ಟ್ವಿಟರ್‌ ಪೋಸ್ಟ್‌ ಡಿಲೀಟ್‌ ಬೇಡಿಕೆಯಲ್ಲಿ ರಷ್ಯಾ, ಟರ್ಕಿಯನ್ನು ಮೀರಿಸಿದ ಭಾರತ

  • ಟ್ವಿಟರ್‌ ಪೋಸ್ಟ್‌ ತೆಗೆದುಹಾಕುವಂತೆ ಅತಿಹೆಚ್ಚು ʻಕಾನೂನು ಮನವಿʼ ಮಾಡುತ್ತಿರುವ ಭಾರತ
  • 2021ರ ಜುಲೈನಿಂದ ಡಿಸೆಂಬರ್‌ವರೆಗೆ ಸುಮಾರು 326 ʻಕಾನೂನು ಮನವಿʼ ಸ್ವೀಕರಿಸಿರುವ ಟ್ವಿಟರ್‌

2021ರ ಜುಲೈ- ಡಿಸೆಂಬರ್‌ವರಿಗಿನ ಅವಧಿಯಲ್ಲಿ ಟ್ವಿಟರ್‌ನಲ್ಲಿ ಸುದ್ದಿವಾಹಿನಿಗಳು ಮತ್ತು ಬ್ಲೂ ಟಿಕ್‌ ಹೊಂದಿರುವ ಪತ್ರಕರ್ತರು ಪೋಸ್ಟ್‌ ಮಾಡಿದ ವಿಷಯವನ್ನು ತೆಗೆದುಹಾಕುವಂತೆ, ಭಾರತವು ಜಾಗತಿಕವಾಗಿ ಅತಿ ಹೆಚ್ಚು ಕಾನೂನು ಬೇಡಿಕೆ ಮುಂದಿಟ್ಟಿದೆ ಎಂದು ಟ್ವಿಟರ್‌ ತಿಳಿಸಿದೆ. 

ಟ್ವಿಟರ್‌ ಪಾರದರ್ಶಕ ವರದಿಯ ಪ್ರಕಾರ, ಪೋಸ್ಟ್‌ ಮಾಡಿದ ವಿಷಯವನ್ನು ತೆಗೆದುಹಾಕುವಂತೆ ಒಟ್ಟು ಬೇಡಿಕೆ ಇಟ್ಟ ದೇಶಗಳ ಪೈಕಿ ಭಾರತವು ಅತಿ ಹೆಚ್ಚು ಅಂದರೆ ಶೇ. 19ರಷ್ಟು ಮನವಿಗಳನ್ನು ಮಾಡಿದೆ. ಉಳಿದಂತೆ ಟ್ವಿಟರ್‌ ಖಾತೆಯ ಮಾಹಿತಿ ಹುಡುಕುವಲ್ಲಿ, ಭಾರತವು ಅಮೆರಿಕದ ನಂತರದ ಸ್ಥಾನದಲ್ಲಿದೆ.

2021ರ ಜುಲೈ- ಡಿಸೆಂಬರ್‌ ನಡುವೆ ಟ್ವಿಟರ್‌ನಲ್ಲಿ ವಿಷಯ ನಿರ್ಬಂಧಿಸುವ ಆದೇಶಗಳನ್ನು ನೀಡಿದ ಪ್ರಮುಖ ಐದು ದೇಶಗಳಲ್ಲಿ ಭಾರತವೂ ಸೇರಿದೆ. ಟ್ವಿಟರ್‌ನ ಪ್ರಕಾರ, ವಿಶ್ವದಾದ್ಯಂತ 349 ಸುದ್ದಿ ಸಂಸ್ಥೆಗಳು ಮತ್ತು ಪತ್ರಕರ್ತರ ಖಾತೆಗಳಿಂದ ಪೋಸ್ಟ್‌ ಅಳಿಸಿ ಹಾಕಲು ಸುಮಾರು 326 ಕಾನೂನು ಬೇಡಿಕೆಗಳು ಬಂದಿದ್ದವು. ಈ ಸಂಖ್ಯೆಯು ಹಿಂದಿನ ಅವಧಿಗಿಂತ (ಜನವರಿ- ಜೂನ್‌) ಶೇ. 103ರಷ್ಟು ಹೆಚ್ಚು.

ಭಾರತವು 114 ಬೇಡಿಕೆಗಳನ್ನು ಮುಂದಿಟ್ಟಿದ್ದರೆ, ಟರ್ಕಿ (78), ರಷ್ಯಾ (55), ಮತ್ತು ಪಾಕಿಸ್ತಾನ (48) ಬೇಡಿಕೆಗಳನ್ನು ಮುಂದಿಟ್ಟಿವೆ. ಜುಲೈ- ಡಿಸೆಂಬರ್‌ ಮಾತ್ರವಲ್ಲದೇ, ಜನವರಿ- ಜೂನ್‌ ಅವಧಿಯಲ್ಲಿಯೂ ಭಾರತವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಈ ಸುದ್ದಿ ಓದಿದ್ದೀರಾ?: ಮಗುವಿಗೆ ಮಲತಂದೆಯ ಹೆಸರು ಬಳಸುವುದು ತಾಯಿಯ ಹಕ್ಕು: ಸುಪ್ರೀಂ ಕೋರ್ಟ್

2021 ರ ಜನವರಿ- ಜೂನ್‌ನಲ್ಲಿ ಭಾರತವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಅವಧಿಯಲ್ಲಿ ಟ್ವಿಟರ್‌ ಜಾಗತಿಕ ಮಟ್ಟದಲ್ಲಿ 231 ಬೇಡಿಕೆಗಳನ್ನು ಬಂದಿದ್ದರೆ ಅದರಲ್ಲಿ 89 ಮನವಿಗಳು ಭಾರತದ್ದೇ ಆಗಿವೆ.

ಈ ʻಕಾನೂನು ಬೇಡಿಕೆಗಳುʼ ಸರ್ಕಾರಿ ಸಂಸ್ಥೆಗಳು ಮತ್ತು  ವ್ಯಕ್ತಿಗಳನ್ನು ಪ್ರತಿನಿಧಿಸುವ ವಕೀಲರಿಂದ ಟ್ವೀಟ್‌ ಅನ್ನು ಅಳಿಸಿ ಹಾಕುವಂತೆ ನ್ಯಾಯಾಲಯದ ಆದೇಶಗಳನ್ನು ಒಳಗೊಂಡಿರುತ್ತವೆ ಎಂದು ಟ್ವಿಟರ್‌ ಹೇಳಿದೆ.

ಅಪ್ರಾಪ್ತ ವಯಸ್ಕರೊಬ್ಬರ ವೈಯಕ್ತಿಕ ವಿಷಯ ಒಳಗೊಂಡಿದ್ದ ಪೋಸ್ಟ್‌ ಒಂದನ್ನು ತೆಗೆದುಹಾಕುವಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗದಿಂದ ʻಕಾನೂನು ಮನವಿʼಯನ್ನು ಸ್ವೀಕರಿಸಿದ್ದೆವು ಎಂದು ಟ್ವಿಟರ್‌ ತಿಳಿಸಿದೆ. 

ಬಳಕೆದಾರರ ಖಾತೆ ಮಾಹಿತಿ ಕೇಳುವ ರಾಷ್ಟ್ರಗಳು

ಟ್ವಿಟರ್‌ ಬಳಕೆದಾರರ ಖಾತೆ ಮಾಹಿತಿಯನ್ನು ಒದಗಿಸುವಂತೆ ಕೋರಿ ಅತಿ ಹೆಚ್ಚು ʻಕಾನೂನು ವಿನಂತಿʼಗಳು ಅಮೆರಿಕ ಮತ್ತು ಭಾರತ ಸರ್ಕಾರದಿಂದ ಸ್ವೀಕರಿಸಿದ್ದೇವೆ ಎಂದು ಕಂಪನಿ ಹೇಳಿದೆ.

ಜುಲೈ- ಡಿಸೆಂಬರ್‌ ಅವಧಿಯಲ್ಲಿ ಅಮೆರಿಕವು ಅತಿ ಹೆಚ್ಚು ಖಾತೆ ಮಾಹಿತಿ ವಿನಂತಿಗಳನ್ನು ಸಲ್ಲಿಸಿದೆ. ಜಾಗತಿಕವಾಗಿ ಶೇ. 20ರಷ್ಟು ಬಳಕೆದಾರರ ಮಾಹಿತಿ  ಬೇಡಿಕೆ ಅಮೆರಿಕವೊಂದರಿಂದ ಬಂದಿದೆ. ಉಳಿದಂತೆ ಭಾರತವು ಶೇ. 19ರಷ್ಟು ಬಳಕೆದಾರರ ಮಾಹಿತಿಯನ್ನು ಕೇಳಿದೆ.

ಬಳಕೆದಾರರ ಮಾಹಿತಿಯನ್ನು ಕೋರಿದ ಐದು ರಾಷ್ಟ್ರಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದ್ದರೆ, ಜಪಾನ್‌, ಫ್ರಾನ್ಸ್‌, ಜರ್ಮಿನಿ ನಂತರದ ಸ್ಥಾನದಲ್ಲಿವೆ.

ನಿಮಗೆ ಏನು ಅನ್ನಿಸ್ತು?
1 ವೋಟ್