
- ಟ್ವಿಟರ್ ವೇದಿಕೆಯಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ಪ್ರಸಾರ
- ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಮಹಿಳಾ ಆಯೋಗ
ಜುಲೈ 6ರಿಂದ ಆಗಸ್ಟ್ 26ರವರೆಗೆ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಡಿಯೋ, ನಗ್ನತೆಗೆ ಸಂಬಂಧಿಸಿದ ವಿಷಯಗಳನ್ನು ಉತ್ತೇಜಿಸುವ 57,643 ಖಾತೆಗಳನ್ನು ರದ್ದು ಮಾಡಿರುವುದಾಗಿ ಟ್ವಿಟರ್ ಹೇಳಿದೆ.
ಟ್ವಿಟರ್ ವೇದಿಕೆಯಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ಪ್ರಸಾರವಾಗುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇದರಿಂದಾಗಿ ಭಾರಿ ವಿವಾದ ಉಂಟಾಗಿದ್ದು, 57,643 ಖಾತೆಗಳನ್ನು ಡಿಲೀಟ್ ಮಾಡಿರುವುದಾಗಿ ಟ್ವಿಟರ್ ತಿಳಿಸಿದೆ.
ಈ ವಾರದ ಆರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ “ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ವಿಡಿಯೋಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಟ್ವಿಟರ್ ನೀಡಿರುವ ಉತ್ತರಗಳು ಅಪೂರ್ಣ. ಈ ಬಗ್ಗೆ ಆಯೋಗಕ್ಕೆ ಅಸಮಾಧಾನವಾಗಿದೆ" ಎಂದಿದ್ದರು.
ಸ್ವಾತಿ ಮಲಿವಾಲ್ ಅವರು ಮಕ್ಕಳ ಲೈಂಗಿಕ ಶೋಷಣೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರದ ವಿಡಿಯೋಗಳು ಟ್ವಿಟರ್ನಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಸೆಪ್ಟೆಂಬರ್ 20 ರಂದು ಟ್ವಿಟರ್ ಇಂಡಿಯಾದ ನೀತಿ ನಿರೂಪಣೆ ವಿಭಾಗದ ಮುಖ್ಯಸ್ಥರು ಮತ್ತು ದೆಹಲಿ ಪೊಲೀಸರಿಗೆ ಸಮನ್ಸ್ ನೀಡಿದ್ದರು.
ಮಕ್ಕಳನ್ನು ಒಳಗೊಂಡಿರುವ ಲೈಂಗಿಕ ಕ್ರಿಯೆಗಳ ವಿಡಿಯೋಗಳು ಮತ್ತು ಫೋಟೋಗಳನ್ನು ಬಹಿರಂಗವಾಗಿ ಬಿಂಬಿಸುವ ಹಲವಾರು ಟ್ವೀಟ್ಗಳಿಗೆ ಸಂಬಂಧಿಸಿದಂತೆ ಮಹಿಳಾ ಆಯೋಗವು ಸುವೊ-ಮೋಟೊ ದೂರು ದಾಖಲಿಸಿಕೊಂಡಿತ್ತು.
"ಹೆಚ್ಚಿನ ಟ್ವೀಟ್ಗಳು ಮಕ್ಕಳನ್ನು ಸಂಪೂರ್ಣವಾಗಿ ಬೆತ್ತಲೆಯಾಗಿ ತೋರಿಸಿವೆ. ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಅಥವಾ ಸಮ್ಮತಿ ಇಲ್ಲದ ಲೈಂಗಿಕ ಚಟುವಟಿಕೆಗಳನ್ನೇ ಟ್ವೀಟ್ಗಳು ಪ್ರದರ್ಶಿಸಿವೆ" ಎಂದು ಆಯೋಗ ಹೇಳಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿನ ಬಳಕೆದಾರರಿಂದ 1,088 ದೂರು ಬಂದಿವೆ ಎಂದು ಟ್ವಿಟರ್ ಹೇಳಿತ್ತು. ಈ ಸಂಬಂಧ 41 ಯುಆರ್ಎಲ್ಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿಯೂ ಟ್ವಿಟರ್ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ?: ರೆಸಾರ್ಟ್ 'ರೆಸೆಪ್ಷನಿಸ್ಟ್' ಹತ್ಯೆ | ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿ ನಡೆದ ಉತ್ತರಾಖಂಡ್ ಬಂದ್ಗೆ ಮಿಶ್ರ ಪ್ರತಿಕ್ರಿಯೆ
ಟ್ವಿಟರ್ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳ ಪ್ರಸರಣಕ್ಕೆ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಟ್ವಿಟರ್ನಲ್ಲಿ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಡಿಯೋಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಟ್ವಿಟರ್ಗೆ ನೀಡುವ ಜಾಹೀರಾತುಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿವೆ.