
- ಸಂತೋಷ್ ಅವರಿಗೆ ನೀಡಲಾಗಿರುವ ನೋಟಿಸ್ ರದ್ದು ಕೋರಿಕೆ
- ಬಿಜೆಪಿ ಪರ ವಕೀಲರ ವಾದ ತಿರಸ್ಕರಿಸಿದ ತೆಲಂಗಾಣ ಹೈಕೋರ್ಟ್
ತೆಲಂಗಾಣ ಬಿಆರ್ಎಸ್ ಶಾಸಕರ ಖರೀದಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ಗೆ ನೋಟಿಸ್ ನೀಡಲು ದೆಹಲಿ ಪೊಲೀಸರ ನೆರವು ಪಡೆಯುವಂತೆ ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ತೆಲಂಗಾಣ ಹೈಕೋರ್ಟ್ ಸೂಚಿಸಿದೆ.
ಬಿ ಎಲ್ ಸಂತೋಷ್ಗೆ ನೋಟಿಸ್ ನೀಡಲು ನೀವು(ಎಸ್ಐಟಿ) ದೆಹಲಿ ಪೊಲೀಸರ ಸಹಾಯ ಪಡೆಯಬಹುದು. ಆವರೆಗೆ ಅವರನ್ನು ಬಂಧಿಸುವಂತಿಲ್ಲ ಎಂದು ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ಸೂಚಿಸಿದ್ದಾರೆ. ಆ ಮೂಲಕ ತೆಲಂಗಾಣ ಆಪರೇಷನ್ ಕಮಲ ಪ್ರಕರಣದಲ್ಲಿ ಆರ್ ಎಸ್ ಎಸ್ ಹಿನ್ನೆಲೆಯ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಅವರಿಗೆ ಸಂಕಷ್ಟ ಎದುರಾಗಿದೆ.
ರಾಜೇಂದ್ರನಗರ ಎಸಿಪಿ ಬಿ ಗಂಗಾಧರ್ ಅವರು ನ.16ರಂದು ಬಿ ಎಲ್ ಸಂತೋಷ್ ಅವರಿಗೆ ನೋಟಿಸ್ ಜಾರಿ ಮಾಡಿ, ನ.21ರ ಬೆಳಗ್ಗೆ 10.30ಕ್ಕೆ ಹೈದರಾಬಾದ್ನ ಎಸ್ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಈ ನೋಟಿಸನ್ನು ಬಿ ಎಲ್ ಸಂತೋಷ್ ಅವರ ಬೆಂಗಳೂರಿನ ನಿವಾಸದ ವಿಳಾಸಕ್ಕೆ ಕಳಿಸಲಾಗಿತ್ತು. ಆದರೆ, ಅವರು ಆ ಮನೆಯಲ್ಲಿ ಇರಲಿಲ್ಲ.
ನೋಟಿಸ್ನಲ್ಲಿ "ಸಾಕ್ಷ್ಯಗಳನ್ನು ನಾಶ ಪಡಿಸಬೇಡಿ, ಸಾಕ್ಷಿಗಳಿಗೆ ಬೆದರಿಕೆ ಹಾಕಬೇಡಿ, ದೇಶ ತೊರೆಯಬೇಡಿ, ನೀವು ಬಳಸುತ್ತಿರುವ ಮೊಬೈಲ್ಅನ್ನು ವಿಚಾರಣೆ ದಿನ ತರಬೇಕು. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ, ನಿಮ್ಮನ್ನು ಬಂಧಿಸಲಾಗುವುದು" ಎಂದು ಉಲ್ಲೇಖಿಸಲಾಗಿತ್ತು.
ನ.29ರ ಒಳಗೆ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಮೊದಲು ವರದಿ ಸಲ್ಲಿಸುವಂತೆ ವಿಭಾಗೀಯ ಪೀಠ ಎಸ್ಐಟಿಗೆ ಸೂಚಿಸಿರುವಾಗ, ಬಿ ಎಲ್ ಸಂತೋಷ್ ಅವರಿಗೆ ಎಸ್ಐಟಿ ಯಾಕೆ ನೋಟಿಸ್ ಜಾರಿಗೊಳಿಸಿದೆ ಎಂದು ವಿಚಾರಣೆ ವೇಳೆ ಬಿಜೆಪಿ ಪರ ವಕೀಲ ವೈದ್ಯನಾಥನ್ ಚಿದಂಬರಂ ಪ್ರಶ್ನಿಸಿದ್ದಾರೆ. ಅಲ್ಲದೆ, ಈ ನೋಟಿಸ್ ಅನ್ನು ರದ್ದುಗೊಳಿಸಬೇಕು ಎಂದೂ ಕೋರಿದರು. ಆದರೆ, ಬಿಜೆಪಿ ಪರ ವಕೀಲರ ಮನವಿ ತಿರಸ್ಕರಿಸಿದ ತೆಲಂಗಾಣ ಹೈಕೋರ್ಟ್, ದೆಹಲಿ ಪೊಲೀಸರ ಸಹಾಯದಿಂದ ನೋಟಿಸನ್ನು ಬಿ ಎಲ್ ಸಂತೋಷ್ ಅವರಿಗೆ ತಲುಪುವಂತೆ ಮಾಡಿ ಎಂದಿದೆ.
ಈ ಸುದ್ದಿ ಓದಿದ್ದೀರಾ?: ಬಿಆರ್ಎಸ್ ಶಾಸಕರ ಖರೀದಿ ಆರೋಪ | ವಿಚಾರಣೆಗೆ ಖುದ್ದು ಹಾಜರಾಗುವಂತೆ ಬಿ ಎಲ್ ಸಂತೋಷ್ಗೆ ತೆಲಂಗಾಣ ಎಸ್ಐಟಿ ಸಮನ್ಸ್, ಬಿಜೆಪಿ ನಾಯಕನಿಗೆ ಬಂಧನದ ಭೀತಿ
ಅ.26ರ ರಾತ್ರಿ ಸೈಬರಾಬಾದ್ ಪೊಲೀಸರು ಹೈದರಾಬಾದ್ನ ಹೊರವಲಯದಲ್ಲಿರುವ ಮೊಯಿನಾಬಾದ್ನಲ್ಲಿರುವ ಫಾರ್ಮ್ಹೌಸ್ ಮೇಲೆ ದಾಳಿ ನಡೆಸಿದರು. ಈ ವೇಳೆ ಅಲ್ಲಿ ಆಪರೇಷನ್ ಕಮಲಕ್ಕೆ ಸಂಚು ರೂಪಿಸುತ್ತಿದ್ದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿಗಳು ಟಿಆರ್ಎಸ್ ಶಾಸಕರಿಗೆ 100 ಕೋಟಿ ರೂಪಾಯಿ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲು ಎಸ್ಐಟಿ ರಚಿಸಲಾಗಿತ್ತು.