಟ್ಟು ಸಮುದಾಯದ ವ್ಯಕ್ತಿಗೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು” ಎಂದು ಪ್ರದ್ಯೋತ್ ಮಾಣಿಕ್ಯ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ಬಾಲಕನ ಸಾವಿಗೆ ಕಾರಣವಾದ ಜ್ವರದ ಚುಚ್ಚುಮದ್ದು; ವ್ಯಕ್ತಿ ಬಂಧನ
ಹಲ್ಲೆಗೆ ಒಳಗಾದ ಸುರಜಿತ್, ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ಅಗರ್ತಲಾ ಪೊಲೀಸರು ತಿಳಿಸಿದ್ದಾರೆ.