
- ಸಹೋದರನ ಜತೆ ಸೇರಿ ವಿದ್ಯಾರ್ಥಿವೇತನ ಲಪಟಾಯಿಸಲು ಸಂಚು?
- ಕಟ್ಟಡ ಕಾರ್ಮಿಕರೊಬ್ಬರ ಮಗ ನೀಡಿದ ದೂರನ್ನಾಧರಿಸಿ ಪೊಲೀಸ್ ಕ್ರಮ
ಕಾರ್ಮಿಕರ ಮಕ್ಕಳಿಗಾಗಿ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ಲಪಟಾಯಿಸಲು ತನ್ನ ಸಹೋದರನ ಜತೆ ಸೇರಿ ಸಂಚು ರೂಪಿಸಿದ್ದ ಆರೋಪದಡಿ ʻಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿʼಯ ಗುತ್ತಿಗೆ ನೌಕರ ಮುಜಾಹಿದ್ ಪಾಷಾನನ್ನು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿ ಮುಜಾಹಿದ್ ಪಾಷಾ, "ಶೇ.50ರಷ್ಟು ಕಮಿಷನ್ ಆಸೆಗಾಗಿ ಅನರ್ಹರಿಗೆ ವಿದ್ಯಾರ್ಥಿವೇತನ ಮಂಜೂರು ಮಾಡುತ್ತಿದ್ದ ಎಂದು ಆರೋಪಿಸಿ ಕಟ್ಟಡ ಕಾರ್ಮಿಕರೊಬ್ಬರ ಮಗ ದೂರು ನೀಡಿದ್ದ. ಈ ದೂರನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದರು.
"ಮುಜಾಹಿದ್, ತುಮಕೂರಿನ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್(ಎಸ್ಎಸ್ಪಿ) ವಿಭಾಗದಲ್ಲಿ ಗುತ್ತಿಗೆ ನೌಕರನಾಗಿದ್ದ. ಮಂಡಳಿಯಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡುವ ವಿಭಾಗದಲ್ಲಿದ್ದ. ಆರೋಪಿ ಮುಜಾಹಿದ್, ಎಸ್ಎಸ್ಪಿ ಮೂಲಕ ಬರುವ ಅರ್ಜಿಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳ ಖಾತೆಗೆ ಹಣ ಜಮೆ ಮಾಡುವ ವ್ಯವಸ್ಥೆ ಬಗ್ಗೆ ತಿಳಿದುಕೊಂಡಿದ್ದ. ಹೀಗಾಗಿ, ತನ್ನ ಸಹೋದರ ಮೊಹಮ್ಮದ್ ಅಜೀಮ್ ಜೊತೆ ಸೇರಿ ವಿದ್ಯಾರ್ಥಿವೇತನ ದೋಚಲು ಸಂಚು ರೂಪಿಸಿದ್ದ" ಎಂದು ಪೊಲೀಸ್ ಮೂಲಗಳು ಈ ದಿನ.ಕಾಮ್ಗೆ ತಿಳಿಸಿವೆ.
ಈ ಸುದ್ದಿ ಓದಿದ್ದೀರಾ?: ಮಂಗಳೂರು ಸ್ಫೋಟ | ಆರೋಪಿಯ ತನಿಖೆ ನಡೆದಿಲ್ಲ; ವದಂತಿಗಳಿಗೆ ಕಿವಿಗೊಡಬೇಡಿ: ಪೊಲೀಸ್ ಆಯುಕ್ತ ಶಶಿಕುಮಾರ್
"ಗುತ್ತಿಗೆ ನೌಕರರಲ್ಲದವರ ಮಕ್ಕಳಿಂದ ದಾಖಲೆ ಸಂಗ್ರಹಿಸುತ್ತಿದ್ದ ಆರೋಪಿಗಳು, ಅವರಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡುತ್ತಿದ್ದ. ಬಳಿಕ ಅವರಿಂದ ಶೇ.50ರಷ್ಟು ಹಣವನ್ನು ವಸೂಲಿ ಮಾಡುತ್ತಿದ್ದರು" ಎಂದು ಪೊಲೀಸ್ ಮೂಲಗಳು ತಿಳಿಸಿವೆ.